ADVERTISEMENT

ಆರ್ಥಿಕ ಪರಿವರ್ತನೆಯ ಬಜೆಟ್‌: ಶಾಸಕ

2017–18ನೇ ಸಾಲಿನ ಮುಂಗಡ ಪತ್ರ: ಉದ್ಯೋಗ ಸೃಷ್ಟಿ, ಮೂಲ ಸೌಕರ್ಯಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:09 IST
Last Updated 3 ಫೆಬ್ರುವರಿ 2017, 7:09 IST
ಆರ್ಥಿಕ ಪರಿವರ್ತನೆಯ ಬಜೆಟ್‌: ಶಾಸಕ
ಆರ್ಥಿಕ ಪರಿವರ್ತನೆಯ ಬಜೆಟ್‌: ಶಾಸಕ   

ಚಿಕ್ಕಮಗಳೂರು: ‘ಅಗ್ಗದ ಪ್ರಚಾರ, ವೋಟ್ ಬ್ಯಾಂಕ್ ರಾಜಕೀಯವಿಲ್ಲದ ಆರ್ಥಿಕ ಪರಿವರ್ತನೆಯ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ’ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿ, ಕೃಷಿ, ಗ್ರಾಮೀಣಾ ಭಿವೃದ್ಧಿಗೆ ಉತ್ತೇಜನ ಬಜೆಟ್‌ನಲ್ಲಿದೆ. ಪ್ರತಿ ಯೋಜನೆಗೂ ಕಾಲಮಿತಿ ನಿಗದಿಪಡಿಸಿ ಬದ್ಧತೆ ತೋರಿಸಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಸುಸ್ಥಿತಿಗೆ ತರಲು ಯೋಜನಾಬದ್ಧ ನಿಲುವನ್ನು ಕೇಂದ್ರ ತೆಗೆದುಕೊಂಡಿದೆ ಎಂದರು.

ರಾಜಕೀಯ ಹಾಗೂ ಸೈದ್ಧಾಂತಿಕ ಎದುರಾಳಿಗಳು ‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬಂತೆ ಸತ್ಯ ಸಂಗತಿ ಅರಿವಿದ್ದರೂ ಟೀಕಿಸುತ್ತಿದ್ದಾರೆ. ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ ಎನ್ನುತ್ತಿದ್ದಾರೆ. ದೇಶದ ಪ್ರಗತಿಗೆ ಅಗ್ಗದ ಘೋಷಣೆಗಳು ಮುಖ್ಯವಲ್ಲ. ಮೂಲಸೌಕರ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಆಗ ಮಾತ್ರ ದೇಶದಲ್ಲಿ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಸಾಧ್ಯ. ಮೂಲಸೌಕರ್ಯ ಅಭಿವೃದ್ಧಿಗೆ ಅತಿ ಹೆಚ್ಚು ಹಣ ಈ ವರ್ಷ ಬಜೆಟ್‌ನಲ್ಲಿ ಸಿಕ್ಕಿದೆ ಎಂದು ತಿಳಿಸಿದರು.

ಸಾರಿಗೆ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ,10 ಲಕ್ಷ ಕೆರೆಗಳ ನಿರ್ಮಾಣ ಗುರಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಇದೇ ಮೊದಲು ನಿಗದಿಪಡಿಸಲಾಗಿದೆ. ಇದರಿಂದ ಸ್ವಾಭಾ ವಿಕವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ದೇಶದ ಆರ್ಥಿಕ ಚೇತರಿಕೆಗೆ ನೆರವಾಗುತ್ತದೆ. ಈ ಕ್ಷೇತ್ರಗಳಿಗೆ ಸ್ವಾತಂತ್ರ್ಯ ಬಂದ ನಂತರ ಎಂದಿಗೂ ಈಗ ಮೀಸಲಿ ಟ್ಟಿರುವಷ್ಟು ಹಣ ಇಟ್ಟಿರಲಿಲ್ಲ. ಹಾಗಿದ್ದೂ ಟೀಕೆ ಮಾಡುವುದು ವಿರೋಧ ಪಕ್ಷಗಳ ವಿರೋಧಿ ಮನೋಭಾವನೆ ತೋರಿಸುತ್ತದೆ ಎಂದರು.

ಕಾಳಧನ ಸೃಷ್ಟಿಗೆ ಕಡಿವಾಣ ಹಾಕಲು ನೋಟು ರದ್ದುಪಡಿಸಿದ ನಂತರ ₹3 ಲಕ್ಷಕ್ಕೂ ಹೆಚ್ಚಿನ ಮೊತ್ತದ ನಗದು ವಹಿವಾಟು ನಿಷೇಧಿಸಿರುವುದು ಕ್ರಾಂತಿಕಾರಿ ಬೆಳವಣಿಗೆ ಎಂದು ತಿಳಿಸಿದರು.

