ADVERTISEMENT

ಏತ ನೀರಾವರಿ ಕಾಮಗಾರಿ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 8:51 IST
Last Updated 1 ಸೆಪ್ಟೆಂಬರ್ 2017, 8:51 IST
ಮಳಲೂರು ಕೆರೆ ಬತ್ತಿದೆ.
ಮಳಲೂರು ಕೆರೆ ಬತ್ತಿದೆ.   

ಮಳಲೂರು (ಚಿಕ್ಕಮಗಳೂರು): ತಾಲ್ಲೂಕಿನ ಮಳಲೂರು ಭಾಗದ 10 ಗ್ರಾಮಗಳ ಕೆರೆಗಳನ್ನು ತುಂಬಿಸುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಾಲೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಕೆಲ ರೈತರು ತಗಾದೆ ತೆಗೆದಿರುವುದು ತೊಡಕಾಗಿ ಪರಿಣಮಿಸಿದೆ.

ಈ ಯೋಜನೆಯ 16 ಕಿಲೋ ಮೀಟರ್‌ ನಾಲೆ ನಿರ್ಮಾಣಕ್ಕೆ 34.26 ಎಕರೆ ಭೂಸ್ವಾಧೀನದ ಪೈಕಿ 15.12 ಎಕರೆ ಜಾಗವನ್ನು 2014ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಂಟು ಕಿ.ಮೀ ನಾಲೆ ಕಾಮಗಾರಿ ಮುಗಿದಿದೆ. ಬಾಕಿ 19.14 ಎಕರೆ ಜಮೀನನ್ನು 129 ರೈತರಿಂದ ಸ್ವಾಧೀನ ಮಾಡಿಕೊಳ್ಳಬೇಕಿದೆ. ಸ್ವಾಧೀನ ನಿಟ್ಟಿನಲ್ಲಿ ಜಮೀನಿಗೆ ಸಮಿತಿಯು ನಿಗದಿಪಡಿಸಿರುವ ಬೆಲೆಗೆ ಕೆಲ ರೈತರು ತಕರಾರು ಮಾಡಿದ್ದಾರೆ.

ಯೋಜನೆಗೆ ಮತ್ತಿಕೆರೆ ಸಮೀಪ ಬಿರಂಚಿಹೊಳೆ ಬಳಿ ನಿರ್ಮಿಸಿರುವ ಜಾಕ್‌ ವೆಲ್‌ ನಿರ್ಮಿಸಲಾಗಿದೆ. ಬೆಣ್ಣೂರು ನಾಲೆಗೆ ನೀರು ಹರಿಸಲು ಪೈಪ್‌ ಅಳವಡಿಸಿ ಮಾರ್ಗ ನಿರ್ಮಿಸಲಾಗಿದೆ. ಹೊಳೆಯಿಂದ ನೀರೆತ್ತಲು ಮೋಟಾರ್‌ ಅಳವಡಿಸುವ ನಿಟ್ಟಿನಲ್ಲಿ ವಿದ್ಯುತ್‌ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ. ಬಳಕೆ ಮಾಡದಿರುವದರಿಂದ ಕೆಲ ವಿದ್ಯುತ್‌ ಉಪಕರಣಗಳು ಹಾಳಾಗಿವೆ.

ADVERTISEMENT

ರೈತ ಸಂಘದ ಕಾರ್ಯಕಾರಿಣಿ ಸದಸ್ಯ ಕೃಷ್ಣೇಗೌಡ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯೋಜನೆ ಪೂರ್ಣವಾಗಿ ಕಾರ್ಯಗತ ವಾದರೆ ಈ ಭಾಗದ ಸುಮಾರು 1.5 ಸಾವಿರ ಎಕರೆ ಜಮೀನಿಗೆ ನೀರು ಹರಿಯುತ್ತದೆ. ಮಳಲೂರು ಕೆರೆ, ಅಗಸರಕಟ್ಟೆ, ಹಿರಿಕೆರೆ, ಕದ್ರಿಮಿದ್ರಿ ಕಟ್ಟೆ, ರಾಮಣ್ಣನ ಕಟ್ಟೆ, ಕಲ್ಲಹಳ್ಳಿ ಊರ ಮಂದಿನ ಕೆರೆ ಸೇರಿದಂತೆ ಹಲವು ಕೆರೆಕಟ್ಟೆಗಳಿಗೆ ನೀರು ಹರಿಯಲಿದೆ. ರೈತರನ್ನು ಒಪ್ಪಿಸಿ ಭೂಸ್ವಾಧೀನ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದರು.

‘ಈ ಯೋಜನೆಯು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ಯೋಜನೆ ಆರಂಭವಾಗಿ 20 ವರ್ಷಕ್ಕಿಂತ ಜಾಸ್ತಿಯಾಗಿದೆ. ಆರಂಭದಲ್ಲಿ ಅಂದಾಜು ವೆಚ್ಚ |
₹ 2.80 ಕೋಟಿ ನಿಗದಿಪಡಿಸಲಾಗಿತ್ತು. ಈಗ ಅದು ₹ 12 ಕೋಟಿಗೆ ಏರಿದೆ. ಕಾಮಗಾರಿ ಮಾತ್ರ ಮುಗಿದಿಲ್ಲ. ಸ್ವಾಧೀನಕ್ಕೆ ನಿಗದಿಪಡಿಸಿರುವ ಬೆಲೆಗೆ ಕೆಲವೇ ರೈತರು ತಕರಾರು ಎತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳು ಈ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ನಾಲೆ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡಬೇಕು’ ಎಂದರು.

‘ಈಗ ಶೇ 70 ರಷ್ಟು ಕಾಮಗಾರಿ ಮುಗಿದಿದೆ. ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಈ ಭಾಗದ ರೈತರ ನೀರಿನ ಸಮಸ್ಯೆ ನೀಗುತ್ತದೆ. ಕಂಬಿಹಳ್ಳಿ, ತಗಡೂರು, ಮಳಲೂರು, ಸಿಗರಾಪುರ, ಕಲ್ಲಹಳ್ಳಿ, ಕದ್ರಿಮಿದ್ರಿ, ಬಿಗ್ಗನಹಳ್ಳಿ ಸೇರಿದಂತೆ 10 ಗ್ರಾಮದವರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘19.14 ಎಕರೆ ಜಮೀನು ಸ್ವಾಧೀನಕ್ಕೆ ನಿಟ್ಟಿನಲ್ಲಿ ಈಗಾಗಲೇ ದರ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿ, ಆಗಸ್ಟ್‌ 31ರವವರೆಗೆ ಅವಕಾಶ ನೀಡಲಾಗಿತ್ತು. ಆಕ್ಷೇಪಣೆ ಗಳನ್ನು ಪರಿಶೀಲಿ ಸಲಾಗುವುದು. ಕಾಮಗಾರಿ ಮುಂದುವರಿಸಲು ಕ್ರಮ ವಹಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಯಗಚಿ ಯೋಜನಾ ವಿಭಾಗದ ಎಂಜಿನಿಯರೊಬ್ಬರು ತಿಳಿಸಿದರು.

‘15 ದಿನದೊಳಗೆ ಸಮಸ್ಯೆ ಇತ್ಯರ್ಥ ಪಡಿಸಿ ಕಾಮಗಾರಿ ಆರಂಭಿಸಲು ಕ್ರಮ ವಹಿಸದಿದ್ದರೆ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಅವರ ಮನೆ ಮುಂದೆ ರೈತರೆಲ್ಲರೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ರೈತ ಮುಖಂಡ ರುದ್ರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.