ADVERTISEMENT

ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣ

ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:49 IST
Last Updated 26 ಏಪ್ರಿಲ್ 2018, 9:49 IST

ನರಸಿಂಹರಾಜಪುರ: ‘ಕೇಂದ್ರದ ಬಿಜೆಪಿ ಸರ್ಕಾರವು ಆದಾಯ ತೆರಿಗೆ ಇಲಾಖೆ (ಐ.ಟಿ) ಬಳಸಿಕೊಂಡು ಕಾಂಗ್ರೆಸ್ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.

ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ದಾಳಿ ಮಾಡಿಸಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಲಾಗುತ್ತಿದೆ. ಇದರ ಭಾಗವಾಗಿ ಕೊಪ್ಪದ ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅಲ್ಲದೆ ದಲಿತರ ಪ್ರಮುಖ ನಾಯಕರಾಗಿ ಹೊರಹೊಮ್ಮುತ್ತಿರುವ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಅವರ ಮನೆಯ ಮೇಲೂ ಐಟಿ ದಾಳಿ ನಡೆಸಲಾಗಿದೆ. ಬಿಜೆಪಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು ರಾಜ್ಯದ ದಲಿತ ಮತದಾರರು ಎಚ್ಚತ್ತು ಕೊಳ್ಳಬೇಕಾಗಿದೆ. ಕೇಂದ್ರ ಸಚಿವರೊಬ್ಬರು ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ನಿಲ್ಲಿಸುವ ಮಾತನಾಡಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಕಳೆದ 23ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಅಂಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದರೆ ಎಲ್ಲಾ ಜನಾಂಗದ ಹಿತ ಕಾಯಲು ಬದ್ಧನಾಗಿದ್ದೇನೆ. ಮನೆ ಇಲ್ಲದವರಿಗೆ ಮನೆ, ಹಕ್ಕು ಪತ್ರ, ನಿವೇಶನ, ಫಾರಂ ನಂ 50, 53 ಅಡಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ 6 ತಿಂಗಳೊಳಗೆ ಹಕ್ಕು ಪತ್ರ ವಿತರಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಶಾಸಕರು ಹಕ್ಕುಪತ್ರ ಪಡೆದ ರೈತರಿಗೆ ಪತ್ರಬರೆಯುತ್ತಿದ್ದಾರೆ. ಹಕ್ಕುಪತ್ರ ಕೊಡುವಲ್ಲಿ ಶಾಸಕರ ಪಾತ್ರವಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಹಕ್ಕು ಪತ್ರ ವಿತರಿಸಿಲ್ಲ ಎಂದು ಜರಿದಿದ್ದಾರೆ.

ರೈತರಿಗೆ ಹಕ್ಕುಪತ್ರ ದೊರೆಯುವಲ್ಲಿ ಕಾಂಗ್ರೆಸ್ ಮುಖಂಡರ ಪಾದಯಾತ್ರೆ, ಹೋರಾಟ ಹಾಗೂ ಕಂದಾಯ ಮಂತ್ರಿಯಾಗಿದ್ದಾಗ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದ ಫಲವಾಗಿ ಸಿಕ್ಕಿದೆ. ಹಕ್ಕುಪತ್ರ ಪಡೆದಿರುವ ರೈತರು ಕಾಂಗ್ರೆಸ್‌ಗೆ ಮತಚಲಾಯಿಸ ಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.