ADVERTISEMENT

ಡಿ.ಸಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

ದಲಿತರ ಜಾಗ ಸವರ್ಣೀಯರ ಆಟದ ಮೈದಾನಕ್ಕೆ ಬಳಕೆ–ಆರೋಪ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:44 IST
Last Updated 16 ಜನವರಿ 2017, 5:44 IST
ಚಿಕ್ಕಮಗಳೂರು ನಗರದಲ್ಲಿ ಗಡಬನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬ ಹಿಂದಿನಿಂದ ಶವ ಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶವವನ್ನಿಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ನಗರದಲ್ಲಿ ಗಡಬನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬ ಹಿಂದಿನಿಂದ ಶವ ಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶವವನ್ನಿಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.   

ಚಿಕ್ಕಮಗಳೂರು: ಅನಾದಿಕಾಲದಿಂದ ಶವ ಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿ ಶವ ಸಂಸ್ಕಾರ ನಡೆಸದಂತೆ ಜಿಲ್ಲಾಡಳಿತ ಪೊಲೀಸ್‌ ಬಂದೋಬಸ್ತ್‌ ಹಾಕಿದೆ. ಕೂಡಲೇ 2ಎಕರೆ ಜಾಗವನ್ನು ದಲಿತರಿಗೆ ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಗ್ರಾಮಸ್ಥರು  ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಭಾನುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ 50 ಮಂದಿಯನ್ನು ಜಿಲ್ಲಾಡಳಿತ ಬಂಧಿಸಿತು.

ತಾಲ್ಲೂಕಿನ ಕಡಬನಹಳ್ಳಿಯ ಸರ್ವೆ ನಂಬರ್‌ 350ರ 2.36 ಗುಂಟೆ ಜಾಗ ದಲ್ಲಿ ಅನಾದಿಕಾಲದಿಂದಲೂ ದಲಿತರು ಶವಸಂಸ್ಕಾರ ನಡೆಸುತ್ತಿದ್ದೇವೆ. ಹೀಗಿ ದ್ದರೂ ಅಲ್ಲಿ ಶವ ಸಂಸ್ಕಾರಕ್ಕೆ ಪೊಲೀಸ್‌ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ನೂರಾರು ಮಂದಿ  ಅಕಾಲಿಕ ಮರಣ ಹೊಂದಿದ ಸಮುದಾಯದ ಹುಚ್ಚಮ್ಮ ಅವರ ಮೃತದೇಹವನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ 5ಮಂದಿಯನ್ನು ಶವವನ್ನು ಅಂಬುಲೆನ್ಸ್‌ ನಲ್ಲಿ ಪೋಲಿಸ್‌ ಭದ್ರತೆಯೊಂದಿಗೆ ಶವ ಸಂಸ್ಕಾರಕ್ಕೆ ಮುಂದಾಯಿತು.

ಮಧ್ಯಾಹ್ನದಿಂದಲೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ವಾದ್ಯ ಬಾರಿಸಿ, ಧಾರ್ಮಿಕ ವಿಧಿ, ವಿಧಾನಗ ಳನ್ನು ನಡೆಸಿದರು. ನೆರೆದಿದ್ದ ಬಂಧುಗಳು ಕಣ್ಣೀರಿಡುತ್ತಾ ಪೂಜೆ ನೆರವೇರಿಸಿದರು. ಜಿಲ್ಲಾಡಳಿತ ತಕ್ಷಣದಲ್ಲೆ ಸಮುದಾಯಕ್ಕೆ ಹಿಂದಿನಿಂದ ಗ್ರಾಮಸ್ಥರು ಶವಸಂಸ್ಕಾರ ನಡೆಸಿಕೊಂಡು ಬಂದಿದ್ದ 2.36ಗುಂಟೆ ಜಾಗದಲ್ಲೇ ಸ್ಮಶಾನ ಹಾಗೂ ನಿವೇಶನ ಜಾಗ ನೀಡಬೇಕು ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲವೆಂದು ಹಠ ಹಿಡಿದರು.

ಅನಾದಿಕಾಲದಿಂದಲೂ ಗಡ ಬನಹಳ್ಳಿಯಲ್ಲಿ ದಲಿತರು ಶವಸಂಸ್ಕಾರ ಮಾಡುತ್ತಿದ್ದಾರೆ. ಈಗ ಅವಕಾಶವಿ ಲ್ಲವೆಂಬ ಸಬೂಬು ನೀಡುತ್ತಿದ್ದಾರೆ. ಅಲ್ಲಿ ಶವಸಂಸ್ಕಾರ ಮಾಡಬಾರದೆಂದು ಜಿಲ್ಲಾ ಧಿಕಾರಿ ಅಥವಾ ತಹಶೀಲ್ದಾರ್ ಹೇಳಿಲ್ಲ. ಅದು ವಿವಾದಿತ ಜಾಗವಲ್ಲ. ಆದರೆ, ಖಾಸಗಿ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಮಗೆ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿ ಸಿದರು.

