ADVERTISEMENT

ಬೇಡಿಕೆ ಈಡೇರಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಉತ್ತರ

ಬಲಿಜ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 6:34 IST
Last Updated 1 ಜನವರಿ 2018, 6:34 IST
ಬಲಿಜ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ
ಬಲಿಜ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ   

ಬಾಗೇಪಲ್ಲಿ: ‘ಬಲಿಜ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಒಂದು ತಿಂಗಳಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದು ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್‌ ತಿಳಿಸಿದರು.

ಪಟ್ಟಣ ಹೊರವಲಯದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಭಾನುವಾರ ಆಯೋಜಿಸಿದ್ದ ಬಲಿಜ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಬಲಿಜ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ಹಿಂದಿನಿಂದಲೂ ಇತ್ತು. ಆದರೆ ಯಾವುದೇ ಕಾರಣವಿಲ್ಲದೆ 1994 ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಈ ಸಮುದಾಯವನ್ನು ಪ್ರವರ್ಗ ‘2ಎ’ಯಿಂದ ‘3ಎ’ಗೆ ಸೇರಿಸಿತು. ಅಂದಿನಿಂದ ಬಲಿಜರು ಬಲಿಷ್ಠ ಸಮುದಾಯಗಳ ಜತೆ ಪೈಪೋಟಿ ಮಾಡದೆ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಹಿಂದುಳಿಯುವಂತಾಯಿತು’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಸಂಸದ ಪಿ.ಎಸ್.ಮೋಹನ್ ಅವರ ಹೋರಾಟದ ಫಲವಾಗಿ ಬಲಿಜಿಗರನ್ನು ಶೈಕ್ಷಣಿಕವಾಗಿ ‘2ಎ’ಗೆ ಸೇರಿಸಲಾಯಿತು. ಇದರಿಂದ ಅನುಕೂಲವಾಯಿತು. ಉದ್ಯೋಗ ಮೀಸಲಾತಿಯಲ್ಲೂ  ಸಮುದಾಯವನ್ನು ‘2ಎ’ಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಳೆದ ಮೇನಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದು ಇಂದಿಗೂ ಈಡೇರಿಸಿಲ್ಲ.  ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ ಔದ್ಯೋಗಿಕ ಕ್ಷೇತ್ರದಲ್ಲಿ ಮೀಸಲಾತಿ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಸದ, ಬಲಿಜ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಪಿ.ಸಿ.ಮೋಹನ್ ಮಾತನಾಡಿ, ‘ಬಲಿಜರು 24 ವರ್ಷಗಳಿಂದ ಅನ್ಯಾಯ ಮತ್ತು ಶೋಷಣೆಗೆ ಒಳಗಾಗುತ್ತ ಬಂದಿದ್ದಾರೆ. ಈ ಅನ್ಯಾಯ ಸರಿಪಡಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಏಳು ತಿಂಗಳಾದರೂ ಈವರೆಗೆ ಅವರು ಈ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ. ಆದ್ದರಿಂದ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ 24 ಗಂಟೆ ಒಳಗೆ ಈ ಕೆಲಸ ಮಾಡುತ್ತಾರೆ’ ಎಂದರು.

ಬಲಿಜ ಮಹಾಸಭಾ ಪ್ರಧಾನ ಕಾರ್ಯದರ್ಶಿ ರಾಮಲಿಂಗಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಕಾಲಜ್ಞಾನಿ ಕೈವಾರ ತಾತಯ್ಯನವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಕೀಲ ಎ.ಜಿ. ಸುಧಾಕರ್, ಮುಖಂಡರಾದ ರಾಜಶೇಖರ ನಾಯ್ಡು, ಮಂಜುಳಾ ನಾಯ್ಡು, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ. ಮೂರ್ತಿ, ಮುನಿರಾಜು, ಗುಡಿಬಂಡೆ ಬಾಲೆಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಉಪಸ್ಥಿತರಿದ್ದರು.

**

ಬಲಿಜ ಸಮುದಾಯದಲ್ಲಿಯೇ ಒಂದು ಗುಂಪು ಸಮುದಾಯದ ಒಗ್ಗಟ್ಟು ಹೊಡೆಯಲು ಹವಣಿಸುತ್ತಿದೆ. ನಾವೆಲ್ಲ ಸಂಘಟಿತರಾಗಿ ಅದಕ್ಕೆ ತಕ್ಕ ಪಾಠ ಕಲಿಸಬೇಕು.
-ಪಿ.ಸಿ.ಮೋಹನ್‌, ಕರ್ನಾಟಕ ಬಲಿಜ ಮಹಾಸಭಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.