ADVERTISEMENT

ಬಿಜೆಪಿ ಸದಸ್ಯರ ಧರಣಿ

ಸಾಮಾನ್ಯ ಸಭೆಯ ನಿರ್ಣಯ ಬದಲಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:17 IST
Last Updated 24 ಮಾರ್ಚ್ 2017, 5:17 IST

ಕಡೂರು: ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನೇ ಬದಲಿಸಿ ಸದಸ್ಯರ ಹಕ್ಕು ಚ್ಯುತಿ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಅಧ್ಯಕ್ಷರ ಮುಂದೆ ಧರಣಿ ಕುಳಿತು ಪ್ರತಿ ಭಟಿಸಿದ ಘಟನೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಗುರುವಾರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ಆರಂಭವಾದ ಕೂಡಲೇ ಸದಸ್ಯ ಜಿಗಣೇಹಳ್ಳಿ ಮಂಜು ಅವರು ಈ ಹಿಂದಿನ ಸಭೆಯಲ್ಲಿ ಅಂಗವಿಕಲರಿಗೆ ಶೇ 3 ಹಣದಲ್ಲಿ ದ್ವಿಚಕ್ರ ವಾಹನವನ್ನು ನೀಡಲು ಪ್ರಸ್ತಾವನೆ ನಾಡಲಾಗಿತ್ತು.

ಆದರೆ ನಂತರದಲ್ಲಿ ಅಂಗವಿಕಲರ ಮೀಸಲು ಹಣವನ್ನು ಅಂಗವಿಕಲರ ಕಟ್ಟಡ ದುರಸ್ತಿಗೊಳಿಸಲು ಈ ಹಣವನ್ನು ನೀಡಲು ಅನುಮೋದನೆ ನೀಡಲಾಗಿದೆ. ಈ ನಿರ್ಣಯ ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾಗಿಲ್ಲ. ಬದಲಾಗಿ ಸಾಮಾನ್ಯ ಸಭೆಯಲ್ಲಲ್ಲದೆ ಅಧ್ಯಕ್ಷರ ಕೊಠಡಿಯಲ್ಲಿ ನಿರ್ಣಯವನ್ನು ತಿದ್ದ ಲಾಗಿದೆ. ಇದರಿಂದ ಸದಸ್ಯರ ಹಕ್ಕು ಚ್ಯುತಿ ಮಾಡಲಾಗಿದೆ ಎಂದು ಆರೋಪಿಸಿದರು.

ಸದಸ್ಯ ಆನಂದನಾಯ್ಕ ಮಾತನಾಡಿ, ಅಧ್ಯಕ್ಷರು ಹೇಳಿದಂತೆ ಕಾರ್ಯ ನಿರ್ವ ಹಣಾ ಅಧಿಕಾರಿಯವರು ನಿರ್ಣಯ ಪುಸ್ತಕಕ್ಕೆ ಮತ್ತೆ ಹೊಸದಾಗಿ ನಿರ್ಣಯ ಸೇರಿಸಿದ್ದಾರೆ. ಇದು ತಪ್ಪು. ಅಧ್ಯಕ್ಷೆ ರೇಣುಕಾ ಉಮೇಶ್ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿಯವರು ಸಭೆಯ ಕ್ಷಮೆ ಕೋರಬೇಕು. ಅಂಗವಿಕಲರ ಕಟ್ಟಡಕ್ಕೆ ನೀಡಿರುವ ಹಣದ ವಿಷಯ ವನ್ನು ಸಾಮಾನ್ಯ ಸಭೆಯ ಮುಂದೆ ತಂದು ಚರ್ಚಿಸಿ ಮತ್ತೆ ಅನುಮೋದನೆ ಪಡೆಯಬೇಕು ಎಂದು ಅಗ್ರಹಿಸಿದರು.

ಈ ಕುರಿತು ಸ್ಪಷ್ಟನೆ ನೀಡಿದ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಪ್ರಸನ್ನ, ಕ್ಷಮೆ ಕೇಳುವಂತಹ ತಪ್ಪು ನಡೆದಿಲ್ಲ. ಸದಸ್ಯರ ಹಕ್ಕಿನ ಚ್ಯುತಿಯೂ ಆಗಿಲ್ಲ. ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡುವ ಹಣವನ್ನು ಅವರಿಗಾಗಿಯೇ ಇರುವ ಭವನದ ದುರಸ್ತಿಗಾಗಿ ಬಳಸಿಕೊಳ್ಳಲು ನೀಡಲಾಗಿದೆ  ಎಂದರು. ತಾಲ್ಲೂಕು ಪಂಚಾಯ್ತಿ ಇಒ ನಯನ, ಯೋಜನಾಧಿಕಾರಿ ವಿಜಯ್, ಸದಸ್ಯರಾದ ಚಂದ್ರಪ್ಪ, ಸವಿತಾಆನಂದ್, ಶ್ವೇತಾ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.