ADVERTISEMENT

‘ತುಳುವರ ಭಾಷಾಪ್ರೇಮ ಇತರರಿಗೆ ಮಾದರಿ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:53 IST
Last Updated 21 ಏಪ್ರಿಲ್ 2014, 8:53 IST

ಕೊಪ್ಪ: ಭಾಷೆಯನ್ನು ಬೆಳೆಸುವಲ್ಲಿ ಅಗ್ರಗಣ್ಯರಾಗಿರುವ ತುಳುವರ ಭಾಷಾ­ಪ್ರೇಮ ಇತರ ಭಾಷಿಕರಿಗೆ ಮಾದರಿ­ಯಾಗಿದೆ ಎಂದು ಸಿದ್ಧರಮಠದ ಸಿದ್ಧೇ­ಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಎಂ.ಸಿ.ಸತೀಶ್‌ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ  ಸಿದ್ಧರಮಠ ಮತ್ತು ಕೆಸವೆ ವ್ಯಾಪ್ತಿಯ ತುಳು ಭಾಷಿಗರು ರಚಿಸಿಕೊಂಡಿರುವ ‘ತುಳುಕೂಟ’ವನ್ನು ಪತ್ನಿ ಜಯಶ್ರೀ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಬಳಕೆಯಿಂದ ಮಾತ್ರ ಭಾಷೆ ಉಳಿದು, ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಕನ್ನಡ­ಕ್ಕಿಂತಲೂ ತುಳುವರಲ್ಲಿ ಭಾಷಾ­ಪ್ರೇಮ ಹೆಚ್ಚಿದ್ದು, ಲಿಪಿಯಿಲ್ಲದಿದ್ದರೂ ತುಳು­ಭಾಷೆ ಸಮೃದ್ಧವಾಗಿ ಬೆಳೆದಿದೆ ಎಂದರು.

ಸ್ವಾತಂತ್ರ್ಯಪೂರ್ವದಲ್ಲಿ ಕಾಣಿಸಿ­ಕೊಂಡ ಪ್ಲೇಗ್ ಮಾರಿಗೆ ತುತ್ತಾಗಿ ಮಲೆನಾಡಿನಲ್ಲಿ ಜನಸಂಖ್ಯೆ ಕ್ಷೀಣಿಸಿದಾಗ ಕೃಷಿ ಕಾರ್ಯಕ್ಕೆ ತೊಡಕುಂಟಾಗಿತ್ತು. ಆಗ ದಕ್ಷಿಣ ಕನ್ನಡದಿಂದ ಉದ್ಯೋಗ ಅರಸಿ ಬಂದ ತುಳುವರು ಕೃಷಿ ಕಾರ್ಯ­ದಲ್ಲಿ ನಮಗೆ ಸಹಕರಿಸುವ ಜೊತೆಗೆ ನಂಬಿಕೆ, ವಿಶ್ವಾಸದ ಗುಣದಿಂದಾಗಿ ನಮ್ಮವರಾಗಿಯೇ ಉಳಿದರು. ನಮ್ಮನ್ನು ಬೆಳೆಸಿ, ತಾವೂ ಬೆಳೆದು ಮಲೆನಾಡಿನ ಸಂಸ್ಕೃತಿಯೊಂದಿಗೆ ಮಿಳಿತಗೊಂಡರೂ ಹುಟ್ಟೂರಿನ ತುಳು ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ತುಳುವರು ಸಾಹಸ ಪೃವೃತ್ತಿಯವರಾಗಿದ್ದು, ಎಲ್ಲಿ ಹೋದರೂ ಬದುಕಬಲ್ಲಂತಹ ಛಾತಿ ಹೊಂದಿದ್ದಾರೆ’ ಎಂದರು.

ಮಾಜಿ ಜಿ.ಪಂ. ಅಧ್ಯಕ್ಷ ಎಚ್.ಎಂ.­ಸತೀಶ್ ಮಾತನಾಡಿ, ‘ಕೋಟಿ­ಚೆನ್ನಯರು, ಅಬ್ಬಗದಾರಗರ ಆದರ್ಶ­ದಲ್ಲಿ ಬೆಳೆದ ತುಳುನಾಡಿನ ಜನ ನಂಬಿಕೆಗೆ ಹೆಸರಾಗಿದ್ದು, ಮಲೆನಾಡಿನ ಜನ ಪ್ರೀತಿಯಂದ ಕಂಡು ರಕ್ಷಣೆ ನೀಡಿದ್ದರಿಂದಾಗಿ ನಾವಿಲ್ಲಿ ನೆಲೆಯೂ­ರಲು ಸಾಧ್ಯವಾಯಿತು.