ಸುಸ್ತಿದಾರರ ಆಸ್ತಿ ಮುಟ್ಟುಗೋಲು ಕ್ರಮ ಶ್ರೀಮಂತರ ಪರವಾದುದ್ದಲ್ಲ. ಕಾರ್ಪೋರೇಟ್‌ ಉದ್ಯಮಿಗಳಿಗೆ ₹40ರಿಂದ₹ 50 ಸಾವಿರ ಕೋಟಿ ಸಾಲ ನೀಡಿ ಬ್ಯಾಂಕ್‌ಗಳನ್ನು ಮುಳುಗಿ ಸಿದವರೂ ಕಾಂಗ್ರೆಸ್‌ ಪಕ್ಷದವರು. ಸುಸ್ತಿದಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ತೆಗೆದು ಕೊಂಡಿರುವುದು ಐತಿಹಾಸಿಕ ನಿರ್ಧಾರ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಲೋಕೇಶ್, ಜಿಲ್ಲಾ ವಕ್ತಾರ ವರಸಿದ್ಧಿ ವೇಣು ಗೋಪಾಲ್, ಅಲ್ಪಸಂಖ್ಯಾತ ಮೋ ರ್ಚಾದ ಉಪ್ಪಳ್ಳಿ ಅನ್ವರ್ ಇತರರು ಇದ್ದರು.

ಬಂಡವಾಳಶಾಹಿ ಪರ ಬಜೆಟ್‌ : ದೇವರಾಜ್‌ ಟೀಕೆ

ಚಿಕ್ಕಮಗಳೂರು:‘ಕೇಂದ್ರ ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕೇವಲ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ ಹುರುಳಿಲ್ಲದ ಬಜೆಟ್‌ ಮಂಡಿಸಿದೆ’ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್‌.ದೇವರಾಜ್‌ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭೀಕರ ಬರ ಎದುರಾಗಿದೆ. ಕೃಷಿ ವಲಯ ಅವನತಿ ಹಂಚಿನಲ್ಲಿದೆ. ರೈತರು ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ರೈತರ ಪರ ಬಜೆಟ್‌ ಮಂಡನೆ ಮಾಡಿಲ್ಲ. ಜನತೆಯ ಮೂಗಿಗೆ ತುಪ್ಪ ಸವರಿ, ಕಾರ್ಪೋರೇಟ್‌ ಉದ್ದಿಮೆದಾರರು ಹಾಗೂ ಅಧೀನ ಅಂಗಸಂಸ್ಥೆಗಳಿಗೆ ರತ್ನಗಂಬಳಿ ಹಾಸುತ್ತಿದೆ ಎಂದು ಆರೋಪಿಸಿದರು. 

ಸತತ ಬರದಿಂದ ಕಾಫಿ ಬೆಳೆಗಾರರು ಕಂಗೆಟ್ಟಿದ್ದಾರೆ. ಅವರ ನೆರವಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿಲ್ಲ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಫಿಯ ಮೌಲ್ಯವರ್ಧನೆಗೆ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದುವರೆಗೂ ನಡೆದುಕೊಂಡಿಲ್ಲ. ಕಾಫಿ ಬೆಳೆಗಾರರು ಸೇರಿದಂತೆ ಸರ್ವರ ಹಿತ ಕಾಪಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕೃಷಿ ನಂಬಿ ಜೀವನ ನಿರ್ವಹಿಸುತ್ತಿರುವ ಯುವಜನತೆಗೆ ಈ ಬಾರಿಯ ಬಜೆಟ್‌ನಲ್ಲಿ ಯಾವ ಕೊಡುಗೆಯೂ ಸಿಕ್ಕಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಯೋಜನೆ ರೂಪಿಸಲು ಬಜೆಟ್‌ನಲ್ಲಿ ಮುಂದಾಗಿಲ್ಲ. ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಾರತಮ್ಯ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಅಚ್ಛೇ ದಿನಗಳು ಸ್ವ ಪಕ್ಷದವರಿಗೆ ಮಾತ್ರ ಬಂದಿವೆ ಎನಿಸುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ.ಕುಮಾರ್‌ ನಾಯ್ಕ್ ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ವೈದ್ಯಾಧಿಕಾರಿ. ಬಡವರು ಮತ್ತು ಮಧ್ಯಮ ವರ್ಗಗಳಿಗೆ ಆಸರೆಯಾಗಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯರು ಖಾಸಗಿ ನರ್ಸಿಂಗ್‌ ಹೋಂಗಳ ಒತ್ತಡಕ್ಕೆ ಮಣಿದು, ಅವರ ವರ್ಗಾವಣೆಗೆ ಆಸಕ್ತಿ ವಹಿಸಿದ್ದಾರೆ. ಕೂಡಲೇ ಅವರ ವರ್ಗಾವಣೆ ಕೈಬಿಡಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಜಮೀಲ್‌ ಅಹಮ್ಮದ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್‌, ಹೊಲದಗದ್ದೆ ಗಿರೀಶ್‌, ಚಂದ್ರಪ್ಪ, ಅಶೋಕ್‌, ರೆಹಮಾನ್‌ ಇತರರು ಇದ್ದರು.

***

ADVERTISEMENT

‘ಕಾಳಧನ ಸೃಷ್ಟಿಗೆ ರಾಜಕೀಯ ಪಕ್ಷಗಳು ಬೆನ್ನುಲುಬಾಗಿದ್ದವು. ಹೊಸ ನಿಯಮದ ಪ್ರಕಾರ ಪಕ್ಷದ ದೇಣಿಗೆ ₹2 ಸಾವಿರಕ್ಕಿಂತ ಹೆಚ್ಚು ಪಡೆಯುವಂತಿಲ್ಲ.  ಇದರಿಂದ ರಾಜಕೀಯ ಪಕ್ಷಗಳಲ್ಲೂ ಪಾರದರ್ಶಕತೆ ಕಾಣಬಹುದು’
- ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.