ADVERTISEMENT

ನಿಫಾ: ಆತಂಕ ಬೇಡ, ನಿರ್ಲಕ್ಷ್ಯವೂ ಬೇಡ

ಅಧಿಕಾರಿಗಳ ಸಭೆಯಲ್ಲಿ ಡಾ.ಅನಿತ್‍ ಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 11:58 IST
Last Updated 4 ಜೂನ್ 2018, 11:58 IST

ಶೃಂಗೇರಿ: ನಿಫಾ ವೈರಾಣು ಜ್ವರದ ಬಗ್ಗೆ ಆತಂಕ ಬೇಡ; ಹಾಗೆಯೇ ನಿರ್ಲಕ್ಷ್ಯವೂ ಸಲ್ಲದು ಎಂದು ನೆಮ್ಮಾರ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅನಿತ್‍ಕುಮಾರ್ ಹೇಳಿದರು.

ಶೃಂಗೇರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಿಫಾ ವೈರಸ್ ಮೂಲಕ ಹರಡುವ ಸೋಂಕಾಗಿದ್ದು, ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಈ ಕಾಯಿಲೆ ಪತ್ತೆಯಾಗಿಲ್ಲ. ಸಾರ್ವಜನಿಕರು ರೋಗ ಬರದಿರುವಂತೆ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಪಕ್ಷಿ ಮತ್ತು ಪ್ರಾಣಿಗಳು ಕಚ್ಚಿದ ಹಣ್ಣು ಸೇವಿಸಬಾರದು. ಬಾವಲಿ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗೆ ಜಾಲರಿ ಅಳವಡಿಸಬೇಕು. ನೀರನ್ನು ಕಾಯಿಸಿ ಕುಡಿಯಬೇಕು. ತಾಜಾ ತಾಳೆ ಹಣ್ಣಿನ ರಸ ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರ ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು. ವೈರಸ್ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತರ ಪದಾರ್ಥವನ್ನು ಇತರರು ಬಳಸಬಾರದು ಎಂದು ಸೂಚಿಸಿದರು.

ADVERTISEMENT

ಜ್ವರ, ತಲೆನೋವು, ತಲೆ ಸುತ್ತುವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ಮುಂತಾದವು ಕಾಯಿಲೆಯ ಲಕ್ಷಣಗಳಾಗಿವೆ. ಇಂತಹ ಯಾವುದೇ ಲಕ್ಷಣ ಕಂಡು ಬಂದರೂ ತಕ್ಷಣ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಕಪ್ಪಗೌಡ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರದೀಪ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಕುಮಾರ್, ಬಿಇಒ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.