ADVERTISEMENT

ಮನಸ್ಸಿನ ನಿಯಂತ್ರಣದಿಂದ ಯಶಸ್ಸು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:57 IST
Last Updated 6 ನವೆಂಬರ್ 2017, 5:57 IST
ಬಾಳೆಹೊನ್ನೂರಿನ ರಂಭಾಪುರಿ ಫೀಠದಲ್ಲಿ ಶನಿವಾರ ನಡೆದ ಕಾರ್ತಿಕ ಲಕ್ಷ ದೀಪೋತ್ಸವ ಸಮಾರಂಭಕ್ಕೆ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಬಾಳೆಹೊನ್ನೂರಿನ ರಂಭಾಪುರಿ ಫೀಠದಲ್ಲಿ ಶನಿವಾರ ನಡೆದ ಕಾರ್ತಿಕ ಲಕ್ಷ ದೀಪೋತ್ಸವ ಸಮಾರಂಭಕ್ಕೆ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.   

ಬಾಳೆಹೊನ್ನೂರು: ಮನಸ್ಸು ಹೇಳಿದಂತೆ ಮನುಷ್ಯ ಕೇಳಬಾರದು. ನಾವು ಹೇಳಿದಂತೆ ಮನ ಕೆಲಸ ಮಾಡಿದರೆ ಜೀವನವೇ ಸ್ವರ್ಗವಾಗುತ್ತದೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಶನಿವಾರ ರಾತ್ರಿ ನಡೆದ ಕಾರ್ತಿಕ ಲಕ್ಷ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಬಾಹ್ಯ ಸೌಂದರ್ಯ ನಾಗರಿಕತೆಯ ಸಂಕೇತ, ಆಂತರಿಕ ಸೌಂದರ್ಯ ಸಂಸ್ಕೃತಿಯ ಸಂಕೇತವಾಗಿದೆ. ತಾತ್ವಿಕ, ಸಾತ್ವಿಕ ಮೌಲ್ಯಗಳ ಅನುಸಂಧಾನದಿಂದ ಜೀವನ ಉಜ್ವಲಗೊಳ್ಳುತ್ತದೆ. ಮಾನವೀಯತೆಯು ಸಮುದ್ರ ಇದ್ದಂತೆ. ಕೆಲ ಹನಿಗಳು ಅಪವಿತ್ರಗೊಂಡರೆ ಇಡೀ ಸಮುದ್ರವೇ ಅಪವಿತ್ರವಾಗುವುದಿಲ್ಲ. ಅದೇ ರೀತಿ ನಾಲ್ಕಾರು ಜನ ಧರ್ಮ ಕೆಡಿಸಲು ಹೊರಟರೆ ಅದೆಂದೂ ತನ್ನ ಘನತೆಯನ್ನು ಕಳೆದುಕೊಳ್ಳುವುದಿಲ್ಲ’ ಎಂದರು.

‘ಮಾನವನ ಬದುಕು ವೈವಿಧ್ಯದಿಂದ ಕೂಡಿದೆ. ಒಬ್ಬರಂತೆ ಇನ್ನೊಬ್ಬರು ಇಲ್ಲ. ಭೌತಿಕ ಬದುಕು ಬಲಗೊಂಡರೂ ಆಂತರಿಕ ಬದುಕು ದುರ್ಬಲಗೊಳ್ಳುತ್ತಿದೆ. ಸ್ನೇಹ, ಸಂತೃಪ್ತಿ ಸಂತೋಷಗಳೇ ಜೀವನದ ನಿಜವಾದ ಸಂಪತ್ತು ಎಂಬುದನ್ನು ಮರೆಯಬಾರದು’ ಎಂದರು.

ADVERTISEMENT

ವೀರಭದ್ರಸ್ವಾಮಿ ದೇವಸ್ಥಾನ, ರೇಣುಕಾಚಾರ್ಯ ಮಂದಿರ, ಶಕ್ತಿಮಾತೆ ಚೌಡೇಶ್ವರಿ ಮಂದಿರ ಮತ್ತು ಸೋಮೇಶ್ವರ ದೇವಾಲಯಗಳಲ್ಲಿ ಭಕ್ತರು ಲಕ್ಷಾಂತರ ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿದರು. ಶಿಗ್ಗಾವಿಯ ಲಲಿತಾದೇವಿ ಶಿವಪುತ್ರಯ್ಯ ಸುರಗೀಮಠ ಮತ್ತು ಮಕ್ಕಳು ವಿದ್ಯುತ್ ದೀಪಾಲಂಕಾರ ಸೇವೆಯನ್ನು, ಹುಬ್ಬಳ್ಳಿಯ ವಿರೇಶ ಪಾಟೀಲ ಹಾಗೂ ಬಾಳೆಹೊನ್ನೂರು, ಬಾಸಾಪುರ ಮತ್ತು ಕಡವಂತಿ ಭಕ್ತರು ದೀಪಾರಾಧನೆಯ ಸೇವೆ ನೆರವೇರಿಸಿದರು.

ಮುಕ್ತಿ ಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ, ಸಾಲೂರಿನ ಗುರುಲಿಂಗ ಶಿವಾಚಾರ್ಯ, ರಾಯಚೂರು ಶಾಂತಮಲ್ಲ ಶಿವಾಚಾರ್ಯ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ, ಕಾರ್ಜುವಳ್ಳಿ ಶಂಭುಲಿಂಗ ಶಿವಾಚಾರ್ಯ, ಬೇರುಂಡಿ ರೇಣುಕ ಮಹಾಂತ ಶಿವಾಚಾರ್ಯ, ಧಾರುಕಾ ಶಾಸ್ತ್ರೀ,ವಿರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.