ADVERTISEMENT

ಜನವಸತಿ ಕೃಷಿ ಪ್ರದೇಶ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:32 IST
Last Updated 20 ಏಪ್ರಿಲ್ 2017, 7:32 IST
ಚಿಕ್ಕಮಗಳೂರು ನಗರದಲ್ಲಿ ಬುಧವಾರ ತಾಲ್ಲೂಕಿನ ಸಿರವಾಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರವಾಸೆ ಮತ್ತು ಸುಗುಡುವಾನಿ ಗ್ರಾಮಸ್ಥರು ಡಾ.ಕಸ್ತೂರಿರಂಗನ್ ವರದಿಯಿಂದ ಜನ ವಸತಿ, ಕೃಷಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶ ಕೈಬಿಡಲು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಿಕ್ಕಮಗಳೂರು ನಗರದಲ್ಲಿ ಬುಧವಾರ ತಾಲ್ಲೂಕಿನ ಸಿರವಾಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರವಾಸೆ ಮತ್ತು ಸುಗುಡುವಾನಿ ಗ್ರಾಮಸ್ಥರು ಡಾ.ಕಸ್ತೂರಿರಂಗನ್ ವರದಿಯಿಂದ ಜನ ವಸತಿ, ಕೃಷಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶ ಕೈಬಿಡಲು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಚಿಕ್ಕಮಗಳೂರು: ಜನ ವಸತಿ, ಕೃಷಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶ ವನ್ನು ಡಾ.ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿಕೊಂಡಿರುವುದನ್ನು ಕೈಬಿಡುವಂತೆ ಆಗ್ರಹಿಸಿ ನಗರದಲ್ಲಿ ಬುಧವಾರ ಸಿರವಾಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರವಾಸೆ ಮತ್ತು ಸುಗುಡುವಾನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು, ಕಸ್ತೂರಿರಂಗನ್‌ ವರದಿ ವಿರುದ್ಧ ಘೋಷಣೆ ಕೂಗಿದರು. ಪ್ರಧಾನ ಮಂತ್ರಿಗಳು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

‘ಕಸ್ತೂರಿ ರಂಗನ್‌ ಅವರು ಅವೈಜ್ಞಾನಿಕ ಸಮೀಕ್ಷೆ ನಡೆಸಿ ಪಶ್ಚಿಮ ಘಟ್ಟ ಹಾದು ಹೋಗಿರುವ ಭೂಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ್ದಾರೆ. ಅದರೆ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ ಜನ ವಸತಿ, ಕೃಷಿ ಪ್ರದೇಶವನ್ನು ಅವರು ಗಣನೆಗೆ ತೆಗೆದು ಕೊಂಡಿಲ್ಲ. ನೂರಾರು ವರ್ಷಗಳಿಂದ ದಟ್ಟ ಮಲೆನಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೆಳೆಗಾರರು, ಪರಿಸರ ಸ್ನೇಹಿಯಾಗಿ ಬದುಕು ನಡೆಸುತ್ತಿದ್ದಾರೆ. ಕಸ್ತೂರಿರಂಗನ್ ವರದಿ ಯಥಾವತ್‌ ಜಾರಿಯಾದರೆ ಈ ಪ್ರದೇಶದಲ್ಲಿ ವಾಸಿ ಸುತ್ತಿರುವ ಜನರ ಬದುಕು ಸಂಪೂರ್ಣ ನಿರ್ನಾಮ ವಾಗಲಿದೆ’ ಎಂದು ಪ್ರತಿಭಟ ನಾಕಾರರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಾಗರ ಹೋಬಳಿ ಕಸಾಪ ಅಧ್ಯಕ್ಷ ರವಿ.ಕೆಳವಾಸೆ, ‘ಕೇಂದ್ರ ಸರ್ಕಾರದ ಹಸಿರು ಪೀಠ ಕಲಂ 4ರಲ್ಲಿ ಜನ ವಸತಿ, ಕೃಷಿ, ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶವನ್ನು ಸೂಕ್ಷ್ಮ ಪ್ರದೇಶಗಳೆಂದು ಕಾಣಿಸಿರುವುದು ಸರಿಯಲ್ಲ. ಕೇರಳದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಿ ವಸತಿ ಪ್ರದೇಶಗಳನ್ನು ಪಟ್ಟಿಯಿಂದ ಕೈಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ಜನರ ಬದುಕು ಉಳಿಸಿಕೊಡಬೇಕಿದೆ. ಕಸ್ತೂರಿರಂಗನ್ ವರದಿ ಯಥಾವತ್‌ ಜಾರಿಗೊಳಿಸಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲೆಯ 5 ತಾಲ್ಲೂಕುಗಳ 147 ಗ್ರಾಮಗಳು ಕಸ್ತೂರಿ ರಂಗನ್ ವರದಿ ಯಲ್ಲಿ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶ ಪಟ್ಟಿಯಲ್ಲಿದ್ದು, ಚಿಕ್ಕಮಗಳೂರು ತಾಲ್ಲೂಕಿನ 27 ಗ್ರಾಮ ಗಳು, ಕೊಪ್ಪ ತಾಲ್ಲೂಕಿನ 32 ಗ್ರಾಮ ಗಳು, ಮೂಡಿಗೆರೆ ತಾಲ್ಲೂಕಿನ 27 ಗ್ರಾಮಗಳು, ಎನ್‌.ಆರ್.ಪುರ ತಾಲ್ಲೂಕಿನ 35 ಗ್ರಾಮಗಳು ಹಾಗೂ ಶೃಂಗೇರಿ ತಾಲ್ಲೂಕಿನ 26 ಗ್ರಾಮಗಳು ಸೇರಿವೆ. ಚಿಕ್ಕಮಗಳೂರು ತಾಲ್ಲೂಕಿನ ಸಿರವಾಸೆ, ಸುಗುಡುವಾನಿ, ಜಾಗರ, ಬೊಗಸೆ, ಬಾಸಪುರ, ಕಡವತಿ, ಬಿದರೆ ಸುತ್ತಮುತ್ತಲಿನ ಗ್ರಾಮಗಳು ಕಸ್ತೂರಿರಂಗನ್‌ ವರದಿಯಲ್ಲಿವೆ.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಸಂತಾ ಅನಿಲ್‌ಕುಮಾರ್‌, ಕವಿತಾ ಲಿಂಗರಾಜು, ಮುಖಂಡರಾದ ರೂಪಾ, ಹೂವಮ್ಮ, ಜಾರ್ಜ್ ಆಸ್ಟಿನ್, ಪ್ರೇಮಾಕ್ಷಿ ಅಮೀನ್, ಜೆ.ಸಿ.ಲಕ್ಷ್ಮಣ್, ವಿಶ್ವನಾಥ್, ಕೆ.ಜಿ.ಪ್ರಕಾಶ್, ಪ್ರೇಂಕುಮಾರ್ ಹಾಗೂ ಮಲ್ಲಿಕಾ ಕುಳ್ಳನ್, ವಾಸು ಪೂಜಾರಿ, ಸಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾ ಧ್ಯಕ್ಷರು ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.