ಶವಸಂಸ್ಕಾರ ಜಾಗದಲ್ಲಿ ಆಟದ ಮೈದಾನವಾಗಬೇಕು ಎಂಬುದು ಸವ ರ್ಣೀಯರ ಬೇಡಿಕೆಯಾಗಿದ್ದು, ಆಟದ ಮೈದಾನಕ್ಕಾಗಿ ಸ್ಮಶಾನ ನೀಡದಿರುವು ದರಲ್ಲಿ ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿ ಕಾರಿ ಎಂ.ಎಲ್.ವೈಶಾಲಿ  ಮಾತನಾಡಿ, ಗ್ರಾಮದಲ್ಲಿ ಈವರೆಗೆ ಶವ ಹೂಳುತ್ತಿದ್ದ  ಜಾಗ ಗೋಮಾಳ ಎಂದು ದಾಖಲೆಯಲ್ಲಿದೆ. ಅಲ್ಲಿ ಸವರ್ಣಿಯರಿಗೆ ಪ್ರತ್ಯೇಕ ಸ್ಮಶಾನಗಳಿವೆ. ಅಲ್ಲಿಯೇ ಈ ಶವ ಸಂಸ್ಕಾರ ಮಾಡಬೇಕು. ವಿವಾದಿತ ಸ್ಥಳದಲ್ಲಿ ಹೂಳಲು ಅವಕಾಶ ನೀಡು ವುದಿಲ್ಲ’ ಎಂದರು.

ಅವರ ಹೇಳಿಕೆಯಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು ಹಿಂದಿನಿಂದ ಶವ ಹೂಳುತ್ತಿದ್ದ ಜಾಗಕ್ಕೂ ಗ್ರಾಮಸ್ಥರಿಗೂ ಭಾವನಾತ್ಮಕ ಸಂಬಂಧವಿದೆ. ಈಗ ಬೇರೆ ಕಡೆ ಹೂಳುವುದೆಂದರೆ ಹೇಗೆ ಎಂದು ಪ್ರಶ್ನಿಸಿದರು. ಹಿಂದೂ ಸ್ಮಶಾನ ಎಂದು ಗುರುತಿಸಿರುವ ಜಾಗದಲ್ಲಿ ಸವರ್ಣಿಯರು ಇಲ್ಲಿವರೆಗೆ ಶವ ಸಂಸ್ಕಾರ ಮಾಡುತ್ತಿದ್ದಾರೆ.

ಏಕಾಏಕಿ ಈಗ ನಾವು ಅಲ್ಲಿಗೆ ಹೋದರೆ ಎರಡು ಕೋಮಿನ ನಡುವೆ ಪರಸ್ಪರ ಘರ್ಷಣೆ ನಡೆಯುತ್ತದೆ. ಆದ್ದರಿಂದ ಈಗಿರುವ ಸ್ಮಶಾನದ ಜಾಗದಲ್ಲೇ ಹೆಣ ಹೂಳಲು ಅವಕಾಶ ನೀಡಬೇಕು. ಜಿಲ್ಲಾಧಿಕಾರಿಗಳು ಕೂಡ ಎಪಿಎಂಸಿ ಚುನಾವಣೆ ಬಳಿಕ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದರು. ಅದರಂತೆ ನಮಗೆ ಶವಸಂಸ್ಕಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕ ಬಿ.ಬಿ.ನಿಂಗಯ್ಯ ಪ್ರತಿಭಟನಾ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಗಳು ಇಲ್ಲದ ಹಿನ್ನಲೆಯಲ್ಲಿ ಅವರು ಬಂದ ನಂತರ ಸಭೆಯಲ್ಲಿ ಈ ಬಗ್ಗೆ ಮಾತನಾಡೋಣ. ಹಿಂದಿನಂತೆ ಶವ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ತಹಶೀಲ್ದಾರ್‌ ಮತ್ತು ಪೊಲೀಸರಿಗೆ ತಿಳಿಸಿದರು.  ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಬಗ್ಗೆ ಕೇವಲ ಮೌಖಿಕ ಭರವಸೆ ಬೇಡ, ಜಿಲ್ಲಾಡಳಿತ ಲಿಖಿತ ರೂಪದಲ್ಲಿ ಪತ್ರ ನೀಡಲಿ ಎಂದು ಸಂಜೆವರೆಗೂ ಕುಳಿತರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉದ್ದಪ್ಪ, ಉಮೇಶ್‌ ಕುಮಾರ್, ರುದ್ರೇಶ್, ದೇವಯ್ಯ, ಶಿವಕುಮಾರ್‌, ಗಣೇಶ್‌್, ನಾಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.