ADVERTISEMENT

ಪ್ರೇಮಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:46 IST
Last Updated 5 ಸೆಪ್ಟೆಂಬರ್ 2017, 8:46 IST
ಪ್ರೇಮ ವಿವಾಹವಾದ ಮುಸ್ತಾಕ್ ರಾಜೇಸಾಬ್‌ ನದಾಫ್ ಹಾಗೂ ವಿಜಯಲಕ್ಷ್ಮಿ ಅವರೊಂದಿಗೆ ಪ್ರಮೋದ್ ಮುತಾಲಿಕ್
ಪ್ರೇಮ ವಿವಾಹವಾದ ಮುಸ್ತಾಕ್ ರಾಜೇಸಾಬ್‌ ನದಾಫ್ ಹಾಗೂ ವಿಜಯಲಕ್ಷ್ಮಿ ಅವರೊಂದಿಗೆ ಪ್ರಮೋದ್ ಮುತಾಲಿಕ್   

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮುಸ್ತಾಕ್ ರಾಜೇಸಾಬ್‌ ನದಾಫ್ (28) ಮತ್ತು ವಿಜಯಲಕ್ಷ್ಮಿ(21) ಸೋಮವಾರ ಪರಸ್ಪರ ಹೂವಿನ ಹಾರ ಬದಲಿಸಿಕೊಳ್ಳುವ ಮೂಲಕ ಸಾರ್ವಜನಿಕರ ಎದುರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇದಕ್ಕೆ ಸಾಕ್ಷಿಯಾದರು.

ನಗರದ ಬಸವನಹಳ್ಳಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಸೇವಾ ಸಂಸ್ಥೆ ಸೋಮವಾರ ಆಯೋಜಿಸಿದ್ದ ಗಣಪತಿ ಹೋಮ ಕಾರ್ಯಕ್ರಮದಲ್ಲಿ ಮುಸ್ತಾಕ್ ರಾಜೇಸಾಬ್‌ ನದಾಫ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರಿಗೆ ‘ಪ್ರತಾಪ್’ ಎಂದು ಪ್ರಮೋದ್ ಮುತಾಲಿಕ್ ಮರುನಾಮಕರಣ ಮಾಡಿದ್ದಾರೆ.

ಮುಸ್ತಾಕ್ ಮತ್ತು ವಿಜಯಲಕ್ಷ್ಮಿ ಹುಬ್ಬಳ್ಳಿಯ ಶಿರೇವಾಡದವರು. ಇವರು ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಂತರಧರ್ಮೀಯ ವಿವಾಹಕ್ಕೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದ ಕಾರಣ, ಎರಡು ತಿಂಗಳ ಹಿಂದೆ ಮನೆ ಬಿಟ್ಟು, ಚಿಕ್ಕಮಗಳೂರಿಗೆ ಬಂದು ಮದುವೆಯಾಗಿದ್ದರು.

ADVERTISEMENT

ವರ 8ನೇ ತರಗತಿ ಕಲಿತಿದ್ದು, ಟೈಲ್ಸ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದರು. ವಧು ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಶಿರೇವಾಡದಲ್ಲಿ ಆಕೆಯ ಮನೆಗೆ ಟೈಲ್ಸ್ ಫಿಟ್ಟಿಂಗ್ ಕೆಲಸ ಮಾಡಲು ನದಾಫ್‌ ಹೋಗಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.