ADVERTISEMENT

30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

ಪರೀಕ್ಷಾ ಕೇಂದ್ರಗಳಲ್ಲಿ ಭರದಿಂದ ಸಾಗಿದ ಪೂರ್ವ ಸಿದ್ಧತೆಗಳು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:54 IST
Last Updated 24 ಮಾರ್ಚ್ 2017, 4:54 IST

ಚಿಂತಾಮಣಿ: ಮಾರ್ಚ್‌ 30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಏಪ್ರಿಲ್‌ 12ರ ವರೆಗೆ ನಡೆಯುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಪರೀಕ್ಷೆಯಲ್ಲಿ ನಕಲು ತಡೆಯುವ ಸಲುವಾಗಿ ಈ ವರ್ಷ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.

ಕ್ಲಸ್ಟರ್‌ ಪದ್ಧತಿ: ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕ್ಲಸ್ಟರ್‌ ಪರೀಕ್ಷಾ ಕೇಂದ್ರಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಈವರೆಗೂ ಇದ್ದ ಕೆಲವು ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ತಾಲ್ಲೂಕಿನಲ್ಲಿ 3 ಕೇಂದ್ರಗಳನ್ನು ಕಡಿಮೆ ಮಾಡಲಾಗಿದೆ. ಆಯಾ ಶಾಲೆಗೆ ಮಾತ್ರ ಸೀಮಿತವಾಗಿದ್ದ ಪರೀಕ್ಷಾ ಕೇಂದ್ರಗಳನ್ನು ತೆಗೆಯಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಉತ್ತರ ಪತ್ರಿಕೆ ಮಾದರಿ ಬದಲು: ಪರೀಕ್ಷಾ ಮಂಡಳಿ ಈ ವರ್ಷ ಉತ್ತರ ಪತ್ರಿಕೆಯ ಮಾದರಿಯನ್ನು ಬದಲಾಯಿಸಿದೆ. ಹಿಂದಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆಯಲ್ಲೇ ಉತ್ತರ ಬರೆಯಲು  ಸ್ಥಳವನ್ನು ನೀಡಲಾಗುತ್ತಿತ್ತು. ಆ ಸ್ಥಳದಲ್ಲಿ ಮಾತ್ರ ಉತ್ತರ ಬರೆಯಬೇಕಾಗಿತ್ತು. ಉತ್ತರ ಬರೆದು ವಾಪಸ್‌ ನೀಡಬೇಕಿತ್ತು. ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ.

ಈ ವರ್ಷ ಪ್ರಶ್ನೆ ಪತ್ರಿಕೆಯಿಂದ ಉತ್ತರ ಪತ್ರಿಕೆಯನ್ನು ಬೇರ್ಪಡಿಸಲಾಗಿದೆ. ಉತ್ತರಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಹಿಂದಿನ ಪ್ರಶ್ನೆಪತ್ರಿಕೆಯಲ್ಲಿ ತಪ್ಪಾದ ಉತ್ತರವನ್ನು ಒಡೆದು ಹಾಕಿ ಮತ್ತೆ ಬರೆಯಲು ಅವಕಾಶವಿರಲಿಲ್ಲ. ಈ ಬಾರಿ ತಪ್ಪಾದ ಉತ್ತರವನ್ನು ಒಡೆದು ಮತ್ತೊಂದು ಕಡೆ ಸರಿ ಉತ್ತರವನ್ನು ಬರೆಯಬಹುದು. ವಿದ್ಯಾರ್ಥಿಗಳು ಉತ್ತರಪತ್ರಿಕೆಯನ್ನು ನೀಡಿ ಪ್ರಶ್ನೆಪತ್ರಿಕೆಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಪ್ರಸಕ್ತ ಸಾಲಿನಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ 4,125 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಳೆದ ವರ್ಷ 16 ಪರೀಕ್ಷಾ ಕೇಂದ್ರಗಳಿದ್ದವು. ಈ ವರ್ಷ 13 ಕೇಂದ್ರಗಳಿವೆ. ಒಂದು ಕ್ಲಸ್ಟರ್‌ ಕೇಂದ್ರಕ್ಕೆ ನಗರ ಪ್ರದೇಶಗಳಲ್ಲಿ 8–10, ಗ್ರಾಮೀಣ ಪ್ರದೇಶಗಳಲ್ಲಿ 2–3 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ಆರಂಭವಾದ ಅರ್ಧ ಗಂಟೆಯ ಒಳಗೆ ಪರೀಕ್ಷೆಗೆ ಹಾಜರಾಗಲು ಇದ್ದ ಅವಕಾಶವನ್ನು ಈ ವರ್ಷದಿಂದ ತೆಗೆದುಹಾಕಲಾಗಿದೆ. ಪ್ರಶ್ನೆಪತ್ರಿಕೆ ಪಾಕೆಟ್‌ ಒಡೆದ ಬಳಿಕ ಯಾವ ವಿದ್ಯಾರ್ಥಿಯೂ ಪರೀಕ್ಷಾ ಕೇಂದ್ರಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಈ ವರ್ಷ ಪರೀಕ್ಷೆಯ ಆರಂಭದ ಅರ್ಧ ಗಂಟೆ ಮುಂಚಿತವಾಗಿಯೇ ಬೆಲ್‌ ಮಾಡಲಾಗುವುದು.

