ADVERTISEMENT

ತುಕ್ಕು ಹಿಡಿಯುತ್ತಿವೆ ಅಂಗಡಿ ಬಾಗಿಲು!

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:02 IST
Last Updated 22 ಜೂನ್ 2017, 9:02 IST

ಮೂಡಿಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿಯು ನಿರ್ಮಿಸಿರುವ ವಿವಿಧ ವಾಣಿಜ್ಯ ಮಳಿಗೆಗಳು ಉದ್ಘಾಟನೆಯಾಗಿ ವರ್ಷ ಉರುಳಿದರೂ ಹರಾಜು ನಡೆಸದೇ ಕಟ್ಟಡದ ಬಾಗಿಲುಗಳು ತುಕ್ಕು ಹಿಡಿಯುತ್ತಿವೆ.

ಪಟ್ಟಣದ ಛತ್ರ ಮೈದಾನದ ಆದಿಶಕ್ತಿ ದೇವಾಲಯದ ಬಳಿ ಮೀನು, ಕೋಳಿ ಮಾಂಸದ ಅಂಗಡಿಗಳಿಗೆ ನೀಡಲು12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಕಳೆದ ವರ್ಷ ಜೂನ್‌ 17ರಂದು ಅಂದಿನ ಅಧ್ಯಕ್ಷೆ ಆರ್‌. ಪಾರ್ವತಮ್ಮ ಕಾಳಯ್ಯ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿತ್ತು.

ಆದರೆ, ಉದ್ಘಾಟನೆಯಾಗಿ ವರ್ಷ ಕಳೆದರೂ ಇದುವರೆಗೂ ಈ ಮಳಿಗೆಗಳನ್ನು ಹರಾಜು ಮಾಡದೇ ಸರ್ಕಾರಕ್ಕೆ ಲಕ್ಷಾಂತರ ಹಣ ನಷ್ಟವಾಗುವಂತಾಗಿದೆ. ಮಳಿಗೆ ಉದ್ಘಾಟನೆ ವೇಳೆ ಮುಂದಿನ ಒಂದು ತಿಂಗಳಲ್ಲಿ ಹರಾಜು ನಡೆಸಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿರುವ ಮೀನು ಹಾಗೂ ಕೋಳಿ ಮಾಂಸದ ಅಂಗಡಿಗಳನ್ನು ಈ ಮಳಿಗೆಗೆ ಸ್ಥಳಾಂತರಿಸಲಾಗುವುದು ಎಂದು ಉದ್ಘಾಟನಾ ಭಾಷಣದಲ್ಲಾಡಿದ್ದ ಮಾತುಗಳು ಇಂದಿಗೂ ಈಡೇರಿಲ್ಲ!

ADVERTISEMENT

ರಾಷ್ಟ್ರೀಯ ಹೆದ್ದಾರಿ 234ರ ಎಸ್‌ಬಿಎಂ ಬ್ಯಾಂಕ್‌ ಬಳಿ ಎಂಟು ವರ್ಷಗಳ ಹಿಂದೆ ಮುಕ್ತ ನಿಧಿಯಡಿಯಲ್ಲಿ 9 ಮಳಿಗೆಗಳ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿತ್ತು. ಇದನ್ನು ಅಂದಿನ ಅಧ್ಯಕ್ಷೆ ಲತಾ ಲಕ್ಷ್ಮಣ್‌ಶೆಟ್ಟಿ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಹರಾಜು ನಡೆಸಲಾಗಿತ್ತು.

ಆದರೆ, ಹರಾಜಿನ ನಂತರ ದುಬಾರಿ ದರಕ್ಕೆ ಹರಾಜು ನಡೆಸಲಾಗಿದೆ ಎಂಬ ಸಬೂಬು ಹೇಳಿ, ಮಳಿಗೆ ಉದ್ಘಾಟನೆಯಾಗಿ 8 ವರ್ಷ ಕಳೆದರೂ ಇದುವರೆಗೂ ಮಳಿಗೆಗಳನ್ನು ತೆರೆಯದೇ, ಬಾಗಿಲುಗಳು ತುಕ್ಕು ಹಿಡಿಯುತ್ತಿವೆ.

ಬಾಡಿಗೆ ಹಣ ಸದಸ್ಯರಿಗೆ: ಕಳೆದ ವರ್ಷ ಕೋಳಿ ಅಂಗಡಿಗಳನ್ನು ಸ್ಥಳಾಂತರಿಸುವ ಕಾರಣದಿಂದ ಪಟ್ಟಣದಲ್ಲಿರುವ ಮೀನು ಹಾಗೂ ಕೋಳಿ ಅಂಗಡಿಗಳಿಗೆ ಪರವಾ ನಗಿ ನವೀಕರಣ ಮಾಡಿರಲಿಲ್ಲ. ಇದರಿಂದಾಗಿ ಪಟ್ಟಣ ಪಂಚಾಯಿತಿಗೆ ಬರ ಬೇಕಾಗಿದ್ದ ಬಾಡಿಗೆ ಹಣವನ್ನು ಪಟ್ಟಣ ಪಂಚಾಯಿತಿಯ ಪ್ರಭಾವಿ ಸದಸ್ಯರೊಬ್ಬರು ವಸೂಲಿ ಮಾಡಿ, ಕೆಲವು ಸದಸ್ಯರು ಹಂಚಿಕೊಂಡಿದ್ದಾರೆ ಎಂಬ ಆರೋಪ ಪಟ್ಟಣದಲ್ಲಿ ಸುದ್ದಿ ಮಾಡಿತ್ತು.

ಈ ವರ್ಷ ಕೂಡ ಮೀನು ಹಾಗೂ ಕೋಳಿ ಮಾಂಸದ ಅಂಗಡಿಗಳಿಂದ ಬಾಡಿಗೆ ವಸೂಲಿ ಮಾಡಿ ಕೆಲವು ಸದಸ್ಯರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿ ಕರು ಆರೋಪ ಮಾಡಿದ್ದು, ಬೇರೆ ಪಕ್ಷಗಳಿಲ್ಲದ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಸದಸ್ಯರು ಅಲಂಕರಿಸಿದ್ದು, ವಿರೋಧ ಪಕ್ಷವಿಲ್ಲದೇ ಇರುವುದು ಪಟ್ಟಣ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದರೂ ಕೇಳದ ಸ್ಥಿತಿ ಉಂಟಾಗಿದೆ ಎಂಬುದು ಸಾರ್ವಜನಿಕರ ಆರೋಪ.

ವಾಣಿಜ್ಯ ಮಳಿಗೆಗಳ ವಿಷಯದಲ್ಲಿ ಬಾರಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಲಕ್ಷಾಂತರ ಮೊತ್ತ ನಷ್ಟವಾಗಿದೆ. ಅಲ್ಲದೇ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡ ಕುಂಠಿತವಾಗಿದ್ದು, ಕೂಡಲೇ ಪಟ್ಟಣ ಪಂಚಾಯಿತಿಯ ಸೂಪರ್‌ಸೀಡ್‌ಗೆ ಕ್ರಮ ಕೈಗೊಂಡು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಪಟ್ಟಣದ ಜನತೆಯ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.