ADVERTISEMENT

ನೀರಿಗಾಗಿಯೇ ಯುದ್ಧವಾದರೂ ಅಚ್ಚರಿಯಿಲ್ಲ

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅನಿತಾ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:46 IST
Last Updated 23 ಮಾರ್ಚ್ 2017, 5:46 IST
ತರೀಕೆರೆಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಬುಧವಾರ ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತರೀಕೆರೆಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಬುಧವಾರ ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಕಡೂರು: ಕುಡಿಯುವ ನೀರಿಗಾಗಿಯೇ ಯುದ್ಧಗಳು ನಡೆದರೂ ಅಚ್ಚರಿಯಿಲ್ಲ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅನಿತಾ ಅಭಿಪ್ರಾಯಪಟ್ಟರು.
ಕಡೂರು ಪುರಸಭೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಂಯುಕ್ತವಾಗಿ ಕಡೂರು ಪುರಸಭಾ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಜಲದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಂತ ಅಮೂಲ್ಯ ಸಂಪನ್ಮೂಲವಾದ ನೀರಿನ ಸದ್ಬಳಕೆ ಯತ್ತ ನಾಗರಿಕ ಸಮಾಜ  ಗಮನ ಹರಿಸಬೇಕಾಗಿದ್ದು, ಪ್ರತಿಯೊಬ್ಬರಿಗೂ ಅವಶ್ಯಕವಾದ ನೀರು ಅನಾವಶ್ಯಕವಾಗಿ ಪೋಲಾಗದಂತೆ ತಡೆಯಲು ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ ಎಂದು ನುಡಿದರು.

ಹಿರಿಯ ಸರ್ಕಾರಿ ಅಭಿಯೋಜಕಿ ಬಿ.ಎಸ್.ಮಮತಾ ಮಾತ ನಾಡಿ, ಪ್ರಾಣಿವರ್ಗದಲ್ಲಿ ಮನುಷ್ಯ ಪ್ರಾಣಿಯನ್ನು ಯೋಚನಾ ಶಕ್ತಿಯಿರುವ ಏಕೈಕ ಪ್ರಾಣಿ ಎಂದು ಗುರುತಿಸಿದ್ದು, ಆದರೆ ಆ ಯೋಚನಾಶಕ್ತಿ ನಿಜಕ್ಕೂ ಇದೆಯೇ ಎಂಬ ಅನುಮಾನ ಕಾಡುತ್ತಿದೆ.

ಭೂಮಿಯ ಮೇಲಿರುವ ನೀರಿನಲ್ಲಿ ಶೇ 97 ಉಪ್ಪು ನೀರು, ಉಳಿದ ನೀರಿನಲ್ಲಿ ಶೇ 79 ಮಂಜುಗಡ್ಡೆ, ಶೇ 20 ರಷ್ಟು ಅಂತರ್ಜಲ ಪ್ರಮಾಣವಾಗಿದ್ದು, ಉಳಿದ ಶೇ1 ರಷ್ಟು ಮಾತ್ರ ಸಿಹಿನೀರು ಆಗಿದೆ. ಇಷ್ಟು ಕಡಿಮೆ ಪ್ರಮಾಣ ದಲ್ಲಿರುವ ಕುಡಿಯುವ ನೀರು ಇಲ್ಲವಾದರೆ ಆಗ ಆಗುವ ಸಮಸ್ಯೆಯನ್ನು ಊಹಿಸಲೂ ಅಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.

ಕಡೂರಿನ ಮಟ್ಟಿಗೆ ಭದ್ರಾ ಕುಡಿಯುವ ನೀರನ್ನು ಸತತವಾಗಿ ಪ್ರತಿ ದಿನವೂ ಬಿಡುತ್ತಿದ್ದು, ಆದರೆ ಅದರಲ್ಲಿ ಗಣನೀಯ ಪ್ರಮಾಣದ ನೀರು ವ್ಯರ್ಥವಾಗುತ್ತಿರುವುದನ್ನೂ ಗಮನಿಸಿದ್ದೇನೆ. ಎರಡು ಮೂರು ದಿನಕ್ಕೊಮ್ಮೆ ನೀರು ಬಿಟ್ಟರೆ ಮಿತವ್ಯಯ ಸಾಧಿಸಬಹುದಾಗಿದೆ. ಪುರಸಭೆ ಇದನ್ನು ಗಮನಿಸಲಿ  ಎಂದು ಸಲಹೆ ನೀಡಿದರು.

