ADVERTISEMENT

ಹುಣಸೆಹಣ್ಣಿಗೆ ಬೇಡಿಕೆ; ರೈತರಿಗೆ ಸಂತಸ

ಉತ್ಪಾದನೆ ಪ್ರಮಾಣ ಕುಸಿದರೂ ಗಗನಕ್ಕೇರಿದ ಬೆಲೆ; ಸುಗ್ಗಿ ಮುಗಿದರೂ ಮುಂದುವರಿದ ಬೀಜ ಬಿಡಿಸುವ ಕಾಯಕ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 6:23 IST
Last Updated 18 ಏಪ್ರಿಲ್ 2018, 6:23 IST

ಶಿಡ್ಲಘಟ್ಟ: ಅಡುಗೆಯ ರುಚಿ ಹೆಚ್ಚಿಸಲು ಹುಣಸೆ ಹಣ್ಣು ಬೇಕು. ಆದರೆ ಅದಕ್ಕೆ ಬೆಲೆ ಇರಲಿಲ್ಲ. ಈ ಬಾರಿ ಹಣ್ಣಿಗೆ ಊಹೆಗೂ ಮೀರಿದ ಉತ್ತಮ ಬೆಲೆ ಬಂದಿದೆ. ಇಳುವರಿ ಸ್ವಲ್ಪ ಕಡಿಮೆಯಾದರೂ ಬೆಲೆ ಚೆನ್ನಾಗಿದ್ದು ನಷ್ಟ ಸರಿದೂಗಿಸಿದೆ. ಬೆಳೆಗಾರರಲ್ಲೂ ಸಂತಸ ನೆಲೆಮಾಡಿದೆ.

ಬೀಜ ತೆಗೆದ ಒಂದು ಕೆ.ಜಿ ಹೂಹಣ್ಣಿಗೆ ₹ 170. ಬೀಜ ತೆಗೆಯದ ಕೋಲುಕಾಯಿಗೆ ₹ 70ರ ವರೆಗೆ ಮಾರಾಟವಾಗುತ್ತದೆ. ಗುಣಮಟ್ಟದ ಆಧಾರದ ಮೇಲೆ ಹಣ್ಣಿನ ಬೆಲೆ ವ್ಯತ್ಯಾಸವಾಗುತ್ತದೆ. ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶಾರದಮ್ಮ ಒಂಬತ್ತು ಹುಣಸೆ ಮರಗಳನ್ನು ಹೊಂದಿದ್ದು, ಈ ಬಾರಿ ₹ 36 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಅಲ್ಲದೆ ಮನೆ ಬಳಕೆಗೆ ಬೇಕಾಗುವಷ್ಟನ್ನು ಉಳಿಸಿಕೊಂಡಿದ್ದಾರೆ.

ತಾವೇ ಸ್ವತಃ ಸಿಪ್ಪೆ ಬಿಡಿಸಿ, ಬೀಜ ಬೇರ್ಪಡಿಸಿ ಪೆಂಡೆ ಕಟ್ಟಿಡುವ ಶಾರದಮ್ಮ, ಈ ಬಾರಿ ಉತ್ತಮ ಬೆಳೆ ಹಾಗೂ ಬೆಲೆ ಬಂದಿರುವುದು ನೆಮ್ಮದಿ ತಂದಿದೆ ಎನ್ನುತ್ತಾರೆ.

ADVERTISEMENT

ಹುಣಸೆ ಮರಗಳನ್ನು ಹೊಂದಿರುವ ಕೆಲವರು ತಾವೇ ಹಣ್ಣು ಉದುರಿಸಿ, ಬೀಜ ಬೇರ್ಪಡಿಸಿ ಮಾರುವರು. ಇನ್ನು ಕೆಲವರು ಕೂಲಿಯಾಳು, ಕಾವಲು ಸಮಸ್ಯೆಯಿಂದ ಮರದಲ್ಲಿರುವ ಬೆಳೆಯನ್ನು ವ್ಯಾಪಾರಸ್ಥರಿಗೆ ಸಗಟಾಗಿ ಮಾರುವರು. ಪ್ರಸ್ತುತ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 4ರಿಂದ 6 ಸಾವಿರದ ವರೆಗೆ ಬೆಲೆ ನೀಡಿ ರೈತರಿಂದ ಖರೀದಿಸುತ್ತಿದ್ದಾರೆ.

