ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ: ತಾಯಿ ಸಾವು

ವೈದ್ಯರ ನಿರ್ಲಕ್ಷ್ಯ: ಮೃತರ ಸಂಬಂಧಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:22 IST
Last Updated 17 ಜುಲೈ 2017, 7:22 IST

ಚಿಕ್ಕಮಗಳೂರು: ಹೆರಿಗೆ ನಂತರ ರಕ್ತ ಸ್ರಾವ ಹೆಚ್ಚಾಗಿದ್ದರಿಂದ ಜಿಲ್ಲಾಸ್ಪತ್ರೆ ಯಿಂದ ಇಲ್ಲಿನ ಅನುರಾಧಾ ನರ್ಸಿಂಗ್‌ ಹೋಮ್‌ಗೆ ಒಯ್ಯಲಾಗಿದ್ದ ತಾಲ್ಲೂಕಿನ ದೇವರಹಳ್ಳಿಯ ಕವಿತಾ (23) ಮೃತಪಟ್ಟಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಮೃತ ಮಹಿಳೆ ಸಂಬಂಧಿ ಕರು ಆರೋಪಿಸಿದ್ದಾರೆ.

ಕವಿತಾ ಅವರು ತಾಲ್ಲೂಕಿನ ಕೃಷ್ಣಶೆಟ್ಟಿ ಮತ್ತು ಸುಶೀಲಮ್ಮ ದಂಪತಿ ಪುತ್ರಿ. ಹಾಸನದ ರಘು ಅವರೊಂದಿಗೆ ಕವಿತಾ ವಿವಾಹವಾಗಿತ್ತು. ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಂಬಂಧಿಕ ಜಗದೀಶ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕವಿತಾಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಶನಿವಾರ ನಸುಕಿನ 4 ಗಂಟೆ ವೇಳೆಗೆ ಜಿಲ್ಲಾಸ್ಪತ್ರೆಗೆ ಕರೆತಂದೆವು. 5 ಗಂಟೆ ಹೊತ್ತಿಗೆ ದಾಖಲು ಮಾಡಿ ಕೊಂಡರು. 6.30ರ ಹೊತ್ತಿಗೆ ಶುಶ್ರೂಷಕಿ ಯೊಬ್ಬರು ಗಂಡು ಮಗು ಜನಿಸಿದೆ ಎಂದು ತಿಳಿಸಿದರು. ಆದರೆ, ತಾಯಿಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ’ ಎಂದರು.

ADVERTISEMENT

‘ತಾಯಿಯನ್ನು ಜಿಲ್ಲಾಸ್ಪತ್ರೆ ವೈದ್ಯರೇ ಅನುರಾಧಾ ಆಸ್ಪತ್ರೆಗೆ ಒಯ್ದಿದ್ದಾರೆ. ತಾಯಿ ಮೃತಪಟ್ಟಿರುವುದನ್ನು ಮಧ್ಯಾಹ್ನ ತಿಳಿಸಿದ್ದಾರೆ. ಹೆರಿಗೆ ವೇಳೆ ತಾಯಿ ಮೃತಪಟ್ಟಿರುವ ಶಂಕೆ ಇದೆ. ಹೆರಿಗೆಗೆ ದಾಖಲಿಸಿಕೊಂಡಿದ್ದ ವೈದ್ಯೆ ಡಾ.ಉಮಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮಗು ವನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿರುವು ದಾಗಿ ಹೇಳಿದ್ದಾರೆ. ಮಗುವನ್ನೂ ನಮಗೆ ತೋರಿಸಿಲ್ಲ’ ಎಂದು ದೂರಿದರು.

ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೊಡ್ಡಮಲ್ಲಪ್ಪ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ‘ಹೆರಿಗೆ ನಂತರ ರಕ್ತಸ್ರಾವ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಷನ್‌ ಸೌಕರ್ಯ ಇಲ್ಲದಿದ್ದರಿಂದ ಮಹಿಳೆಯನ್ನು ಖಾಸಗಿ ನರ್ಸಿಂಗ್‌ ಹೋಮ್‌ಗೆ ಒಯ್ಯಲಾಗಿದೆ’ ಎಂದರು.

**

ಅಂತರ ಪಾಲಿಸಿಲ್ಲ: ಡಾ.ದೊಡ್ಡಮಲ್ಲಪ್ಪ
ಕವಿತಾ ಅವರಿಗೆ ಇದು ಎರಡನೇ ಹೆರಿಗೆ. ವರ್ಷದ ಹಿಂದೆ ಸಿಜೇರಿಯನ್‌ ಹೆರಿಗೆಯಾಗಿದೆ. ಒಮ್ಮೆ ಸಿಜೇರಿಯನ್‌ ಆದ ನಂತರ ಇನ್ನೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರ ಕಾಯ್ದುಕೊಳ್ಳಬೇಕು. ಈ ದಂಪತಿ ಅದನ್ನು ಪಾಲಿಸಿಲ್ಲ. ಹೆರಿಗೆ ನಂತರ ರಕ್ತಸ್ರಾವ ಹೆಚ್ಚಾಗಿ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು  ಡಾ.ದೊಡ್ಡಮಲ್ಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.