ಪುರಸಭಾಧ್ಯಕ್ಷ ಎಂ.ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್, ಕಡೂರು ವಕೀಲರ ಸಂಘದ ಅಧ್ಯಕ್ಷ ಚಿದಂಬರ, ಉಪಾಧ್ಯಕ್ಷ ರಾಜು, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎನ್.ಬಷೀರ್ ಸಾಬ್, ಪುರಸಭಾ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.

ತರೀಕೆರೆಯಲ್ಲಿ ನೀರಿಗಾಗಿ ನಡಿಗೆ
ತರೀಕೆರೆ
: ಪಟ್ಟಣದಲ್ಲಿ ಬುಧವಾರ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ವಿಶ್ವ ಜಲ ಸಂರ ಕ್ಷಣಾ ದಿನಾಚರಣೆ ಅಂಗವಾಗಿ ನೀರಿಗಾಗಿ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಾಥಾದ ನೇತೃತ್ವವನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರೀಶ್ ಮಾತನಾಡಿ, ನೀರಿಗಾಗಿ ಮುಂದೆ ಹಲವು ಹೋರಾ ಟಗಳು ನಡೆಯುವ ದಿನಗಳು ಇದ್ದು, ನೀರು ಉಳಿಸಲು ಜನರಲ್ಲಿ ಜಾಗೃತಿ ಅವಶ್ಯಕ ಎಂದರು.

ಎಪಿಎಂಸಿ ನಿರ್ದೇಶಕ ಎಂ.ನರೇಂದ್ರ ಮಾತನಾಡಿ, ಈಗಾ ಗಲೇ ರಾಜ್ಯ ನೀರಿ ಗಾಗಿ ಹಲವು ಹೋರಾಟ ಗಳನ್ನು ಮಾಡಿದೆ. ಶುದ್ಧ ನೀರು ನಮ್ಮೇಲ್ಲರ ಜೀವ ಜಲವಾಗಿದ್ದು ಇದರ ಬಗ್ಗೆ ತಿಳಿವಳಿಕೆ ಅಗತ್ಯ ಎಂದರು. ಮುಖಂಡರಾದ ಸಿರಾಜ್, ದೇವೆಗೌಡ, ಮನ್ಸೂರು ಇದ್ದರು.

‘ನೀರು ಇಂಗಿಸಲು ಕ್ರಮ ಅಗತ್ಯ’
ಮೂಡಿಗೆರೆ:
ದೇಶದ ಪ್ರತಿ ಮನೆಯಲ್ಲೂ ಬಳಸಿದ ನೀರನ್ನು ಇಂಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ನಯನ ತಳವಾರ ಅಭಿಪ್ರಾಯಪಟ್ಟರು.

ಪಟ್ಟಣದ ಮಲೆನಾಡು ಐಟಿಐ ಕಾಲೇಜಿನಲ್ಲಿ ಬುಧವಾರ ಜೇಸಿಐ ಸಂಸ್ಥೆಯಿಂದ ಏರ್ಪಡಿಸಿದ್ದ ವಿಶ್ವ ಜಲದಿನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಮಲೆನಾಡಿನಲ್ಲಿ ನೀರಿನ ಕಾಳಜಿ ಕಡಿಮೆ, ಇಲ್ಲಿ ವಿಪರೀತವಾಗಿ ಸುರಿಯುವ ನೀರನ್ನು ಸುಲಭವಾಗಿ ಹರಿಯ ಬಿಡಲಾಗುತ್ತದೆ. ಮನೆಯಲ್ಲಿ ಬಳಸಿದ ನೀರನ್ನು ಕೂಡ ಅದರ ಮಹತ್ವವಿಲ್ಲದೇ ನಿರುಪಯುಕ್ತ ಗೊಳಿಸಲಾಗುತ್ತದೆ.

