ADVERTISEMENT

ಟ್ಯಾಂಕರ್ ಮೂಲಕ ನೀರು ಪೂರೈಕೆ

ಅಜ್ಜಂಪುರ: ಬತ್ತಿದ ಕೊಳವೆಬಾವಿ, ಟ್ಯಾಂಕರ್ ನೀರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:02 IST
Last Updated 18 ಫೆಬ್ರುವರಿ 2017, 7:02 IST
ಅಜ್ಜಂಪುರ: ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸುವ ಗ್ರಾಮ ಪಂಚಾಯಿತಿಗೆ ಸೇರಿದ ಹಲವು ಕೊಳವೆ ಬಾವಿಗಳು ಬತ್ತಿದ್ದು, ಪ್ರಸ್ತುತ ಟ್ಯಾಂಕರ್ ಮೂಲಕ ಒದಗಿಸಲಾಗುತ್ತಿರುವ ನೀರು ಗ್ರಾಮಸ್ಥರಿಗೆ ಆಸರೆಯಾಗಿದೆ.
 
ಈ ಮೊದಲು ಇದ್ದ ಕೊಳವೆ ಬಾವಿಗಳ ಪೈಕಿ ಹಲವು ಬತ್ತಿವೆ. ಇನ್ನು ಕಳೆದೆರಡು ದಿನಗಳ ಹಿಂದೆ ಶಾಸಕರ ಅನುದಾನದಲ್ಲಿ ಕೊರೆಯಿಸಲಾಗಿರುವ 2 ಕೊಳವೆ ಬಾವಿಗಳಲ್ಲಿ ನೀರು ದೊರೆತಿಲ್ಲ. ಎರೆಹೊಸೂರು ರಸ್ತೆಯಲ್ಲಿನ 2 ಕೊಳವೆ ಬಾವಿಗಳು ಮಾತ್ರ ಉತ್ತಮ ನೀರು ನೀಡುತ್ತಿದ್ದು, ಅದೇ ನೀರನ್ನು ಗ್ರಾಮಕ್ಕೆ ಪೂರೈಸಲು ಬಳಸಿಕೊಳ್ಳಲಾಗುತ್ತಿದೆ.
 
ಅಲ್ಲದೆ, ಇದೇ ರಸ್ತೆಯಲ್ಲಿ ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಹೆಚ್ಚಿನ ಅಂತರ್ಜಲ ಸಂಗ್ರಹವಾಗಿದೆ. ಈ ನೀರನ್ನು ಗ್ರಾಮಸ್ಥರಿಗೆ ಬಳಸಲು ಪೂರೈಸುವ ಸಂಬಂಧ ಕಾಮಗಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ನೀರನ್ನು ಗ್ರಾಮಸ್ಥರಿಗೆ ಒದಗಿಸಲಾಗುತ್ತದೆ ಎನ್ನಲಾಗಿದೆ.
 
‘ಗ್ರಾಮದಲ್ಲಿ ನೀರಿನ ಕೊರತೆ ಹೆಚ್ಚಿದೆ. ಮೊದಲು ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಪ್ರತೀ ದಿನ 15 ಟ್ಯಾಂಕ್ ನೀರನ್ನು ದೊಡ್ಡ ನೀರಿನ ಟ್ಯಾಂಕ್‌ನಲ್ಲಿ ಸಂಗ್ರಹಿಸಿಕೊಂಡು, ಹಂತಹಂತವಾಗಿ ಎಲ್ಲ ನಿವಾಸಿಗಳಿಗೂ ನೀಡಲಾಗುತ್ತಿದೆ. ನೀರಿನ ಕೊರತೆ ತಹಬದಿಗೆ ಬಂದ ಕೂಡಲೇ ಹೊಸದಾಗಿ ₹ 5 ಲಕ್ಷ ವೆಚ್ಚದಲ್ಲಿ ಮುಖ್ಯ ಪೈಪ್ ಅಳವಡಿಕೆ ಕಾರ್ಯ ನಡೆಸಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.
 
ಕ್ಷೇತ್ರದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು 3 ದಿನಗಳಿಂದ ನೀರು ಪೂರೈಕೆಗೆ ಉಚಿತವಾಗಿ ಟ್ಯಾಂಕರ್ ನೀರು ಒದಗಿಸಿ ದ್ದಾರೆ. ಈ ಟ್ಯಾಂಕರ್‌ನಿಂದ ತುರ್ತು ಅಗತ್ಯವಿರುವ ನಿವಾಸಿಗಳಿಗೆ ನೇರವಾಗಿ ನೀರು ಪೂರೈಸುತ್ತಿದೆ. ಬೇಸಿಗೆ ಕಳೆಯುವ ತನಕವೂ ಟ್ಯಾಂಕ್ ಮೂಲಕ ನೀರು ಪೂರೈಸುವುದನ್ನು ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.