ADVERTISEMENT

ಬಸ್‌ ನಿಲುಗಡೆ, ಆದೇಶ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:03 IST
Last Updated 16 ಸೆಪ್ಟೆಂಬರ್ 2017, 9:03 IST

ಚಿಕ್ಕಮಗಳೂರು: ಆದೇಶ ಅನು ಷ್ಠಾನಕ್ಕೆ ಒತ್ತಾಯಿಸಿ ಗ್ರಾಮ ಪಂಚಾ ಯಿತಿ ನೌಕರರು, ಬಸ್‌ ನಿಲುಗಡೆಗೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸಂಘಟನೆ ಯವರು, ರೋಹಿಂಗ್ಯಾ ಮುಸಲ್ಮಾನರ ಮೇಲಿನ ಕ್ರೌರ್ಯ ಖಂಡಿಸಿ ಪಾಪ್ಯುಲರ್ ಫ್ರೆಂಟ್‌ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯವರು ನಗರದಲ್ಲಿ ಶುಕ್ರ ವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ ಎಐಟಿಯುಸಿ ಕಾರ್ಯಕರ್ತರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ವಿರುದ್ಧ ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿ ನೌಕರರ ಬ್ಯಾಂಕ್‌ ಖಾತೆ ಮಾಹಿತಿಯನ್ನು ರಾಜ್ಯ ಸರ್ಕಾರದ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಬೇಕು. ಕನಿಷ್ಠ ವೇತನ ನೀಡಬೇಕು.

ನಿವೃತ್ತಿಯಾಗಿರುವ ನೌಕರರಿಗೆ ನಿವೃತ್ತಿ ಉಪದಾನ ಪಾವತಿಸಬೇಕು. ಬಡ್ತಿ ನೀಡಬೇಕು ಎಂಬ ಆದೇಶಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ಎಐಟಿಯುಸಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ 12,000 ವೇತನ ನೀಡಬೇಕು. ಪಿಎಫ್, ಜನಶ್ರೀ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

‘3 ವರ್ಷಕ್ಕೊಮ್ಮೆ ಪಂಚಾಯಿತಿ ವ್ಯಾಪ್ತಿಯ ತೆರಿಗೆ ಪರಿಷ್ಕರಣೆ ಮಾಡಿ, ಪಂಚಾಯಿತಿ ಆದಾಯ ಹೆಚ್ಚಿಸಬೇಕು. ಅದರಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ನೀಡಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ಪಂಚಾಯಿತಿ ನೌಕರರು ತೊಂದರೆ ಅನುಭ ವಿಸುವಂತಾಗಿದೆ’ ಎಂದು ದೂಷಿಸಿದರು.

ಮೋಹನ್‌ರಾಜ್‌, ಮಂಜಪ್ಪ, ರಾಜು, ಉಮೇಶ್, ಮಂಜು ಇದ್ದರು. ಪಿಎಫ್‌ಐ ಪ್ರತಿಭಟನೆ: ರೋಹಿಂಗ್ಯಾ ಮುಸ್ಲಿಂ ಸಮು ದಾದವರ ಮೇಲೆ ಮಯನ್ಮಾರ್‌ ಸರ್ಕಾರ ಸೇನೆ ಬಳಸಿ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ಆರೋಪಿಸಿ ಪಿಎಫ್‌ಐ ಸಂಘಟನೆ ಯವರು ಪ್ರತಿಭಟನೆ ನಡೆಸಿದರು.

ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್‌ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮ್ಯಾನ್ಮರ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ರೋಹಿಂಗ್ಯಾ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಅಲ್ಲಿನ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಅಸಹಾಯಕ ರೋಹಿಂಗ್ಯಾ ಸಮುದಾಯದವರು ಪ್ರಾಣ ಉಳಿಸಿಕೊಳ್ಳಲು ಬಾಂಗ್ಲಾ, ಮಲೇಶಿಯಾ, ಇಂಡೊನೇಷ್ಯಾ, ಭಾರತಕ್ಕೆ ವಲಸೆ ಹೋಗುತ್ತಿದ್ದಾರೆ. ವಲಸೆ ವೇಳೆ ಕೆಲವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ’ ಎಂದರು.

‘ಭಾರತಕ್ಕೆ ವಲಸೆ ಬಂದ ರೋಹಿಂಗ್ಯಾ ನಿರಾಶ್ರಿತರನ್ನು ದೇಶದ ಭದ್ರತೆ ಕಾರಣ ನೀಡಿ ಕೇಂದ್ರ ಸರ್ಕಾರ ವಾಪಸ್‌ ಕಳುಹಿಸುತ್ತಿರುವುದು ಅಮಾನ ವೀಯ. ರೋಹಿಂಗ್ಯಾ ಜನಾಂಗೀ ಯ ಹತ್ಯೆಯನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಮ್ಯಾನ್ಮರ್ ಸರ್ಕಾರ ರೋಹಿಂಗ್ಯಾ ನಿರಾಶ್ರಿತರನ್ನು ತನ್ನ ದೇಶದ ನಾಗರಿಕರು ಎಂದು ಪರಿಗಣಿಸಬೇಕು. ಅವರಿಗೆ ಪರಿಹಾರ ಘೋಷಿಸಿ ಪುನರ್ವಸತಿ ಕಲ್ಪಿಸಬೇಕು. ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಕಾರ್ಯ ದರ್ಶಿ ಅಬ್ದುಲ್ ಅಜೀಜ್, ಸದಸ್ಯರಾದ ಮುಫ್ತಿ ಅಸ್ಗರ್ಅಲಿ, ಜಮೀರ್ಅಹಮದ್, ಚಾಂದ್‌ ಪಾಷಾ, ಗೌಸ್‌ಮುನೀರ್ಇದ್ದರು.

ಎಬಿವಿಪಿ ಪ್ರತಿಭಟನೆ: ಎಐಟಿ ವೃತ್ತದಲ್ಲಿ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಎಬಿವಿಪಿ ಸಂಘಟನೆಯವರು ಸಾರಿಗೆ ಬಸ್‌ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಎಐಟಿ ವೃತ್ತದಲ್ಲಿ ಬಸ್‌ ಗಳು ನಿಲುಗಡೆ ಮಾಡದಿರು ವುದರಿಂದ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ತೊಂದರೆ ಉಂಟಾಗುತ್ತಿದೆ. ಕೆಲ ನಿರ್ವಾಹಕರು ಬಸ್‌ ಖಾಲಿ ಇದ್ದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸ್ಥಳಕ್ಕೆ ಬಂದ ಸಾರಿಗೆ ವಿಭಾಗೀಯ ತಾಂತ್ರಿಕ ಅಧಿಕಾರಿ ನಾಗರಾಜ ಮೂರ್ತಿ ಮಾತನಾಡಿ, ‘ಎಐಟಿ ವೃತ್ತಕ್ಕೆ ಸಾರಿಗೆ ಇಲಾಖೆ ವತಿಯಿಂದ ಒಂದು ಬೂತ್‌ ಸ್ಥಳಾಂತರಿಸಲಾಗುವುದು. ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗುವುದು. ಎಐಟಿ ವೃತ್ತದಲ್ಲಿ ಬಸ್‌ ನಿಲುಗಡೆ ಕ್ರಮ ವಹಿಸಲಾಗುವುದು. ಅಲ್ಲಿ ಬಸ್‌ ನಿಲ್ಲಿಸದಿದ್ದರೆ ಅಂಥ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು. ಸಂಘಟನೆಯ ಪವನ್, ಸೂರ್ಯ, ದಿಲೀಪ್, ಸಾಗರ್, ಪ್ರಿಯಾಂಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.