ADVERTISEMENT

ಮಲಗಿರುವ ಅಭಿಮಾನ ಶೂನ್ಯರನ್ನು ಎಚ್ಚರಿಸಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:16 IST
Last Updated 13 ನವೆಂಬರ್ 2017, 6:16 IST

ಕಡೂರು: ಮಲಗಿರುವ ಅಭಿಮಾನ ಶೂನ್ಯರನ್ನು ಎಚ್ಚರಿಸಿ, ಅವರಲ್ಲಿ ಕನ್ನಡಾಭಿಮಾನವನ್ನು ತುಂಬಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು. ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಶನಿವಾರ ಮಾರುತಿ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾಷಾವಾರು ಪ್ರಾಂತ್ಯ ರಚನೆಯಾಗಿ ಏಕೀಕರಣವೂ ಆಯಿತು. ಆದರೆ, ಸೊಲ್ಲಾಪುರ, ಅಕ್ಕಲಕೋಟೆ, ಹೊಸೂರು, ಕಾಸರಗೋಡು ಮುಂತಾದ ಕನ್ನಡ ಭಾಷಿಕ ಪ್ರದೇ ಶಗಳು ಕರುನಾಡನ್ನು ಬಿಟ್ಟು ಹೋದವು. ಏಕೀಕರಣವೆಂಬುದು ಅಪೂರ್ಣ ವಾಗಿಯೇ ಉಳಿದಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ಬರಲೇ ಇಲ್ಲ.

ಕನ್ನಡ ಆಡಳಿತ ಭಾಷೆಯಾದರೂ ಇಂದಿಗೂ ಶೇ 70 ರಷ್ಟು ಸರ್ಕಾರಿ ಆದೇಶಗಳು ಆಂಗ್ಲ ಭಾಷೆಯಲ್ಲಿಯೇ ಇದೆ. ನ್ಯಾಯಾಲಯದ ತೀರ್ಪುಗಳೂ ಕನ್ನಡೇತರವಾಗಿರುತ್ತವೆ. ಇಂತಹ ಸಮಯದಲ್ಲಿ ನಾವು ಕನ್ನಡವನ್ನು ಉಳಿಸಬೇಕಾಗಿ ಬಂದಿರುವುದು ವಿಪರ್ಯಾಸ’ ಎಂದರು.

ADVERTISEMENT

‘ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇಲ್ಲಿ ಎಲ್ಲವೂ ಇದೆ. ಕನ್ನಡ ಭಾಷೆಗೆ ತೊಂದರೆ ಇರುವುದು ತಮಿಳು, ತೆಲುಗು ಅಥವಾ ಹಿಂದಿಯಿಂದಲ್ಲ. ಬಂದಿರುವುದು ನಮ್ಮ ಅಭಿಮನ ಶೂನ್ಯತೆಯಿಂದ. ನಮ್ಮ ಪರಭಾಷಾ ವ್ಯಾಮೋಹದಿಂದ. ಮೊತ್ತ ಮೊದಲನೆಯದಾಗಿ ಸಮಾನ ಶಿಕ್ಷಣ ಜಾರಿಗೆ ಬರದಿದ್ದರೆ ಪ್ರಾದೇಶಿಕ ಭಾಷೆಗಳು ಕಣ್ಮರೆಯಾಗುತ್ತದೆ. ಹಾಗಾಗಿ, ಕನ್ನಡಿಗರು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕನ್ನಡ ವನ್ನು ಉಳಿಸಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಕನ್ನಡ ಇಂದಿಗೂ ಉಳಿದಿರುವುದು ಗ್ರಾಮೀಣ ಭಾಗದ ರೈತ ಸಮುದಾಯದಿಂದ. ಹಳ್ಳಿಗಳಲ್ಲಿ ಇಂದಿಗೂ ಶುದ್ಧ ಕನ್ನಡವಿದೆ. ಆದರೆ, ಪರಭಾಷಾ ವ್ಯಾಮೋಹದಿಂದ ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸಲು ಪ್ರೇರೇಪಿಸುತ್ತಿಲ್ಲ. ಎಲ್ಲರೂ ಸೇರಿ ಕನ್ನಡವನ್ನುಳಿಸಲು ಮುಂದಾಗಬೇಕು. ಬಹುಮುಖ್ಯವಾಗಿ ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಬಳಸಲಾರಂಭಿಸಿದರೆ ಕನ್ನಡ ಉಳಿದು ಬೆಳೆಯುತ್ತದೆ’ ಎಂದರು.

ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್, ‘ಕನ್ನಡಿಗರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಯಬೇಕು. ಕಾವ್ಯಾನಂದರು ಹೇಳಿದಂತೆ ಕನ್ನಡ ಉಳಿಸುವ ಪ್ರಹಸನದಲ್ಲಿ ಯಾವ ಪಾತ್ರವಾದರೂ ಸರಿ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದರಿಂದ ನಮ್ಮ ಸಮೃದ್ಧ ಕನ್ನಡ ಭಾಷೆ ಉಳಿಯುತ್ತದೆ.

ನಮ್ಮ ಕನ್ನಡ ಸಂಸ್ಕೃತಿಯನ್ನು ಕಲಿತರೆ ಅದು ಭಾರತದ ಸಂಸ್ಕೃತಿಯನ್ನು ಕಲಿತಂತೆ. ಆದ್ದರಿಂದಲೇ ಕನ್ನಡ ಬರೀ ಭಾಷೆಯಲ್ಲ. ಅದು ಸಂಸ್ಕೃತಿ, ಜೀವನ. ಅದೇ ನಮ್ಮನ್ನು ಸಾಕುವ ತಾಯಿ. ಅದನ್ನುಳಿಸುವುದು ನಮ್ಮ ಮನೆಯ ಕೆಲಸ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾ ಕನ್, ತಾಲ್ಲೂಕು ಪಂಚಾಯಿತಿ ಸದಸ್ಯ ಅಕ್ಷಯ್ ಕುಮಾರ್, ಮಾರುತಿ ಆಟೋ ಚಾಲಕರ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.