ADVERTISEMENT

ನಾರುತ್ತಿದೆ ಚಿಕ್ಕಮಗಳೂರು ನಗರ

ನಗರಸಭೆ ಸುತ್ತಮುತ್ತಲಿನ ಶಾಲಾ ಮಕ್ಕಳಿಗೂ ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:12 IST
Last Updated 30 ಜನವರಿ 2017, 7:12 IST
ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ಸುರಿದಿರುವ ಕಸದ ರಾಶಿಯ ಪರಿಣಾಮ ಟೌನ್‌ ಮಹಿಳಾ ಶಾಲೆಗೆ ಕೆಟ್ಟವಾಸನೆ ಹರಡಿದ್ದು, ಕಳೆದೆರಡು ದಿನಗಳಿಂದ ಗ್ರಂಥಾಲಯದಲ್ಲಿ ಕುಳ್ಳಿರಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿರುವುದು.
ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ಸುರಿದಿರುವ ಕಸದ ರಾಶಿಯ ಪರಿಣಾಮ ಟೌನ್‌ ಮಹಿಳಾ ಶಾಲೆಗೆ ಕೆಟ್ಟವಾಸನೆ ಹರಡಿದ್ದು, ಕಳೆದೆರಡು ದಿನಗಳಿಂದ ಗ್ರಂಥಾಲಯದಲ್ಲಿ ಕುಳ್ಳಿರಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿರುವುದು.   

ಚಿಕ್ಕಮಗಳೂರು: ‘ನಗರಸಭೆ ಆವರಣ ದಲ್ಲಿ ಸುರಿದಿರುವ ಕಸದ ರಾಶಿಯಿಂದ ಸುತ್ತಮುತ್ತಲಿನ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿ ಗಳಿಗೂ ಕಸದ ಗಬ್ಬು ವಾಸನೆ ಮುತ್ತಿಕ್ಕುತ್ತಿದೆ!

ನಗರಸಭೆ ಸುತ್ತಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠಕೇಳಬೇಕಾಗಿದೆ. ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ನೌಕರರು ಮೂಗಿಗೆ ಕರವಸ್ತ್ರ ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಗಬ್ಬು ನಾರುತ್ತಿರುವ ವಾಸನೆಗೆ ಮೂಗು ಒಡ್ಡಿಕೊಂಡೇ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.

ಟೌನ್‌ ಮಹಿಳಾ ಶಾಲೆ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಕಸ ತೆರವುಗೊಳಿಸಿ, ನೈರ್ಮಲ್ಯ ಕಾಪಾಡು ವಂತೆ ಶಾಲಾ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದೆ.

ಕಳೆದ 15ದಿನಗಳಿಂದ ನಗರಸಭೆ ಆವರಣದಲ್ಲಿ ಹಸಿ ಹಾಗೂ ಪ್ಲಾಸ್ಟಿಕ್‌ ಕಸ ರಾಶಿ ಹಾಕಿದ್ದಾರೆ. ದಿನ ಕಳೆದಂತೆ ಕಸ ಕರಗಿ ಕೆಟ್ಟವಾಸನೆ ಹರಡುತ್ತಿದೆ. ಸೊಳ್ಳೆ, ನೊಣಗಳು ಹೆಚ್ಚುತ್ತಿದ್ದು, ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತುಂಬಾ ಸಮಸ್ಯೆಯಾಗಿದೆ ಎಂದು ಟೌನ್‌ ಮಹಿಳಾ ಶಾಲೆಯ ಕಾರ್ಯದರ್ಶಿ ಗೀತಾ ಎಂ.ಎಲ್.ಮೂರ್ತಿ ದೂರಿದರು.

ಮಧ್ಯಾಹ್ನದ ವೇಳೆ ಊಟ ಮಾಡುವ ಸಮಯದಲ್ಲಿ ಊಟದ ಮೇಲೆ ನೋಣಗಳು ಕೂರುತ್ತಿವೆ. ಕಳೆದ 2ದಿನಗಳ ಹಿಂದೆ ಕಸದ ರಾಶಿಗೆ ಬೆಂಕಿ ಹಾಕಿದ್ದರ ಪರಿಣಾಮ ಶಾಲೆಯಲ್ಲಿ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ತಾತ್ಕಾಲಿಕ ವಾಗಿಯಾದರೂ ಅಲ್ಲಿ ರಾಸಾಯನಿಕ ಬಳಸುತ್ತಿಲ್ಲ. ಎಸ್ಸೆಸ್ಸೆಲ್ಸಿ ಹಾಗೂ ಇತರೆ ತರಗತಿ ಮಕ್ಕಳಿಗೆ ಪರೀಕ್ಷೆಗಳು ಹತ್ತಿರವಿದೆ. ಶಾಲೆ ಸುತ್ತಲಿರುವ ಪರಿಸ್ಥಿತಿಯಿಂದ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ.

ಜಿಲ್ಲಾಡಳಿತ ಕೂಡಲೇ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಕಸದ ರಾಶಿ ತೆರವುಗೊಳಿಸಬೇಕು ಎಂದು ಶಿಕ್ಷಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.