ADVERTISEMENT

ಕಪ್ಪು ಬಂಗಾರಕ್ಕೆ 4 ವರ್ಷಗಳಲ್ಲೇ ಕನಿಷ್ಠ ಬೆಲೆ

ರವಿ ಕೆಳಂಗಡಿ
Published 13 ಸೆಪ್ಟೆಂಬರ್ 2017, 9:37 IST
Last Updated 13 ಸೆಪ್ಟೆಂಬರ್ 2017, 9:37 IST
ಕಳಸದ ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘದಲ್ಲಿ ಬೆವರ್ತಕರು ಕಾಳುಮೆಣಸನ್ನು ದಾಸ್ತಾನು ಇಟ್ಟಿರುವ ದೃಶ್ಯ.
ಕಳಸದ ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರ ಸಂಘದಲ್ಲಿ ಬೆವರ್ತಕರು ಕಾಳುಮೆಣಸನ್ನು ದಾಸ್ತಾನು ಇಟ್ಟಿರುವ ದೃಶ್ಯ.   

ಕಳಸ: ಫೆಬ್ರುವರಿಯಿಂದ ಅಷ್ಟಿಷ್ಟೇ ಇಳಿಯುತ್ತಿದ್ದ ಕಾಳುಮೆಣಸಿನ ದರ, ಇದೀಗ 4 ವರ್ಷಗಳಲ್ಲೇ ಕನಿಷ್ಠ ಮಟ್ಟ ತಲುಪಿದೆ. ಕ್ವಿಂಟಲ್‌ಗೆ ₹ 65– ₹ 70 ಸಾವಿರ ಆಸುಪಾಸಿನಲ್ಲಿದ್ದ ದರವು ₹ 40 ಸಾವಿರಕ್ಕೆ ಕುಸಿದಿದೆ. ಇದರಿಂದಾಗಿ ಮಲೆನಾಡಿನ ಬೆಳೆಗಾರ ಸಮುದಾಯವೇ ಕಂಗಾಲಾಗಿದೆ.

ಒಂದೇ ವರ್ಷದಲ್ಲಿ ಕಿಂಟ್ವಲ್‌ಗೆ ₹ 25–30 ಸಾವಿರದಷ್ಟು ದರ ಕಡಿಮೆಯಾಗಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ವಿಚಿತ್ರ ಎಂದರೆ ಭಾರತದ ಕೊಚ್ಚಿ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದಲ್ಲಿ ಬೆಲೆ ಕುಸಿದರೆ, ಜಗತ್ತಿನಲ್ಲಿ ಅತಿ ಹೆಚ್ಚು ಮೆಣಸು ಬೆಳೆಯುವ ವಿಯಟ್ನಾಂನ ಮಾರುಕಟ್ಟೆಯಲ್ಲಿ ಬೆಲೆ ಚೇತರಿಸುತ್ತಿದೆ.

ವಿಯೆಟ್ನಾಂನಲ್ಲಿ ವರ್ಷಕ್ಕೆ 1.80 ಲಕ್ಷ ಟನ್‌ ಕಾಳುಮೆಣಸು ಬೆಳೆಯುತ್ತಿದ್ದು, ಈ ಪೈಕಿ 2016ರಲ್ಲಿ 11 ಸಾವಿರ ಟನ್‌ ಭಾರತಕ್ಕೆ ರಫ್ತಾಗಿದೆ. ಈ ವರ್ಷ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಶ್ರೀಲಂಕಾದಿಂದಲೂ ಭಾರತಕ್ಕೆ 25 ಸಾವಿರ ಟನ್‌ ಮೆಣಸು ರಫ್ತಾಗಿದೆ. ಸಾರ್ಕ್‌ ಒಪ್ಪಂದದ ಪರಿಣಾಮವಾಗಿ ಭಾರತಕ್ಕೆ ತೆರಿಗೆ ಇಲ್ಲದೆ ನುಸುಳುವ ಮೆಣಸು ಇಲ್ಲಿನ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ ಎಂದು ವ್ಯಾಪಾರಿ ಸಮುದಾಯ ಹೇಳುತ್ತಿದೆ.

ADVERTISEMENT

ಭಾರತದ ಮೆಣಸು ಅದರಲ್ಲಿರುವ ಒಲಿಯೋರೆಸಿನ್‌ ಪ್ರಮಾಣದಿಂದ ಜಗತ್ತಿನಲ್ಲೇ ಉತ್ತಮ ಗುಣಮಟ್ಟದ್ದು. ಆದರೆ, ವಿಯೆಟ್ನಾಂ ಮೆಣಸು ಗುಣಮಟ್ಟದಲ್ಲಿ ಭಾರತಕ್ಕಿಂತ ಕನಿಷ್ಠ. ಇದರ ಫಲವಾಗಿ ವಿಯೆಟ್ನಾಂ ಮೆಣಸಿನ ಬೆಲೆಯೂ ಕಡಿಮೆ. ಈಗ ಅಲ್ಲಿನ ಮೆಣಸಿನ ಬೆಲೆ ಕೆಜಿಗೆ ₹ 250ರ ಆಸುಪಾಸಿನಲ್ಲಿ ಇದೆ. ಭಾರತದ ಮೆಣಸಿಗೆ ಈಗಲೂ ₹ 400 ಧಾರಣೆ ಇದೆ. ಈ ಬೆಲೆ ವ್ಯತ್ಯಾಸದ ಲಾಭ ಪಡೆಯಲು ಕೆಲ ವರ್ತಕರು ವಿಯೆಟ್ನಾಂನಿಂದ ಮೆಣಸನ್ನು ಆಮದು ಮಾಡುತ್ತಿದ್ದಾರೆ. ಇದನ್ನು ದೇಶೀಯ ಮೆಣಸಿನೊಂದಿಗೆ ಕಲಬೆರೆಕೆ ಮಾಡಿ, ಹೆಚ್ಚಿನ ಬೆಲೆಗೆ ಭಾರತದಲ್ಲೇ ಮಾರುವ ಅವ್ಯವಹಾರವೂ ಕೊಡಗಿನಲ್ಲಿ ಬೆಳಕಿಗೆ ಬಂದಿದೆ.

