ADVERTISEMENT

ಜಡಿಮಳೆಗೆ ತತ್ತರಿಸಿದ ಜನತೆ

ಮಲೆನಾಡಿನಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:44 IST
Last Updated 21 ಜುಲೈ 2017, 6:44 IST

ಮೂಡಿಗೆರೆ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಬುಧವಾರವೂ ಮುಂದುವರೆದಿದ್ದು, ಇಡೀ ದಿನ ಜಡಿ ಮಳೆ ಸುರಿಯಿತು.

ಮಂಗಳವಾರ ರಾತ್ರಿಯಿಂದಲೂ ಬಿಡುವಿಲ್ಲದೇ ಮಳೆ ಸುರಿದಿದ್ದರಿಂದ ಸುಂಡೇಕೆರೆ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆತ್ತು. ಹೇಮಾವತಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಉಗ್ಗೆಹಳ್ಳಿ, ಬೆಟ್ಟದಮನೆ ಸಮೀಪ ತೀರ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಕಳೆದ  ಮಂಗಳವಾರ ರಾತ್ರಿ ಉಗ್ಗೆಹಳ್ಳಿಯಲ್ಲಿ ಗದ್ದೆಬಯಲಿನ ಮಟ್ಟಕ್ಕೆ ನೀರು ಏರಿಕೆಯಾಗಿತ್ತು.

ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಾರ್ಮಾಡಿಘಾಟಿ ಪ್ರದೇಶದಲ್ಲಿರುವ ಸಣ್ಣ ಪುಟ್ಟ ಝರಿಗಳು ಕೂಡ ಮೈದುಂಬಿ ಹರಿಯುತ್ತಿದ್ದು, ಹೆದ್ದಾರಿ ಯಲ್ಲಿ ಸಾಗುವ ಪ್ರಯಾಣಿಕರು ಬಳುಕುವ ಝರಿತೊರೆಗಳನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.

ADVERTISEMENT

ಕೊಟ್ಟಿಗೆಹಾರ, ಗುತ್ತಿ, ದೇವರ ಮನೆ, ಭೈರಾಪುರ, ಶಿಶಿಲ, ಹೊಸ್ಕೆರೆ, ಊರುಬಗೆ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಈ ಭಾಗಗಳಲ್ಲಿ ನಿರ್ಮಿಸಿರುವ ಭತ್ತದ ಸಸಿಮಡಿಗಳು ನೀರಿನಿಂದ ಆವೃತವಾಗಿವೆ.

ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಶಾಲಾ ಮಕ್ಕಳು ಮಳೆಯ ನಡುವೆಯೇ ಕೊಡೆಯ ಆಶ್ರಯದಲ್ಲಿ ಶಾಲೆಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು. ಪಟ್ಟಣದ ಕಾಲೇಜು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಳೆಯ ನೀರೆಲ್ಲವೂ ರಸ್ತೆಮೇಲೆ ಹರಿದಿದ್ದರಿಂದ ಕಾಲೇಜು ವಿದ್ಯಾರ್ಥಿಗಳು ಮಳೆಯ ನೀರಿನಲ್ಲಿಯೇ ನಡೆದು ಸಾಗಿದರು.

ಬೀಜುವಳ್ಳಿ ಹಾಗೂ ಗಂಗನಮಕ್ಕಿಯ ತಗ್ಗು ಪ್ರದೇಶದಲ್ಲಿ ಒಳಚರಂಡಿಗಳು ಮಳೆನೀರಿನಿಂದ ತುಂಬಿ ಹರಿದಿದ್ದರಿಂದ ತ್ಯಾಜ್ಯವೆಲ್ಲವೂ ರಸ್ತೆ ಮೇಲೆ ಹರಿದು ವಾಹನ ಸವಾರರು ತೊಂದರೆ ಅನುಭವಿಸಿದರು. ತಾಲ್ಲೂಕು ಕಚೇರಿಯಲ್ಲಿ ಮಳೆಹಾನಿ ವರದಿಗಾಗಿ ದೂರವಾಣಿ ಕೇಂದ್ರ ತೆರೆಯಲಾಗಿದ್ದು, ಸಂಜೆಯವರೆಗೂ ಯಾವುದೇ ಹಾನಿ ಪ್ರಕರಣಗಳು ದಾಖಲಾಗಿರಲಿಲ್ಲ.

ಕೈಕೊಟ್ಟ ವಿದ್ಯುತ್‌ ಪರದಾಡಿದ ಜನತೆ: ಮಂಗಳವಾರ ರಾತ್ರಿ ಮಳೆ ಜೋ ರಾಗಿದ್ದರಿಂದ ಹಾಸನದಿಂದ ಮೂಡಿ ಗೆರೆಗೆ ವಿದ್ಯುತ್‌ ಪ್ರವಹಿಸುವ ಮುಖ್ಯ ಮಾರ್ಗದಲ್ಲಿ ಸಮಸ್ಯೆ ಕಾಣಿಸಿ ಕೊಂಡ ಹಿನ್್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಸ್ಥಗಿತಗೊಂಡ ವಿದ್ಯುತ್‌ ಬುಧ ವಾರ ಸಂಜೆಯವರೆಗೂ ಪೂರೈಕೆಯಾಗದೇ ಜನರು ಪರದಾಡಿದರು.