ಮಲೆನಾಡಿನಲ್ಲಿ ವ್ಯರ್ಥವಾಗುವ ಮಳೆಯ ನೀರು ಹಾಗೂ ಬಳಸಿದ ನೀರನ್ನು ಭೂಮಿಗೆ ಇಂಗಿಸಿದರೆ ಅಂತರ್ಜಲವನ್ನು ಸುಲಭ ವಾಗಿ ಹೆಚ್ಚಿಸಬಹುದು. ಇದಕ್ಕಾಗಿ ಪ್ರತಿ ಮನೆಗೂ ಯೋಜನೆ ರೂಪಿಸ ಬೇಕು ಎಂದರು.

ಉಪನ್ಯಾಸಕಿ ವನಜಾಕ್ಷಿ ಮಾತ ನಾಡಿ, ಆಧುನಿಕ ಕೃಷಿ ಪದ್ಧತಿಯಲ್ಲಿ ಕೊಳವೆಬಾವಿಗೆ ಆದ್ಯತೆ ನೀಡಲಾ ಗುತ್ತಿದ್ದು, ಆದರೆ ಮಲೆನಾಡಿನಲ್ಲಿ ಕೊಳವೆಬಾವಿಯ ಅಗತ್ಯವಿಲ್ಲ. ತೆರದ ಬಾವಿಗಳನ್ನು ನಿರ್ಮಿಸಿದರೆ ಕೃಷಿ ಚಟುವಟಿಕೆಗೆ ನೀರು ಲಭ್ಯವಾಗುವುದರ ಜತೆಗೆ, ನೀರನ್ನು ಇಂಗಿಸಲು ಸಾಧ್ಯವಾಗುತ್ತದೆ. ಅಂತರ್ಜಲ ಹೆಚ್ಚಳಕ್ಕಾಗಿ ಸರ್ಕಾರವು ಹಲವು ಯೋಜನೆ ಗಳನ್ನು ಜಾರಿಗೊಳಿಸಿದ್ದು, ಅವು ಗಳನ್ನು ಬಳಸಿಕೊಂಡು ನೀರು ಗುಂಡಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಜೇಸಿಐ ಅಧ್ಯಕ್ಷ ನಯನ ಕಣಚೂರು ಮಾತನಾಡಿ, ರಾಜ್ಯದಲ್ಲಿ ನದಿಮೂಲಗಳನ್ನು ಸಂರಕ್ಷಿಸುವ ಕಾರ್ಯವಾಗಬೇಕು. ಇಡೀ ರಾಜ್ಯಕ್ಕೆ ನೀರು ಒದಗಿಸುವ ನದಿಮೂಲಗಳು ಸಂರಕ್ಷಣೆಯಿಲ್ಲದೇ ಬತ್ತಿ ಹೋಗುತ್ತಿರುವುದರಿಂದ ವರ್ಷ ದಿಂದ ವರ್ಷಕ್ಕೆ ನೀರಿನ ಕೊರತೆ ಹೆಚ್ಚಳವಾಗುತ್ತಿದೆ.

ADVERTISEMENT

ಅಲ್ಲದೇ ನದಿಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದು ಕೂಡ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ನದಿಗಳಿಗೆ ಚೆಕ್‌ ಡ್ಯಾಂ ನಿರ್ಮಿಸುವ ಮೂಲಕ ನದಿಯ ನೀರು ಭೂಮಿಗೆ ಸೇರುವಂತೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶುದ್ಧ ನೀರಿನ ಕುರಿತು ಜೇಸಿಐನ ಶ್ರೇಷ್ಠಿ ಪ್ರಾತ್ಯಕ್ಷಿಕೆ ನೀಡಿದರು. ಜೇಸಿಐ ಕಾರ್ಯದರ್ಶಿ ಶಶಿಕಿರಣ್‌, ಉಪಾಧ್ಯಕ್ಷರಾದ ಯೋಗೇಶ್‌, ಮಂಜುನಾಥ್‌, ವಿಶು ಕುಮಾರ್‌, ಬಸವರಾಜು, ಪ್ರಾಂಶು ಪಾಲ ಸಂತೋಷ್‌ ಇದ್ದರು.

