ADVERTISEMENT

ಕೌಶಲ ತರಬೇತಿಯಿಂದ ಸ್ವಾವಲಂಬಿ ಬದುಕು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 17:25 IST
Last Updated 20 ಆಗಸ್ಟ್ 2018, 17:25 IST
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ‘ಗ್ರಾಮೀಣ ಯುವ ಜನತೆ ಸ್ವಯಂ ಉದ್ಯಮಶೀಲತೆ ಹಾಗೂ ಕೌಶಲ ಅಭಿವೃದ್ಧಿ ತರಬೇತಿ ಪಡೆದುಕೊಂಡು ಬ್ಯಾಂಕ್‌ ಸಾಲಗಳನ್ನು ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದ ರಾಷ್ಟ್ರೀಯ ನಿರ್ದೇಶಕ ಪಿ.ಸಂತೋಷ್ ತಿಳಿಸಿದರು.

ನಗರದ ಹೊರ ವಲಯದ ಚದಲುಪುರ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೊಬೈಲ್ ರಿಪೇರಿ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯುವ ಜನತೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿವೆ. ಯುವಕರು ತಮ್ಮ ಶಿಕ್ಷಣಕ್ಕೆ ತಕ್ಕಂತೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ಪಡೆದು ಯಾರ ಹಂಗಿಲ್ಲದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ತರಬೇತಿ ಕೇಂದ್ರದ ನಿರ್ದೇಶಕ ಡಿ.ನಾರಾಯಣಸ್ವಾಮಿ ಮಾತನಾಡಿ, ‘ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಇವತ್ತು ಮೊಬೈಲ್ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಮೊಬೈಲ್ ರಿಪೇರಿ ಮಾಡುವುದು ಸಹ ಇವತ್ತು ಲಾಭದಾಯಕ ವೃತ್ತಿಯಾಗಿದೆ’ ಎಂದು ತಿಳಿಸಿದರು.

ಸ್ವಾತಂತ್ಯ ಹೋರಾಟಗಾರರನ್ನು ಹಾಗೂ ಮಾಜಿ ಸೈನಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಚದಲುಪುರದ ಅಂಗನವಾಡಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದ ರಾಜ್ಯ ನಿರ್ದೇಶಕ ರಾಮಕೃಷ್ಣ ಮಾನೆ, ಪ್ರಗತಿ- ಕೃಷ್ಣ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಮಹದೇವಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಚ್ ವೆಂಕಟಪ್ಪ, ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ಮೇಲೂರು ಎಚ್.ಎನ್ ರಾಮಕೃಷ್ಣಪ್ಪ, ವ್ಯವಸ್ಥಾಪಕ ಮುನಿರಾಜು ಕೆ.ಎಚ್, ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.