ಸಣ್ಣ ಪುಟ್ಟ ಕೈಗಾರಿಕೆಗಳು, ಗೃಹಿಣಿಯರು, ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್‌ ಇಲ್ಲದೇ ಕೆಲಸಕಾರ್ಯಗಳು ಸ್ಥಗಿತಗೊಂಡಿದ್ದವು.

**

ತುಂಬಿದ ತುಂಗೆ
ಶೃಂಗೇರಿ:  ತಾಲ್ಲೂಕಿನಲ್ಲಿ ಗುರುವಾರ ಕೂಡಾ ಮಳೆ ಮುಂದುವರಿದಿದೆ. ಪಟ್ಟಣದ ಗಾಂಧಿ ಮೈದಾನದ ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಒಂದೇ ಸವನೆ ಸುರಿಯುತ್ತಿದ್ದ ಮಳೆಯಿಂದ ತುಂಗೆ ತುಂಬಿ ತುಳುಕುತ್ತಿದೆ. ಧಾರಾಕಾರ ಮಳೆಯ ಪ್ರಯುಕ್ತ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಪೇಟೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು.  ಗುರುವಾರ ಶೃಂಗೇರಿ ತಾಲ್ಲೂಕಿನಲ್ಲಿ 98.4 ಮಿ.ಮಿ,ಕಿಗ್ಗಾದಲ್ಲಿ 168.0ಮಿ.ಮಿ ಮಳೆಯಾಗಿ ಒಟ್ಟು ಶೃಂಗೇರಿಯಲ್ಲಿ 1406.2 ಮಿ.ಮಿ ಮಳೆಯಾಗಿದೆ. ಒಟ್ಟಾರೆ ಗುರುವಾರ ಬಂದ ಮಳೆಯಿಂದ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತವಾಗಿ, ಅಡಿಕೆ ಮರಗಳು ನೆಲಕ್ಕೆ ಉರುಳಿದ್ದು ಅಪಾರ ಬೆಳೆ ನಾಶವಾಗಿದೆ.

**

ಮುರಿದು ಬಿದ್ದ ವಿದ್ಯುತ್‌ ಕಂಬಗಳು

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಗುರುವಾರ ಹದ ಮಳೆಯಾಗಿದೆ.

ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿಯ ಗಾಳಿಮಳೆಗೆ 32 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಕಾರೆಮನೆ, ಮಲ್ಲಂದೂರಿನಲ್ಲಿ ಕಂಬಗಳು ರಸ್ತೆಗೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

‘ಹಳೆ ಉಪ್ಪಳ್ಳಿ ಪ್ರದೇಶದಲ್ಲಿ ಗಾಳಿ ರಭಸಕ್ಕೆ ಎರಡು ವಿದ್ಯುತ್‌ ಕಂಬಗಳು ಬಿದ್ದಿವೆ. ವಿದ್ಯುತ್‌ ತಗುಲಿ ಎಮ್ಮೆಯೊಂದು ಮೃತಪಟ್ಟಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುಳ್ಳಯ್ಯನಗಿರಿ, ಮಲ್ಲೇನಹಳ್ಳಿ, ಕೊತ್ತನಸೂರು, ಗಾಳಿಬೆಟ್ಟ, ಮುದ್ದೇನಹಳ್ಳಿ, ಜೋಳದಹಾಳ್‌ ಪಾಳ್ಯ, ಮಸಗಲಿ, ಮಲ್ಲಂದೂರಿನಲ್ಲಿ ತಲಾ 3, ಮೂಗ್ತಿಹಳ್ಳಿ ಹಾಗೂ ಕೂದುವಳ್ಳಿಯಲ್ಲಿ ತಲಾ 2 ಮತ್ತು ಸಿಂದಿಗರೆ, ಬಸವನಗೋಡಿಯಲ್ಲಿ ತಲಾ 1 ಕಂಬಗಳು ಮುರಿದು ಬಿದ್ದಿವೆ ಎಂದು ಮೆಸ್ಕಾಂ ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ ಬೆಳಿಗ್ಗೆ ತುಂತುರು ಮಳೆಯಾಯಿತು. ತಾಲ್ಲೂಕಿನ ಸಿರವಾಸೆಯಲ್ಲಿ 11 ಮಿ.ಮೀ ಮಳೆಯಾಗಿದೆ.

ಬೆಳಿಗ್ಗೆಯಿಂದಲೂ ಗಾಳಿಯ ಆರ್ಭಟ ಇತ್ತು. ಸಂಜೆ ದಟ್ಟ ಮೋಡ ಕವಿದ ವಾತಾವರಣ ಇತ್ತು.

ಜಿಲ್ಲೆಯ ವಿವಿಧೆಡೆ ಹದ ಮಳೆಯಾಗಿದೆ. ನದಿಗಳು ಮೈದುಂಬಿಕೊಂಡಿವೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.