‘ಭಾರತದಲ್ಲಿ ನೀರಿನ ಕಾಯ್ದೆ ಜಾರಿಯಾಗಬೇಕು’
ಮೂಡಿಗೆರೆ:
ನೀರಿನ ಕೊರತೆ ಎದುರಿಸುತ್ತಿರುವ ಅರಬ್‌ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವಂತೆ ಭಾರತದಲ್ಲೂ ನೀರಿನ ಕಾಯ್ದೆ ಜಾರಿಯಾಗಬೇಕು ಎಂದು ಸಾಹಿತಿ ಹಳೇಕೋಟೆ ರಮೇಶ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಳೇಕೋಟೆ ಗ್ರಾಮ ದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಕಾರ್ಮಿರಿಗೆ ಏರ್ಪಡಿಸಿದ್ದ ನೀರಿನ ಮಹತ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಳೇಕೋಟೆ ಗ್ರಾಮದಲ್ಲಿ ಕಳೆದ ಐದು ದಶಕಗಳಿಂದ ಸುರಿದ ಮಳೆಯ ದಾಖಲೆಯಿದ್ದು, ಕಳೆದ ವರ್ಷ ಸರಾಸರಿ ಶೇ 50 ರಷ್ಟು ಮಳೆ ಕಡಿಮೆಯಾಗಿದೆ. ವಾರ್ಷಿಕ 100 ಇಂಚು ವಾಡಿಕೆ ಮಳೆಯಾಗಬೇಕು. ಕಳೆದ ವರ್ಷ ಕೇವಲ 55.65 ಇಂಚು ಮಳೆಯಾಗಿದೆ. ಇದಕ್ಕೆ ಪ್ರಾಕೃತಿಕ ವಿಕೋಪ ಕಾರಣವೆಂದು ಹೇಳಲಾಗುತ್ತಿದೆಯಾದರೂ, ನೀರಿನ ಅಸಮರ್ಪಕ ಬಳಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ನೀರು ಪ್ರಾಕೃತಿಕ ಸಂಪತ್ತಾಗಿದ್ದು, ಸ್ವತಃ ಕೊಳವೆಬಾವಿ ನಿರ್ಮಿಸಿ ಕೊಂಡ ವರು ನೀರು ತಮ್ಮ ಸ್ವಂತ ಕೊಳವೆ ಬಾವಿ ಯದ್ದು ಎಂಬ ಕಾರಣಕ್ಕಾಗಿ ಮಿತಿಯಿ ಲ್ಲದೇ ಬಳಸುವ ಪ್ರಕರಣಗಳನ್ನು ಕಂಡಿದ್ದೇವೆ. ಕೆಲವು ಕೃಷಿ ಚಟುವಟಿಕೆ ಯಲ್ಲೂ ಅನಗತ್ಯ ನೀರು ಪೋಲು ಮಾಡುವುದನ್ನು ಕಾಣಬಹುದು. ಇದಕ್ಕೆಲ್ಲಾ ನೀರಿನ ಕಾಯ್ದೆ ಅಸ್ಥಿತ್ವದಲ್ಲಿರ ದಿರುವುದು ಕಾರಣವಾಗಿದೆ.

ಕಾರ್ಮಿಕರು ಜಾಗೃತರಾದರೆ ಅಪಾರ ಪ್ರಮಾ ಣದ ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಲು ಸಾಧ್ಯವಾಗುತ್ತದೆ ಎಂದರು. ಕಾರ್ಮಿಕರಿಗೆ ವಿದೇಶಗಳಲ್ಲಿ ಕೃಷಿ ಚಟುವಟಿಕೆಗೆ ಬಳಸುವ ನೀರಿನ ಮಿತವಾದ ಬಳಕೆಯ ಕುರಿತು ಮಾಹಿತಿ ನೀಡಿದರು. ವಿವಿಧ ಕಾಫಿ ತೋಟಗಳ ಮಾಲೀಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.