ADVERTISEMENT

ಕೊರತೆಗಳ ಕಡೂರು ತಾಲ್ಲೂಕು ಕಚೇರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 9:06 IST
Last Updated 4 ಸೆಪ್ಟೆಂಬರ್ 2017, 9:06 IST
ಕಡೂರು ತಾಲ್ಲೂಕು ಕಚೇರಿ ಅವರಣದಲ್ಲಿ ಬೇಕಾಬಿಟ್ಟಿಯಾಗಿ ನಿಂತಿರುವ ವಾಹನಗಳು.
ಕಡೂರು ತಾಲ್ಲೂಕು ಕಚೇರಿ ಅವರಣದಲ್ಲಿ ಬೇಕಾಬಿಟ್ಟಿಯಾಗಿ ನಿಂತಿರುವ ವಾಹನಗಳು.   

ಕಡೂರು: ತಾಲ್ಲೂಕಿನ ಶಕ್ತಿ ಕೇಂದ್ರವಾದ ತಾಲ್ಲೂಕು ಕಚೇರಿಯಲ್ಲಿ ಅಸಮರ್ಪಕ ನಿರ್ವಹಣೆಯಿಂದ ಸಮಸ್ಯೆಗಳು ಹೆಚ್ಚಿವೆ. ಹಲವು ಕೊರತೆಗಳಿದ್ದು ಅವುಗಳ ಪರಿಹಾರಕ್ಕೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲ್ಲೂಕು ಕಚೇರಿಯ ಆವರಣದಲ್ಲಿ ಬಹುಮುಖ್ಯವಾಗಿ ಆಗಬೇಕಾದ ಕಾರ್ಯಗಳೆಂದರೆ ಮೊದಲು ಶೌಚಾಲಯ. ಕಚೇರಿ ಆವರಣದ ಕಾಂಪೌಂಡ್ ಮತ್ತು ಪ್ರವಾಸಿ ಮಂದಿರದ ಸ್ವಲ್ಪ ಜಾಗವನ್ನು ಸೇರಿಸಿ ಶೌಚಾಲಯ ನಿರ್ಮಾಣ ಆರಂಭವಾಗಿ ಸುಮಾರು ಮೂರು ವರ್ಷಗಳಾಗುತ್ತಾ ಬಂದರೂ ನಿರ್ಮಾಣ ಕಾರ್ಯ ಇನ್ನೂ ಮುಗಿದಿಲ್ಲ.

ಈ ಕಾಮಗಾರಿಯ ಜವಾಬ್ದಾರಿ ಪುರಸಭೆಯದು. ದಿನನಿತ್ಯವೂ ನೂರಾರು ಸಂಖ್ಯೆಯಲ್ಲಿ ಬರುವ ಸಾರ್ವಜನಿಕರಿಗೆ ತಹಶೀಲ್ದಾರ್ ಅವರ ಕೊಠಡಿಯ ಹಿಂಭಾಗವೇ ಮೂತ್ರ ವಿಸರ್ಜನೆಗೆ ಇರುವ ಜಾಗ. ಬಯಲು ಶೌಚಾಲಯ ಮುಕ್ತ ತಾಲ್ಲೂಕು ಆಗುವ ಹಾದಿಯಲ್ಲಿರುವ ಕಡೂರು ತಾಲ್ಲೂಕಿನ ಶಕ್ತಿ ಕೇಂದ್ರವೆ ಇನ್ನು ಬಯಲು ಶೌಚ ಮುಕ್ತವಾಗಿಲ್ಲದಿರುವುದು ವಿಪರ್ಯಾಸ. ಆದಷ್ಟು ಬೇಗ ಶೌಚಾಲಯ ಕಾಮಗಾರಿ ಮುಗಿಸಬೇಕು ಎನ್ನುವುದು ಜನರ ಆಗ್ರಹ.

ADVERTISEMENT

ತಾಲ್ಲೂಕು ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆ ಸ್ಥಳವಿಲ್ಲದಿರುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಈ ಆವರಣದಲ್ಲಿ ಹಳೇ ತಾಲ್ಲೂಕು ಕಚೇರಿಯಿದ್ದು, ಪ್ರಸ್ತುತ ಅಲ್ಲಿ ಚುನಾವಣೆ ಮತ್ತು ಆಹಾರ ಶಾಖೆ, ಪಹಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಹೊಂದಿಕೊಂಡಂತೆ ಉಪಕಾರಾಗೃಹವೂ ಇದೆ. ಇಲ್ಲಿಗೆ ಬರುವವರ ಸಂಖೆ ಬಹಳ ಹೆಚ್ಚಾಗಿರುತ್ತದೆ. ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವುದರಿಂದ ಪ್ರತಿ ನಿತ್ಯ ತೊಂದರೆಯಾಗುತ್ತಿದೆ.

