ADVERTISEMENT

‘ಮಾಡಿದ ತಪ್ಪು ತಿದ್ದಿ ನಡೆದರೆ ಮಾನವ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:55 IST
Last Updated 6 ನವೆಂಬರ್ 2017, 5:55 IST

ಗಿರಿಯಾಪುರ (ಬೀರೂರು): ಮನುಷ್ಯ ಇಂದು ದ್ವೇಷಾಸೂಯೆ ಮತ್ತು ಈರ್ಷ್ಯಾ ಮನೋಭಾವಗಳಲ್ಲಿ ಮನಸ್ಸನ್ನು ಮಸುಕಾಗಿಸಿಕೊಂಡು ತೋಚಿದ ದಾರಿ ಹಿಡಿದಿದ್ದಾನೆ. ಆದರೆ ಮಾಡಿದ ತಪ್ಪು ತಿದ್ದಿ ನಡೆದರೆ ಮಾತ್ರ ಮಾನವೀಯವಾಗಿ ಬಾಳಲು ಸಾಧ್ಯ ಎಂದು ಶಿವಾದ್ವೈತ ತತ್ತ್ವಕೇಂದ್ರದ ಜಿ.ಸಿ.ಸಿದ್ದಪ್ಪ ತಿಳಿಸಿದರು.

ಗ್ರಾಮದ ಮಲ್ಲಿಕಾಂಬಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ಭಾಷ್ಯಾಚಾರ್ಯ ಸದಾಶಿವ ಶಿವಾಚಾರ್ಯ ಸ್ವಾಮಿಗಳ 43ನೇ ಸಂಸ್ಮರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ತಮಗೆ ದೊರೆತ ಪೀಠಾಧಿಕಾರ ತ್ಯಜಿಸಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ , ಗುರುವಿಗೆ ಭಕ್ತರಾಗಿ, ಭಕ್ತರಿಗೆ ಗುರುವಾಗಿ ಮಾದರಿ ಬದುಕು ನಡೆಸಿದ ಸದಾಶಿವ ಶಿವಾಚಾರ್ಯರು ಗಿರಿಯಾಪುರದಂತಹ ಗ್ರಾಮದ ಮಣ್ಣಿಗೆ ಶ್ರೀಗುರು ಕುಮಾರಾಶ್ರಮ ಮತ್ತು ಶಿವಾದ್ವೈತ ತತ್ತ್ವಕೇಂದ್ರಗಳನ್ನು ಸ್ಥಾಪಿಸಿ ಪಾವಿತ್ರ್ಯ ನೀಡಿದವರು.

ಅವರ ಶಿವಾನುಭವ ಸಮ್ಮೇಳನಗಳಿಗೆ ನಾಡಿನ ದಿಗ್ಗಜರು ಬಂದಿದ್ದರು. ಆದರೆ ಇಂದು ನಾವು ಅವರ ನಿರೀಕ್ಷೆಯ ಮಟ್ಟಕ್ಕೆ ಏರಲಾಗದ ವಿಷಾದವಿದೆ. ಧೂಳಿನಿಂದ ಮುಚ್ಚಿರುವ ಜನರ ಮನಸ್ಸಿನ ಕೊಳೆ ತೊಲಗಿ ನಾವು ಅವರ ಹೃದಯದಲ್ಲಿ ನೆಲೆಸುವ ಕೈಂಕರ್ಯಗಳನ್ನು ನಡೆಸೋಣ, ಸಮಾಜವನ್ನು ವಿಚ್ಛಿದ್ರಕಾರಿ ಶಕ್ತಿಗಳಿಂದ ರಕ್ಷಿಸೋಣ ಎಂದು ನುಡಿದರು.

ADVERTISEMENT

ಮುಖ್ಯ ಅತಿಥಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ವಾಮದೇವ ಮಾತನಾಡಿ, ‘ನಮ್ಮ ಬದುಕಿಗೆ ಪ್ರಾಥಮಿಕ ಹಂತದ ಭದ್ರ ಬುನಾದಿ ಹಾಕಿದ ಗ್ರಾಮೀಣ ಪರಿಸರ ನಮ್ಮ ರೆಕ್ಕೆ ಮೂಡಿಸಿ ಸಾಧನೆಯ ಹಾದಿ ತೋರಿಸಿದೆ. ಈ ಋಣ ತೀರಿಸಲು ತಂದೆ–ತಾಯಿಯ ಆಶಯಕ್ಕೆ ತಕ್ಕಂತೆ ಬದುಕಿ,ಸ್ವಹಿತ ಮರೆತು ಸಮಾಜಕ್ಕಾಗಿ ಬದುಕಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹುಣಸಘಟ್ಟ ಹಾಲುಸ್ವಾಮಿ ಮಠದ ಗುರಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಿ.ಸಿ.ಶಿವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಪಂಚಾಯಿತಿ ಸದಸ್ಯೆ ವನಮಾಲಾ ದೇವರಾಜ್‌, ಮಲ್ಲಿಕಾಂಬಾ ಸಮುದಾಯ ಭವನದ ಅಧ್ಯಕ್ಷ ಜಯ ಸೋಮನಾಥ್‌ ಮಾತನಾಡಿದರು. ಬಿ.ಎನ್‌.ಮರುಳಪ್ಪ ಮತ್ತು ಶಾಂತಮ್ಮ ಸ್ಮರಣಾರ್ಥ ಸಮುದಾಯ ಭವನದಲ್ಲಿ ಶುದ್ಧ ಕುಡಿಯುವ ನೀರು ಘಟಕಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಎಸ್‌. ಗುರುಶಾಂತಪ್ಪ, ಲಲಿತಮ್ಮಡಿ.ಸಿ. ಶ್ರೀಕಂಠಪ್ಪ, ವಿರೂಪಾಕ್ಷಪ್ಪ, ಮೃತ್ಯುಂಜಯ, ಮಲ್ಲಿಕಾಂಬಾ ಮಹಿಳಾ ಮಂಡಳಿ ಸದಸ್ಯರು, ಯುವಜನ ಕೂಟದ ಸದಸ್ಯರು, ಶಿವಾದ್ವೈತ ತತ್ತ್ವ ಪ್ರಚಾರ ಕೇಂದ್ರದ ಸದಸ್ಯರು, ಗುರುಕೃಪಾ ವಸತಿನಿಲಯದ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.