ಹಿಂದೆ ಹಣ್ಣು ಖರೀದಿಸುವರ ಸಂಖ್ಯೆ ಕಡಿಮೆ ಇತ್ತು. ಹೊರ ರಾಜ್ಯಗಳ ವ್ಯಾಪಾರಸ್ಥರು ಖರೀದಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಹುಣಸೆ ಹಣ್ಣನ್ನು ರೈತರೇ ಸಂತೆಗೆ ಒಯ್ಯುತ್ತಿದ್ದರು. ಕೆಲವರಷ್ಟೇ ಹಳ್ಳಿಗಳಲ್ಲಿ ಖರೀದಿಗೆ ಬರುತ್ತಿದ್ದರು. ಈಗ ವ್ಯಾಪಾರಸ್ಥರು ಮನೆ ಬಾಗಿಲಿಗೆ ಬಂದು, ಉತ್ತಮ ಬೆಲೆಯ ಆಮಿಷ ಒಡ್ಡಿದರೂ ರೈತರಲ್ಲಿ ಹುಣಸೆ ಹಣ್ಣು ಲಭ್ಯವಿಲ್ಲ.

ಇಳುವರಿ ಕುಂಠಿತ: ಅಕಾಲಿಕವಾಗಿ ಮಳೆ ಕಾರಣ ಹುಣಸೆ ಹೂವು ಉದುರಿತು. ಹೀಗಾಗಿ 10 ರಿಂದ 15 ಕ್ವಿಂಟಲ್‌ನಷ್ಟು ಹಣ್ಣು ಬಿಡುತ್ತಿದ್ದ ಮರದಲ್ಲಿ ಈ ಬಾರಿ 3ರಿಂದ 4 ಕ್ವಿಂಟಲ್‌ ಹಣ್ಣು ಸಿಕ್ಕಿದೆ. ಮೊದಲಿನಂತೆ ಇಳುವರಿ ಬಂದಿದ್ದರೆ ಲಕ್ಷಾಂತರ ರೂಪಾಯಿ ಸಿಗುತ್ತಿತ್ತು. ಆದರೆ, ಬೆಲೆ ಬಂದಾಗ ಇಳುವರಿ ಇಲ್ಲ. ಇಳುವರಿ ಇದ್ದಾಗ ಬೆಳೆಯಿಲ್ಲ. ರೈತರಿಗೆ ಇಂತಹ ನಿರಾಸೆ ಸಾಮಾನ್ಯ ಎನ್ನುತ್ತಾರೆ ರೈತ ಹನುಮಪ್ಪ.

ಮರಗಳಿಗೆ ಕೊಡಲಿ: ಕಚ್ಚಾ ರೇಷ್ಮೆ ಉತ್ಪಾದಕರಿಗೆ ಹುಣಸೆ ಸೌದೆ ಬೇಕು. ಹುಣಸೆ ಸೌದೆಯಲ್ಲಿ ಮೂರು ಮುಖ್ಯ ಗುಣಗಳಿವೆ. ಹೆಚ್ಚು ಶಾಖ, ಹೊಗೆರಹಿತ ಮತ್ತು ನಿಗಿನಿಗಿ ಕೆಂಡದ ಉತ್ಪಾದನೆ ಇರುತ್ತದೆ.

ರಾಟೆಯಲ್ಲಿ ಸುತ್ತಿಕೊಳ್ಳುವ ರೇಷ್ಮೆಯನ್ನು ಒಣಗಿಸಲು ಅಡಿಯಲ್ಲಿ ಕೆಂಡ ಹಾಸಿಡಬೇಕು. ಉತ್ತಮ ಹೊಗೆರಹಿತ ಕೆಂಡ ಸಿಗುವುದು ಹುಣಸೆಯಲ್ಲಿ ಮಾತ್ರ. ಶಿಡ್ಲಘಟ್ಟದ ರೇಷ್ಮೆ ತಯಾರಿಕಾ ಘಟಕಗಳಲ್ಲಿ ಬೆಳಿಗ್ಗೆ ಒಲೆ ಉರಿಯಲೇ ಬೇಕು. ಹಾಗಾಗಿ ಪ್ರತಿದಿನ 250ರಿಂದ 300 ಟನ್ ಹುಣಸೆ ಸೌದೆಯ ಅಗತ್ಯವಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಒಂದು ಟನ್ ಹುಣಸೆ ಸೌದೆ ಬಳಸಿ 75ರಿಂದ 80 ಕೆಜಿ ರೇಷ್ಮೆ ಉತ್ಪಾದಿಸಬಹುದು. ನಾಲ್ಕು ಟೇಬಲ್ ಇರುವ ರೇಷ್ಮೆ ಘಟಕಕ್ಕೆ ವಾರಕ್ಕೆ ಒಂದು ಟನ್ ಹುಣಸೆ ಸೌದೆ ಬಳಕೆಯಾಗುತ್ತದೆ. ಶಿಡ್ಲಘಟ್ಟದಲ್ಲಿ ರೇಷ್ಮೆಗೆ ಸೌದೆಯ ಅಗತ್ಯ ಇರುವುದರಿಂದ ಅನೇಕ ಹುಣಸೆ ತೋಪುಗಳು ಖಾಲಿಯಾಗಿವೆ. ಹಾಗಾಗಿಯೇ ಹುಣಸೆ ಹಣ್ಣು ಬೆಲೆಯೂ ಹೆಚ್ಚಿದೆ.