ಭಾರತದ ಒಟ್ಟು ಕಾಳುಮೆಣಸಿನ ಉತ್ಪಾದನೆ ವರ್ಷಕ್ಕೆ 50 ಸಾವಿರ ಟನ್‌ ಆಗಿದೆ. ದೇಶದಲ್ಲಿ ಹೆಚ್ಚಿನ ಬೇಡಿಕೆಯ ಕಾರಣಕ್ಕೆ ಇಲ್ಲಿನ ಮೆಣಸು ನಮ್ಮ ಆಂತರಿಕ ಬಳಕೆಗೇ ಸಾಕಾಗುತ್ತಿಲ್ಲ. ಆದ್ದರಿಂದ ವರ್ಷ ಕಳೆದಂತೆ ಭಾರತದ ಕಾಳುಮೆಣಸಿನ ರಫ್ತು ಪ್ರಮಾಣ ಕಡಿಮೆಯಾಗುತ್ತಿದೆ ಮತ್ತು ಆಮದಿನ ಪ್ರಮಾಣ ಹೆಚ್ಚುತ್ತಿದೆ.

ಮೆಣಸಿನ ಬೆಲೆಯಲ್ಲಿ ದಿಢೀರನೆ ಕುಸಿತ ಆಗಿರುವ ಕಾರಣಕ್ಕೆ ಕಾಫಿ, ಅಡಿಕೆ ತೋಟದಲ್ಲಿ ಕಾಳುಮೆಣಸನ್ನು 3 ವರ್ಷಗಳಿಂದ ಅತ್ಯಂತ ಪರಿಶ್ರಮದಿಂದ ಬೆಳೆಸಿರುವ ಬೆಳೆಗಾರರಿಗೆ ಭ್ರಮ ನಿರಸನ ಆಗಿದೆ. ‘ಎಕರೆಗೆ ಲಕ್ಷಗಟ್ಟಲೆ ಖರ್ಚು ಮಾಡಿ ನಾವು ಬಳ್ಳಿಗಳನ್ನು ಉಳಿಸಿಕೊಂಡಿದ್ದೇವೆ. ಕೆಜಿಗೆ ₹400 ಬೆಲೆಯಲ್ಲಿ ನಮಗೆ ಹೆಚ್ಚಿನ ಲಾಭ ಆಗುವುದಿಲ್ಲ’ ಎಂಬುದು ಬೆಳೆಗಾರರ ಭಾವನೆ.

ಬೆಲೆ ಹೆಚ್ಚಗಬಹುದು ಎಂಬ ನಿರೀಕ್ಷೆಯಲ್ಲಿ ಕಳಸದ ಪ್ರಾಥಮಿಕ ಕೃಷಿ ಮತ್ತು ಸಹಕಾರ ಸಂಘದಲ್ಲಿ ಕೆಲ ಬೆಳೆಗಾರರು ಮತ್ತು ವರ್ತಕರು ಟನ್‌ಗಟ್ಟಲೆ ಮೆಣಸನ್ನು ವರ್ಷದಿಂದಲೂ ಶೇಖರಿಸಿದ್ದರು. ಇದೀಗ ಕುಸಿದಿರುವ ಬೆಲೆ ಅವರೆಲ್ಲರಿಗೂ ಲಕ್ಷಗಟ್ಟಲೆ ನಷ್ಟ ತಂದಿದೆ. ಕೆಲ ವ್ಯಾಪಾರಿಗಳಂತೂ ಊರು ಬಿಡುವ ಸ್ಥಿತಿಯೇ ಬಂದಿದೆ.

ಅವರ ಬಳಿ ವ್ಯವಹಾರ ಹೊಂದಿದ್ದ ಸಣ್ಣ ಬೆಳೆಗಾರರಿಗೂ ಈಗ ಸಂಕಷ್ಟದ ಸಮಯ. ಹಿಂದೊಮ್ಮೆ ಉಪಬೆಳೆಯಾಗಿದ್ದ ಕಾಳುಮೆಣಸು ಈಗ ತೋಟದಲ್ಲಿ ಪಡೆದಿರುವ ಮಹತ್ವ ದೊಡ್ಡದು. ಆಮದು ಸುಂಕದ ಮೂಲಕ ಮೆಣಸಿನ ಬೆಲೆ ಕುಸಿಯದಂತೆ ಕೇಂದ್ರ ಸರ್ಕಾರ ಗಮನ ವಹಿಸುತ್ತದೆ ಎಂಬುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ. ಆದರೆ ಆ ಭರವಸೆ ಈಡೇರಲಿ ಎಂದು ಬೆಳೆಗಾರರು ಆಶಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.