ADVERTISEMENT

ಕೃಷಿ ಭೂಮಿ ಮುಟ್ಟದಿರಿ: ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 9:18 IST
Last Updated 31 ಅಕ್ಟೋಬರ್ 2014, 9:18 IST

ಮೂಡಿಗೆರೆ: ‘ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ’ ಮತ್ತು ‘ಕರ್ನಾಟಕ ಬೆಳೆಗಾರರ ಒಕ್ಕೂಟ’ದ ನೇತೃತ್ವದಲ್ಲಿ ಒತ್ತುವರಿ ಸಮಸ್ಯೆ ನಿವಾರಣೆಗಾಗಿ ಒತ್ತಾಯಿಸಿ ಗುರುವಾರ ಕರೆ ನೀಡಲಾಗಿದ್ದ ಮೂಡಿಗೆರೆ ತಾಲ್ಲೂಕು ಬಂದ್‌ ಯಶಸ್ವಿಯಾಯಿತು.

ಬಂದ್‌ ಅಂಗವಾಗಿ ಬೆಳಗ್ಗೆ 6 ರಿಂದ ಸಂಜೆ 5 ರ ವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು. ತಾಲ್ಲೂಕಿನ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಪೆಟ್ರೋಲ್‌ ಬಂಕ್‌ಗಳು, ಔಷಧಿ ಅಂಗಡಿಗಳಲ್ಲಿ ಚಟುವಟಿಕೆ ಕಡಿಮೆ ಇತ್ತು. ಶಾಲಾ ಕಾಲೇಜುಗಳಿಗೆ ಬುಧವಾರವೇ ರಜೆ ಘೋಷಿಸಲಾಗಿತ್ತು.

ಕೆಲವು ಖಾಸಗಿ ಕಾಲೇಜುಗಳು ಕಾರ್ಯನಿರ್ವಹಿಸಲು ಮುಂದಾದರೂ ವಿದ್ಯಾರ್ಥಿಗಳಿಲ್ಲದೇ ಬಳಿಕ ರಜೆ ಘೋಷಿಸಲಾ­ಯಿತು. ತಾಲ್ಲೂಕಿನ ಬಣಕಲ್‌, ಕೊಟ್ಟಿಗೆಹಾರ, ಜನ್ನಾಪುರ­ದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಪೂರ್ಣ ಬಂದ್‌ ಆಚರಿಸಲಾಯಿತು. ಗೋಣಿಬೀಡಿನಲ್ಲಿ ಸಂತೆಯ ದಿನ­ವಾ­ಗಿದ್ದರಿಂದ ಸಂಜೆಯವೇಳೆಗೆ ಗೋಣಿಬೀಡು ಮತ್ತು ಜನ್ನಾ­ಪುರದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು.

ಭೂ ಕಂದಾಯ ಕಾಯ್ದೆ 192 ಕ್ಕೆ ತಿದ್ದುಪಡಿ ತರಬೇಕು, ಜೀವನೋಪಾಯಕ್ಕಾಗಿ ಕೃಷಿ ಮಾಡುತ್ತಿರುವ  ಇನಾಂಭೂಮಿ, ಜುಮ್ಮಾ, ಪೈಸಾರಿ, ಗೋಮಾಳ, ದೇವರಕಾಡು ಮುಂತಾದ ಬಗೆಯ ಭೂಮಿಯನ್ನು ಸಾಗುವಾಳಿದಾರರಿಗೆ ಹಕ್ಕುದಾರಿಕೆ ನೀಡಬೇಕು. ಬಾಲಸುಬ್ರಮಣ್ಯಂ ವರದಿಯನ್ನು ತಿರಸ್ಕರಿಸ­ಬೇಕು, ಒತ್ತುವರಿ ಸಮಸ್ಯೆ ಮರುಪರಿಶೀಲನೆಗಾಗಿ ಹೈಕೋ­ರ್ಟಿಗೆ ಅರ್ಜಿ ಸಲ್ಲಿಸಬೇಕು, ಜಮೀನುಗಳ ಸರ್ವೆ ನಡೆಸಿ ಗಡಿ ಗುರುತಿಸಬೇಕು, ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಬೇಕೆಂಬ ಒತ್ತಾಯದ ಮನವಿಯನ್ನು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡಲಾಯಿತು.

ಪ್ರತಿಭಟನೆ: ಬೆಳೆಗಾರರ ಒಕ್ಕೂಟ ಕರೆ ನೀಡಿದ್ದ ಬಂದ್‌ ಅಂಗವಾಗಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ರೈತಭವನದಲ್ಲಿ ಬೆಳಿಗ್ಗೆ 10 ಕ್ಕೆ ಸೇರಿದ ಸಾವಿರಾರು ರೈತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸರ್ವಪಕ್ಷಗಳ ಕಾರ್ಯಕರ್ತರು ರೈತಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಒತ್ತುವರಿ ಸಮಸ್ಯೆಯನ್ನು ಬಗೆಹರಿಸಬೇಕು, ರೈತರ ಭೂಮಿಯನ್ನು ಮುಟ್ಟಕೂಡದು, ನಮ್ಮ ಭೂಮಿ – ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗುತ್ತಾ  ಕೆ.ಎಂ. ರಸ್ತೆಯ ಮೂಲಕ, ಎಂ.ಜಿ. ರಸ್ತೆಯಲ್ಲಿ ಸಾಗಿ ಲಯನ್ಸ್‌ ವೃತ್ತಕ್ಕೆ ಬಂದು  ಲಯನ್ಸ್‌ ವೃತ್ತದಲ್ಲಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿದರು. ಮೆರವಣಿಗೆ ಮುಂದುವರಿಸಿ ಅಡ್ಯಂತಾ­ಯ ರಂಗಮಂದಿರಲ್ಲಿ ಸಮಾವೇಶಗೊಳ್ಳಲಾಯಿತು. ಪ್ರತಿಭ­ಟನೆ­ಯಲ್ಲಿ ಸರ್ವಪಕ್ಷಗಳ ಮುಖಂಡರು, ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.