ಈ ಹಿಂದಿನ ತಹಶೀಲ್ದಾರ್ ಚಿನ್ನರಾಜು ಅವರು ಈ ಆವರಣದಲ್ಲಿ ಪಾರ್ಕಿಂಗ್ ಲಾಟ್ ನಿರ್ಮಿಸಿದ್ದರು. ಕೆಲ ದಿನಗಳ ನಂತರ ಮತ್ತೆ ಹಳೇ ಸ್ಥಿತಿ ಮುಂದುವರೆಯಿತು. ಇದರತ್ತ ತಹಶೀಲ್ದಾರ್ ಅವರು ಗಮನ ಹರಿಸಬೇಕು ಎಂಬ ಆಶಯ ಸಾರ್ವಜನಿಕರದ್ದು, ಜೊತೆಗೆ ತಾಲ್ಲೂಕು ಕಚೇರಿ ಅವರಣದಲ್ಲಿ ಶುದ್ಧ ಕುಡಿಯುವ ನೀರು ದೊರೆಯುವಂತಾಗಬೇಕೆಂಬ ಬೇಡಿಕೆಯೂ ಇದೆ.

ತಹಶೀಲ್ದಾರ್ ಕಚೇ ರಿಯ ಮೇಲ್ಭಾಗದಲ್ಲಿ ಉಪ ನೋಂದಣಾ ಧಿಕಾರಿಗಳ ಕಚೇರಿ ಇದ್ದು, ಮೆಟ್ಟಿಲು ಹತ್ತಿ ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿಯಲ್ಲಿ ವೃದ್ಧರಿಗೆ ಬಹು ಪ್ರಯಾಸಕರವಾಗಿದೆ. ಹಲವು ಬಾರಿ ವೃದ್ಧರನ್ನು ಎತ್ತಿ ಕೊಂಡು ಹೋಗಬೇಕಾದ ಪರಿಸ್ಥಿತಿ ಯಿದೆ. ಕೆಲಭಾಗದಲ್ಲಿರುವ ಖಜಾನೆ ಕಚೇರಿಯನ್ನು ಮೇಲ್ಭಾಗಕ್ಕೆ ಸ್ಥಳಾಂತರಿಸಿ ಉಪನೊಂದಣಾಧಿಕಾರಿ ಕಚೇರಿಯನ್ನು ಕೆಳಭಾಗಕ್ಕೆ ತಂದರೆ ವೃದ್ಧರು ಮತ್ತು ಅಶಕ್ತರಿಗೆ ಉಪಯೋಗಕಾರಿಯಾಗುತ್ತದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

ತಹಶೀಲ್ದಾರ್ ಕಚೇರಿಯ ಪಕ್ಕದ ಲ್ಲಿರುವ ಆರ್‌.ಆರ್.ಟಿ ಶಾಖೆಯ ಬಳಿ ವಿದ್ಯುತ್ ವೈರ್ ಗಳನ್ನು ಬೇಕಾಬಿಟ್ಟಿಯಾಗಿ ಎಳೆಯಲಾಗಿದ್ದು, ನಿರ್ವಹಣೆಯ ಕೊರತೆಯಿಂದಾಗಿ ಅವುಗಳು ಮನುಷ್ಯರ ತಲೆಗೇ ತಗುಲುತ್ತಿವೆ. ಈ ಹಿಂದೆ ತಾಲ್ಲೂಕು ಕಚೇರಿಯಲ್ಲಿಯೇ ಕಳ್ಳತನವಾಗಿ ಕಂಪ್ಯೂಟರ್, ಪ್ರಿಂಟರ್‌ಗಳು ಕಳುವಾಗಿದ್ದವು. ನಿರ್ವಹಣೆಯ ಕೊರತೆಯಿಂದಾಗಿ ಸಿಸಿಟಿವಿ ಕ್ಯಾಮೆರಾಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಹಲವಾರು ಕೊರತೆಗಳಿಂದ ಕೂಡಿರುವ ತಹಶೀಲ್ದಾರ್ ಕಚೇರಿಯಲ್ಲಿ ವ್ಯವಸೈಎಗಳನ್ನು ಸುಧಾರಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.