ADVERTISEMENT

‘ಜಿಲ್ಲಾಧ್ಯಕ್ಷರ ಉಚ್ಚಾಟನೆಗೆ ವರಿಷ್ಠರಿಗೆ ಮೊರೆ’

ಜಿಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:05 IST
Last Updated 20 ಏಪ್ರಿಲ್ 2018, 6:05 IST

ಚಿಕ್ಕಮಗಳೂರು: ‘ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್‌ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ವರಿಷ್ಠರಿಗೆ ಕೋರಲಾಗಿದೆ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ‘ರಂಜನ್ ಅಜಿತ್‌ಕುಮಾರ್‌ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು ಪಕ್ಷವನ್ನು ಒಡೆಯುವ ಮಾತನ್ನಾಡಿದ್ದಾರೆ, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ ಕುಮಾರ್‌ ಅವರ ಹೇಳಿಕೆಯಿಂದ ಎದ್ದಿರುವ ಎಲ್ಲ ಗೊಂದಲಗಳಿಗೂ ಶೀಘ್ರದಲ್ಲಿ ತೆರೆ ಎಳೆಯಲಾಗುವುದು. ಪಕ್ಷ ವಿರೋಧಿ ಹೇಳಿಕೆ ನೀಡುವುದು, ಚಟುವಟಿಕೆ ಮಾಡುವುದನ್ನು ಸಹಿಸುವುದಿಲ್ಲ. ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರು ಎಷ್ಟೇ ಪ್ರಭಾವಿಯಾಗಿದ್ದರೂ ಅದನ್ನು ಸಹಿಸುವುದಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ADVERTISEMENT

ಜೆಡಿಎಸ್‌ ಮುಖಂಡ ಎಸ್.ಎಲ್.ಧರ್ಮೆಗೌಡ ಮಾತನಾಡಿ, ‘ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಅವರ ಪಕ್ಷ ವಿರೋಧಿ ಹೇಳಿಕೆ ಮತ್ತು ಚಟುವಟಿಕೆಯನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈಗಾಗಲೇ ತಿಳಿಸಲಾಗಿದೆ. ರಂಜನ್‌ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ತರೀಕೆರೆ ಕ್ಷೇತ್ರದ ಟಿಕೆಟ್‌ ಪ್ರಬಲ ಆಕಾಂಕ್ಷಿ, ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ ಮಾತನಾಡಿ, ‘ತಾವೂ ಕೂಡ ತರೀಕೆರೆ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪಕ್ಷಗಾಗಿ ದುಡಿದಿದ್ದೇನೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಔಪಚಾರಿಕವಾಗಿ ಶುಕ್ರವಾರ ನಾಮಪತ್ರ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ ಬಿ.ಎಚ್.ಹರೀಶ್, ಜೆಡಿಎಸ್‌ ಮುಖಂಡರಾದ ಆರ್.ದೇವಿಪ್ರಸಾದ್, ಜಯರಾಜ್ಅರಸ್, ದೇವರಾಜ್ ಅರಸ್, ಎಂ.ಡಿ.ರಮೇಶ್, ನಿಸಾರ್ ಅಹಮದ್, ದಿನೇಶ್, ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

**

ಕಾರ್ಯಕರ್ತರನ್ನು ಸಮಾಧಾನಪಡಿಸಲು ತರೀಕೆರೆ ಕ್ಷೇತ್ರಕ್ಕೆ ಹೋಗಿದ್ದೆ. ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಸಭೆಯಲ್ಲಿ ಏನು ನಡೆದಿದೆ ಎಂಬ ಮಾಹಿತಿ ಇಲ್ಲ – ರಂಜನ್‌ ಅಜಿತ್‌ಕುಮಾರ್‌, ಜಿಲ್ಲಾಧ್ಯಕ್ಷ, ಜೆಡಿಎಸ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.