ಮೂರು ಬಾರಿ ನಾನು ಜಿಲ್ಲಾ ಪಂಚಾಯಿತಿ ಚುನಾ­ವಣೆಯಲ್ಲಿ ಗೆದ್ದು, ಅದರ ಅಧ್ಯಕ್ಷ­ನಾಗಲು ಮಲೆನಾಡಿಗರು ತೋರಿದ ಔದಾಯರ್ವೇ ಕಾರಣ. ಈ ಭಾಗದಲ್ಲಿ ತುಳುನಾಡಿಗರಿಗೆ ಶಕ್ತಿತುಂಬಿದ್ದ ವಿಜಯ ಅಜಿಲರ ನೆನಪಿನಲ್ಲಿ ನಿರ್ಮಾಣ­ಗೊಳ್ಳುತ್ತಿರುವ ಬಂಟರಭವನ, ಆರ್ಯ ಈಡಿಗರ, ಬಿಲ್ಲವರ ಸಮುದಾಯಭವನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ­ಬೇಕು. ಅವುಗಳ ಆದಾಯದಲ್ಲಿ ಬಡವರಿಗೆ ನೆರವು, ಶಿಕ್ಷಣಕ್ಕೆ ಪ್ರೋತ್ಸಾಹ­ದಂತಹ ಮಾದರಿ ಯೋಜನೆ ರೂಪಿಸುವ ಮೂಲಕ ಸಮುದಾಯದ ಅಭಿವೃದ್ಧಿ ಶ್ರಮಿಸುವ ಅಗತ್ಯವಿದೆ’ ಎಂದರು.

ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಮಾತನಾಡಿ, ತುಳುಕೂಟ ರಚಿಸುವಲ್ಲಿ ರಾಜಕೀಯ ಉದ್ದೇಶವಿಲ್ಲ, ಜಾತೀಯತೆ­ಯಿಲ್ಲ. ವರದಕ್ಷಿಣೆ ನಿರ್ಮೂಲನೆ, ಬಡವರಿಗೆ ನರವಾಗುವ ಮೂಲಕ ಸಮಾಜ ಸುಧಾರಣೆಯ ಗುರಿ ಹೊಂದಿದ್ದು, ಈಗಾಗಲೇ 600 ಸದಸ್ಯರು ಸೇರ್ಪಡೆಗೊಂಡಿದ್ದಾರೆಂದರು.

ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್, ಭದ್ರಾವತಿ ತುಳು ಕೂಟದ ಅಧ್ಯಕ್ಷ ಡಾ. ಕರುಣಾಕರ್ ಶೆಟ್ಟಿ, ಕೊಪ್ಪದ ಡಾ. ಮೋಹನ್ ಬಿ.ಎಸ್.­ಶೆಟ್ಟಿ, ಮುಂಬೈನ ಉದ್ಯಮಿ ಜಯ ಆರ್.ಶೆಟ್ಟಿ ಮಾತನಾಡಿ ತುಳುಕೂಟಕ್ಕೆ ಶುಭ ಹಾರೈಸಿದರು.  ಸಾಗರದ ಮಹಮ್ಮದ್ ಇಕ್ಬಾಲ್,  ಕರಿಗೆರಸಿ ನಾಗೇಶ ಗೌಡ, ಗೋಪಾಲ್ ಶೆಟ್ಟಿ, ರತ್ನಾಕರ ಶೆಟ್ಟಿ, ಗುರುಪ್ರಸಾದ್ ಮುಂತಾ­ದವ­ರಿದ್ದರು. ಗ್ರಾಮದಲ್ಲಿ ಹೆರಿಗೆ ಮತ್ತು ಜಾನುವಾರು ಔಷಧಿ ನೀಡುವ ಸೇವೆಗಾಗಿ ಚೌಕಿಯ ಶಾರ­ದಮ್ಮ ಮತ್ತು ನೀಲಯ್ಯ ಪೂಜಾರಿ­ಯವರನ್ನು ಸನ್ಮಾನಿಸಲಾಯಿತು. ಶ್ರೀನಿಧಿ ಸಂಗಡಿಗರು ಪ್ರಾರ್ಥಿಸಿದರು. ಅಮೃತಾ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ಮತ್ತು ಸಹನ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯ­ಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.