9.15ಕ್ಕೆ ವಿದ್ಯಾರ್ಥಿಗಳ ಹಾಜರಾತಿಯನ್ನು ಪಡೆಯಲಾಗುವುದು. 9.25ಕ್ಕೆ ಕೊಠಡಿ ಮೇಲ್ವಿಚಾರಕರಿಗೆ ಪ್ರಶ್ನೆಪತ್ರಿಕೆಗಳ ಪಾಕೆಟ್‌ಗಳನ್ನು ನೀಡಲಾಗುತ್ತದೆ.  ಪರೀಕ್ಷೆ ಆರಂಭಕ್ಕೆ 5 ನಿಮಿಷ ಇರುವಾಗ ಪರೀಕ್ಷಾ ಕೇಂದ್ರದಲ್ಲಿರುವ ವಿದ್ಯಾರ್ಥಿಗಳ ಸಾಕ್ಷಿ ಪಡೆದು ಪಾಕೆಟ್‌ಗಳನ್ನು ಒಡೆಯಲಾಗುತ್ತದೆ. 9.30ಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲಾಗುತ್ತದೆ. ನಂತರ ಪರೀಕ್ಷಾ ಕೇಂದ್ರದೊಳಗೆ ಬರಲು ಯಾರಿಗೂ ಅವಕಾಶ ಇಲ್ಲವಾಗಿದೆ.

ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು 3 ಮಾರ್ಗಗಳನ್ನು ರೂಪಿಸಲಾಗಿದೆ. ಒಟ್ಟು 13 ಕಸ್ಟೋಡಿಯನ್‌, 13 ಜನ ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನು ಹಾಗೂ ವಿದ್ಯಾರ್ಥಿಗಳ ಸಂಖ್ಯೆ 350ಕ್ಕಿಂತ ಹೆಚ್ಚಿರುವ 5 ಕೇಂದ್ರಗಳಿಗೆ 5 ಉಪ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್‌ ಖಲೀಲ್‌ ತಿಳಿಸಿದರು.
–ಎಂ.ರಾಮಕೃಷ್ಣಪ್ಪ

ಸುಧಾರಣೆ ವಿಶ್ವಾಸ
ಕಳೆದ ವರ್ಷ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿರುವ ಶಾಲೆಗಳ ಫಲಿತಾಂಶವನ್ನು ಸುಧಾರಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಕರಿಗೆ ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ವಿಷಯವಾರು ಕಾರ್ಯಾಗಾರಗಳನ್ನು ನಡೆಸಲಾಗಿದೆ.

ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು, ದತ್ತು ಯೋಜನೆ, ಗುಂಪು ಚರ್ಚೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುವುದರಿಂದ ಫಲಿತಾಂಶವು ಸುಧಾರಣೆಯಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್‌ ಖಲೀಲ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.