‘ಹುಣಸೆ ಸೌದೆ ಇಲ್ಲವಾದರೆ ಶಿಡ್ಲಘಟ್ಟದಲ್ಲಿ ರೇಷ್ಮೆ ತಯಾರಾಗದು. ಲಕ್ಷಾಂತರ ಮಂದಿ ಬೀದಿಗೆ ಬರಬೇಕಾಗುತ್ತದೆ. ಇದರ ಪರಿಣಾಮ ಊಹಿಸಲೂ ಅಸಾಧ್ಯ’ ಎನ್ನುತ್ತಾರೆ ರೀಲರ್ ಸಾದಿಕ್‌ ಪಾಷ.

ಕೆಲವರು ಹಣದ ತುರ್ತು ಅಗತ್ಯಗಳಿಗೆ ಹುಣಸೆ ಮರಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಮರಗಳ ಪ್ರಮಾಣ ಕಡಿಮೆಯಾಗಿದೆ. ಹುಣಸೆ ಹಣ್ಣು ಉತ್ಪಾದನೆ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಹುಣಸೆ ಹಣ್ಣಿಗೆ ಬೇಡಿಕೆ ಕುದುರಿದೆ ಎಂದು ರೈತ ಮಂಜುನಾಥ್‌ ತಿಳಿಸಿದರು.

ತಪ್ಪು ಮಾಡಿದೆವು: ‘ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಹುಣಸೆ ಮರಗಳಲ್ಲಿ ಫಲ ತೆಗೆದುಕೊಳ್ಳಲು ಒಂದರಿಂದ ಐದು ವರ್ಷಗಳವರೆಗೆ ಗುತ್ತಿಗೆ ನೀಡುವ ಪರಿಪಾಠವಿದೆ. ಅದರಂತೆ ರೈತರು ಐದು ವರ್ಷಗಳವರೆಗೆ ಮರಗಳನ್ನು ವ್ಯಾಪಾರಸ್ಥರಿಗೆ ಗುತ್ತಿಗೆಗೆ ನೀಡಿದ್ದಾರೆ. ಈ ಬಾರಿ ಹುಣಸೆ ಹಣ್ಣು ಕಡಿಮೆ ಇದ್ದರೂ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಸಿಗುತ್ತಿದೆ. ಹೀಗಾಗಿ ಹುಣಸೆ ಮರಗಳನ್ನು ಗುತ್ತಿಗೆ ಕೊಟ್ಟು ತಪ್ಪು ಮಾಡಿದೆವು’ ಎಂದು ಕೆಲವು ರೈತರು ಬೇಸರ ವ್ಯಕ್ತಪಡಿಸಿದರು.

**

‘ಹುಣಸೆ ಮುಪ್ಪಾದರೂ ಹುಳಿ ಮುಪ್ಪಲ್ಲ’ ಎಂಬುದು ಗಾದೆ. ಆದರೆ ಈಗ ಅದು ನಂಬಿದವರ ಅದೃಷ್ಟದ ವೃಕ್ಷ. ಸದ್ಯಕ್ಕಂತೂ ರೈತರ ಕೈ ಹಿಡಿದು ರಕ್ಷಿಸುತ್ತದೆ  – ಹನುಮಪ್ಪ, ರೈತ.

**

ಡಿ.ಜಿ.ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.