ADVERTISEMENT

ಎರಡು ಉದ್ಯಾನಗಳ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:21 IST
Last Updated 8 ಸೆಪ್ಟೆಂಬರ್ 2017, 9:21 IST
ಕಡೂರಿನ 5ನೇ ವಾರ್ಡಿನಲ್ಲಿ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಭೂಮಿಪೂಜೆ ನೇರವೇರಿಸಿದರು.
ಕಡೂರಿನ 5ನೇ ವಾರ್ಡಿನಲ್ಲಿ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಭೂಮಿಪೂಜೆ ನೇರವೇರಿಸಿದರು.   

ಕಡೂರು: 14ನೇ ಹಣಕಾಸು ಮತ್ತು ಎಸ್‍ಎಫ್‍ಸಿ ಅನುದಾನದಲ್ಲಿ ಪಟ್ಟಣದ 5ನೇ ವಾರ್ಡಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪುರಸಭಾ ಸದಸ್ಯ ಎಂ.ಸೋಮಶೇಖರ್ ತಿಳಿಸಿದರು. ಕಡೂರಿನ ಮೈಲಾರಲಿಂಗೇಶ್ವರ ಸ್ವಾಮಿ ದೇವಾಯಲದ ಆವರಣದಲ್ಲಿ ಗುರುವಾರ ನಡೆದ ₹4 ಲಕ್ಷ ವೆಚ್ಚದ ಎಸ್‍ಎಫ್‍ಸಿ ಅನುದಾನದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಡೂರು ಪುರಸಭೆಯಲ್ಲಿ ಮುಖ್ಯ ಎಂಜಿನಿಯರ್ ಇಲ್ಲದ ಕಾರಣ ಕೆಲ ಕಾಮ ಗಾರಿಗಳಿಗೆ ಕಾರ್ಯಾದೇಶ ನೀಡಿದ್ದರೂ ಸ್ವಲ್ಪ ವಿಳಂಬವಾಗಿತ್ತು, ಇದೀಗ ₹4 ಲಕ್ಷ ವೆಚ್ಚದಲ್ಲಿ ಈ ದೇವಾಲಯದಿಂದ ಜನಮಿತ್ರ ನಾರಾಯಣ್ ಮನೆಯವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇದಲ್ಲದೇ ಪ್ರತ್ಯೇಕವಾಗಿ ಎರಡು ರಸ್ತೆಗಳು ಮತ್ತು ಎರಡು ಉದ್ಯಾನಗಳನ್ನು ಅಭಿವೃದ್ದಿ ಪಡಿಸಲು ಕಾರ್ಯಾದೇಶ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜ್ ಭೂಮಿಪೂಜೆ ನೇರವೇರಿಸಿ ಮಾತನಾಡಿ, ‘ಪಟ್ಟಣದ ಅಭಿವೃದ್ದಿಗೆ ಪುರಸಭಾ ಸದಸ್ಯರು ಪಕ್ಷಬೇಧವಿಲ್ಲದೇ ಶ್ರಮಿಸಬೇಕು, ಪುರಸಭೆಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆ ಖಾಲಿ ಇದ್ದು ಕ್ರಿಯಾಯೋಜನೆ ತಯಾರಿಸಲು ಅತಿದೊಡ್ಡ ತೊಂದರೆಯಾಗಿದೆ. ಈ ಕೂಡಲೇ ಸಂಬಂಧಪಟ್ಟವರು ಈ ತೊಂದರೆಯನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಶರತ್‍ಕೃಷ್ಣಮೂರ್ತಿ ಮಾತನಾಡಿ, ‘ಪುರಸಭೆಗೆ ಬರುವ ವಿವಿಧ ಅನು ದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪಟ್ಟಣದ ಸರ್ವ ತೋಮುಖ ಹಾಗೂ ದೂರದೃಷ್ಟಿಯ ಅಭಿವೃದ್ದಿ ಕೆಲಸಗಳನ್ನು ಮಾಡಲು ಸರ್ವ ಸದಸ್ಯರು ಮುಂದಾಗಬೇಕು’ ಎಂದರು.

ಪುರಸಭಾ ಅಧ್ಯಕ್ಷ ಎಂ.ಮಾದಪ್ಪ ಮಾತನಾಡಿ, ‘ಯಾವುದೇ ಪಕ್ಷ ಭೇದವಿಲ್ಲದೇ ಅನುದಾನಗಳನ್ನು ಸಮಾನವಾಗಿ ಹಂಚಿಕೆ ಮಾಡ ಲಾಗುತ್ತದೆ, ಒಟ್ಟಾರೆಯಾಗಿ ಕಡೂರು ಪಟ್ಟಣದ ಅಭಿವೃದ್ದಿಯೇ ಪುರಸಭೆಯ ಮುಖ್ಯಧ್ಯೇಯವಾಗಿದೆ’ ಎಂದರು. ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ, ಗುತ್ತಿಗೆದಾರ ಕಂಸಾಗರಶೇಖರ್, ಕೆ.ಎಂ.ಮಲ್ಲಿಕಾರ್ಜುನ್, ಉಮೇಶ್, ಮುದಿಯಪ್ಪ, ಶಿವಣ್ಣಒಡೆಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.