ADVERTISEMENT

ಚಾರ್ಮಾಡಿ ರಸ್ತೆ: ಆದೇಶಕ್ಕಿಲ್ಲ ಕಿಮ್ಮತ್ತು!

ಹೆದ್ದಾರಿಯಲ್ಲಿ ಘನ ವಾಹನಗಳು, ಹುಲ್ಲಿನ ಲಾರಿಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 9:52 IST
Last Updated 11 ಏಪ್ರಿಲ್ 2018, 9:52 IST

ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿಘಾಟಿಯ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಎಗ್ಗಿಲ್ಲದೇ ಹುಲ್ಲಿನ ಲಾರಿಗಳು ಹಾಗೂ ಘನ ವಾಹನಗಳು ಸಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಾಡಿಘಾಟಿ ಬಂದ್‌ ಆಗಿರು ವುದರಿಂದ ವಾಹನ ಸವಾರರು, ಬೆಂಗಳೂರು, ಮಂಡ್ಯ, ಕೋಲಾರ ಭಾಗ ಸೇರಿದಂತೆ ರಾಜ್ಯದ ವಿವಿಧೆಡೆ ಯಿಂದ ಕರಾವಳಿ ತಲುಪಲು ಚಾರ್ಮಾಡಿ ಘಾಟಿಯಲ್ಲೇ ಹೋಗ ಬೇಕಾದ ಅನಿವಾರ್ಯ ವಿರುವುದರಿಂದ ಪ್ರತಿನಿತ್ಯ 15 ಸಾವಿರಕ್ಕೂ ಅಧಿಕ ವಾಹನಗಳು ಈ ಹೆದ್ದಾರಿಯಲ್ಲಿ ಸಾಗುತ್ತಿವೆ.

ಚಾರ್ಮಾಡಿಘಾಟಿಯಲ್ಲಿ ಘನ ವಾಹನಗಳು ತೆರಳದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತು ಬೆಲೆ ನೀಡದ ಘನವಾಹನಗಳ ಚಾಲಕರು, ಎಗ್ಗಿಲ್ಲದೇ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಕೊಟ್ಟಿಗೆಹಾರ, ಚಾರ್ಮಾಡಿಗಳಲ್ಲಿ ಸಿಸಿ ಕ್ಯಾಮೆರಾದ ಕಣ್ಗಾವಲಿದ್ದರೂ, ಹಣದ ಆಸೆಗೆ ಬಲಿಯಾಗಿ ಸಿಬ್ಬಂದಿ ಘನ ವಾಹನಗಳು ಹಾಗೂ ಹುಲ್ಲಿನ ಲಾರಿಗಳು ಸಂಚರಿಸಲು ಅವಕಾಶ ಕಲ್ಪಿಸಿದ್ದಾರೆ ಎಂಬುದು ಜನರ ಆರೋಪ.

ADVERTISEMENT

ಹುಲ್ಲಿನ ಲಾರಿ ಹಾವಳಿ:
ಹಾಸನ ಭಾಗದಿಂದ ಕರಾವಳಿಗೆ ಹುಲ್ಲು ಸಾಗಾಟ ಮಾಡುವ ಲಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಅಳತೆ ಮೀರಿ ತುಂಬುವುದರಿಂದ ಲಾರಿಯ ಹಿಂದೆ ಮುಂದೆ ವಾಹನಗಳು ಚಲಿಸಲಾಗದ ಸ್ಥಿತಿ ಎದುರಾಗಿದೆ. ಲಾರಿಗಳ ಮಾಲೀಕರಿಂದ ಸಿಬ್ಬಂದಿ ಹಣ ವಸೂಲು ಮಾಡುತ್ತಿರುವ ಬಗ್ಗೆ ಮಾಲೀಕರು ಬಹಿರಂಗವಾಗಿಯೇ ದೂರುತ್ತಿದ್ದು, ಕೆಲವು ಚೆಕ್‌ಪೋಸ್ಟ್‌ಗಳಿಗೆ ಹುಲ್ಲಿನ ಲಾರಿ ಮಾಲೀಕರೇ ಹಣ ನಿಗದಿ ಮಾಡಿ ಸಾಗಾಟ ಮಾಡುತ್ತಿರುವ ಬಗ್ಗೆ ಬಲವಾದ ಆರೋಪಗಳಿವೆ. ಅಧಿಕಾರಿಗಳ ಹಣದ ಆಸೆಯು, ಸಂಚಾರ ವ್ಯವಸ್ಥೆಯನ್ನೇ ಅಡಿಮೇಲು ಮಾಡುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಘನ ವಾಹನಗಳು ಹಾಗೂ ಹುಲ್ಲಿನ ಲಾರಿಗಳ ಹಾವಳಿಯಿಂದ ಹೆದ್ದಾರಿಯಲ್ಲಿ ಸಾಗುವ ತುರ್ತು ಚಿಕಿತ್ಸಾ ವಾಹನಗಳು, ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ನಿಗದಿತ ಸಮಯಕ್ಕೆ ತಲುಪಲಾಗದೇ ಪರದಾಡುವಂತಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಹೆದ್ದಾರಿ ಸಂಚಾರದ ಮೇಲೆ ನಿಗಾವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆ.ವಾಸುದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.