ADVERTISEMENT

ಅಜ್ಜಂಪುರ: ಚತುಷ್ಪಥ ರಸ್ತೆಗೆ ಗುರುತು ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:11 IST
Last Updated 17 ಮೇ 2017, 6:11 IST

ಅಜ್ಜಂಪುರ: ಪಟ್ಟಣದ ಕನ್ನಡ ನೂತನ ಶಾಲೆಯಿಂದ ರೈಲ್ವೆಗೇಟ್ ವರೆಗಿನ 2 ಕಿಮೀ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಸಂಬಂಧ ರಸ್ತೆಗಾಗಿ ಸ್ಥಳ ಗುರುತಿಸುವ ಕಾರ್ಯವನ್ನು ಪಿಡಬ್ಲ್ಯುಡಿ ಅಧಿಕಾರಿಗಳು ಸೋಮವಾರ ನಡೆಸಿದರು.

ಅಧಿಕಾರಿಗಳು ರಸ್ತೆ ಮಧ್ಯದಿಂದ ಎರಡೂ ಪಾರ್ಶ್ವದಲ್ಲಿ ತಲಾ 40 ಅಡಿ ಅಗಲದಲ್ಲಿ ಗುರುತು ಹಾಕಿದರು. ಈ ವೇಳೆ ರಸ್ತೆ ಮಧ್ಯದಿಂದ 40 ಅಡಿ ವ್ಯಾಪ್ತಿಯ ಮನೆ, ಅಂಗಡಿ, ಕಾಂಪೌಂಡ್‌ಗೆ  ಬಣ್ಣ ಬಳಿದು, ಗುರುತು ಹಾಕಲಾಯಿತು.

ಕನ್ನಡ ನೂತನ ಶಾಲೆಯಿಂದ ಗಾಂಧಿ ವೃತ್ತದವರೆಗಿನ ರಸ್ತೆಯಲ್ಲಿನ ಹೆಚ್ಚಿನ ಅಂಗಡಿ ಅಥವಾ ಕಟ್ಟಡಗಳು ನಿರ್ಮಾಣ ಆಗಲಿರುವ ಚತುಷ್ಪಥ ರಸ್ತೆಗೆ ನಿಗದಿಪಡಿಸಿರುವ ಅಳತೆ ವ್ಯಾಪ್ತಿಗಿಂದ ದೂರ ಇರುವುದರಿಂದ ಬಹುತೇಕ ಕಟ್ಟಡಗಳಿಗೆ ತೊಂದರೆ ಆಗಿಲ್ಲ.

ADVERTISEMENT

ಆದರೆ ಗಾಂಧಿ ವೃತ್ತದಿಂದ ವೆಂಕಟೇಶ್ವರ ಚಿತ್ರಮಂದಿರದವರೆಗಿನ ರಸ್ತೆಯಲ್ಲಿನ ಬಹುತೇಕ ಅಂಗಡಿಗಳು ರಸ್ತೆ ಮಧ್ಯದಿಂದ 30 ಅಡಿಗಳಷ್ಟು ಅಂತರದಲ್ಲಿ ಇವೆ.  ಈ ಭಾಗದ ಕೆಲ ಕಟ್ಟಡಗಳಿಗೆ ಭಾಗಶಃ ಹಾನಿಯಾದರೆ, ಮತ್ತೆ ಕೆಲವು ಕಟ್ಟಡಗಳಿಗೆ ಹೆಚ್ಚಿನ ಹಾನಿ ಆಗಲಿದೆ. ಕೆಲವು ಕಟ್ಟಡ ತೆರವು ಮಾಡಬೇಕಾಗಿದೆ. ಹತ್ತಾರು ವರ್ಷಗಳಿಂದ ರಸ್ತೆಯ ಭಾಗದಲ್ಲಿಯೇ ಅಂಗಡಿ, ಗೂಡಂಗಡಿ ಹಾಕಿಕೊಂಡಿದ್ದ ವ್ಯಾಪಾರಸ್ಥರು ಅಂಗಡಿ ತೆರವು ಮಾಡಬೇಕಾಗಿದೆ.

ಸರ್ವೆ ಪ್ರಕಾರ, ರಸ್ತೆ ಅಗಲೀಕ ರಣದಿಂದ ಸುಮಾರು 177 ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಲಿದೆ. ಹತ್ತಾರು ಮರಗಳಿಗೂ ಕೊಡಲಿಪೆಟ್ಟು ಬೀಳಲಿದೆ ಎನ್ನಲಾಗಿದೆ. ಸರ್ವೆ ಕಾರ್ಯ ಮುಗಿದಿದ್ದು, ಕಟ್ಟಡ ಮಾಲೀಕರೇ ಇನ್ನು ತೆರವುಕಾರ್ಯ ಮಾಡಿದರೆ ಕಾಮಗಾರಿ ಸುಗಮ ಆಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ನೂರಾರು ಸಂಖ್ಯೆಯ ಸಾರ್ವಜ ನಿಕರು ಹಾಗೂ ವ್ಯಾಪಾರಸ್ಥರು, ಸರ್ವೆ ಕಾರ್ಯ ಮಾಡುವಾಗ ಜಮಾಯಿಸಿದ್ದರು.

ಅಂಗಡಿ ಮಾಲೀಕರು ಯಾವುದೇ ಪ್ರತಿರೋಧ ತೋರದೇ ಸಹಕರಿಸಿದ್ದು ವಿಶೇಷವಾಗಿತ್ತು. ಪೊಲೀ ಸರು ಸ್ಥಳದಲ್ಲಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.