ADVERTISEMENT

ಕಾಡಾನೆ ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:43 IST
Last Updated 23 ಮೇ 2017, 5:43 IST

ಮೂಡಿಗೆರೆ: ತಾಲ್ಲೂಕಿನ ಬಣಕಲ್‌ ಹೋಬಳಿಯ ಬಂಕೇನಹಳ್ಳಿ ಗ್ರಾಮಕ್ಕೆ ಭಾನುವಾರ ಮುಂಜಾನೆ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ.
ಸಾರಗೋಡು ಮೀಸಲು ಅರಣ್ಯ ದಿಂದ ಹೆಗ್ಗುಡ್ಲು ಮಾರ್ಗವಾಗಿ ಬಂಕೇನ ಹಳ್ಳಿಗೆ ಕಾಡಾನೆಗಳು ಬಂದಿರಬಹುದು ಎಂದು ಶಂಕಿಸಲಾಗಿದ್ದು, ಬಂಕೇನಹಳ್ಳಿ ಗ್ರಾಮದ ಬಿ.ಜೆ. ಚಂದ್ರೇಗೌಡ ಎಂಬವರ ಕಾಫಿ ತೋಟದೊಳಗೆ ಪ್ರವೇಶಿಸಿ, ಕಾಫಿಗಿಡಗಳನ್ನು ತುಳಿದು ಹಾನಿ ಗೊಳಿಸಿವೆ. ಕಾಫಿತೋಟದ ಮಧ್ಯೆ ಬೆಳೆದಿರುವ ಬಾಳೆ ಗಿಡಗಳನ್ನು ತಿಂದು ಹಾಕಿರುವ ಕಾಡಾನೆಗಳು, ಬಂಕೇನ ಹಳ್ಳಿಯಿಂದ ಚಕ್ಕಮಕ್ಕಿಯತ್ತ ತೆರಳಿವೆ. 

ಚಕ್ಕಮಕ್ಕಿ ಗ್ರಾಮದ ಲೋಬೊ ಎಂಬವರ ಕಾಫಿ ತೋಟದಲ್ಲಿ ತಿರುಗಾಡಿ ಸುಮಾರು 25 ವರ್ಷಕ್ಕೂ ಹಳೆಯದಾದ ಕಾಫಿ ಗಿಡಗಳನ್ನು ತುಳಿದು ಹಾಕಿವೆ. ಲೋಬೊ ತೋಟದಿಂದ ಪಕ್ಕದಲ್ಲೇ ಇರುವ ಡಿ.ಆರ್‌. ರಾಜು ಅವರ ತೋಟಕ್ಕೆ ಪ್ರವೇಶಿಸಿ ಚಕ್ಕಮಕ್ಕಿಯಿಂದ ಸಬ್ಬೆನಹಳ್ಳಿಯತ್ತ ಪ್ರಯಾಣ ಬೆಳೆಸಿವೆ. ಕಾಡಾನೆಗಳ ಹೆಜ್ಜೆಗುರುತಿನ ಆಧಾರದಲ್ಲಿ ನಾಲ್ಕು ಕಾಡಾನೆಗಳು ಬಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

‘ಕಾಡಾನೆ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿಲ್ಲ. ಬಾಳೆಯನ್ನು ತಿಂದು ಹೋಗಿರುವ ಕಾಡಾನೆಗಳು ಪುನಃ ದಾಳಿ ನಡೆಸುವ ಸಾಧ್ಯತೆಯಿದ್ದು, ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯು ರೈತರ ಕಣ್ಣು ಒರೆಸುವ ತಂತ್ರವಾಗಿದ್ದು, ಕಾಡಾನೆ ಗಳನ್ನು ಓಡಿಸುವ ಕಾರ್ಯಚರಣೆ ನಡೆ ಸದೇ ಹಿಡಿದು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ರೂಪಿಸಬೇಕು ಹಾಗೂ ಬೆಳೆ ಹಾನಿಯಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು  ಬಿ.ಜೆ. ಚಂದ್ರೇಗೌಡ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.