ADVERTISEMENT

ಮೂಗು ಮುಚ್ಚಿಕೊಂಡು ನಡೆದ ಸಿಇಒ   

ಮೂಲ ದಾಖಲೆಗಳನ್ನು ಪರಿಶೀಲಿಸಿ ಇ ಸ್ವತ್ತು ದಾಖಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 9:06 IST
Last Updated 2 ಜೂನ್ 2018, 9:06 IST

ಬಾಳೆಹೊನ್ನೂರು: ತಾಲ್ಲೂಕು ಕಚೇರಿಯಲ್ಲಿರುವ ಮೂಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ಸ್ವತ್ತು ದಾಖಲಿಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಗುರುವಾರ ಸೂಚಿಸಿದರು.

ಕಚೇರಿಯ ಅಧಿಕಾರಿಗಳೊಂದಿಗೆ ದಿಢೀರ್ ಬಿ.ಕಣಬೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಸ್ವತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ‘ಇ ಸ್ವತ್ತು ಇತ್ತೀಚಿನ ದಿನಗಳಲ್ಲಿ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಇ ಸ್ವತ್ತು ದಾಖಲಿಸಲು ಖಾತೆದಾರರು ನೀಡುವ ದಾಖಲೆಗಳನ್ನು ತಾಲ್ಲೂಕು ಕಚೇರಿಯಲ್ಲಿರುವ ಮೂಲ ದಾಖಲೆಗಳೊಂದಿಗೆ ತಾಳೆಹಾಕಿ ನೋಡಬೇಕು.ಆ ನಂತರವೇ ಇ ಸ್ವತ್ತು ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ನಂತರ ಅವರು ಚೌಡಿಕೆರೆಯನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಲ್ಲಿಂದ ಸೀದಾ ಕಡ್ಲೆಮಕ್ಕಿಯಲ್ಲಿರುವ ಕಸ ವಿಲೇವಾರಿ ಪ್ರದೇಶಕ್ಕೆ ಭೇಟಿ ನೀಡಿದರು. ಕಸ ವಿಲೇವಾರಿ ಸ್ಥಳದ ಅರ್ಧ ಕಿಮೀ ದೂರದಿಂದಲೇ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡ ಅವರು ಅಲ್ಲಿನ ವಾಸನೆಯನ್ನು ತಡೆಯಲಾರದೆ ಸ್ಥಳಕ್ಕೆ ತೆರಳಿ ಕೆಲವೇ ಕ್ಷಣದಲ್ಲಿ ವಾಪಸಾದರು. ಕಸ ವಿಲೇವಾರಿ ಸ್ಥಳದ ಅವ್ಯವಸ್ಥೆಯನ್ನು ಕಂಡ ಅವರು ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಸೋಮಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಸ್ಥಳದಲ್ಲೇ ಕ್ರಿಮಿನಲ್ ಮೊಕದ್ದಮೆದಾಖಲಿಸುವುದಾಗಿ ಎಚ್ಚರಿಸಿದರು.

ADVERTISEMENT

ಸ್ಥಳದಲ್ಲಿದ್ದ ದುಮ್ಮಿಂಗ್ ವಿನ್ಸಿ ಲೋಬೆ, ಸಮಾಜ ಸೇವಕ ಯು.ಆಶ್ರಫ್ ,ಯಜ್ಞಪುರಷಭಟ್ ಮತ್ತಿತರರು ಕಸ ವಿಲೇವಾರಿಯಿಂದ ಉಂಟಾದ ಅವ್ಯವಸ್ಥೆ ಕುರಿತು ವಿವರವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸಮಸ್ಯೆ ಆಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸತ್ಯಭಾಮ, ‘ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಸುವ ಬಗ್ಗೆ ಪರಿಸರ ಇಲಾಖೆಯ ಎಂಜಿನಿಯರನ್ನು ಬಾಳೆಹೊನ್ನೂರಿಗೆ ಕಳುಹಿಸಿ ಯೋಜನೆ ತಯಾರಿಸಲಾಗುವುದು. ಒಣ ಹಾಗೂ ಹಸಿ ಕಸಗಳನ್ನು ಪ್ರತ್ಯೇಕವಾಗಿ ವಿಲೇವಾರಿ ನಡೆಸಿ ಅಲ್ಲಿನ ನೀರು ಭದ್ರಾ ನದಿ ಸೇರದಂತೆ ತಡೆಯಲು ಸೂಕ್ತ ಕ್ರಮಗಳನ್ನು 10 ದಿನಗಳ ಒಳಗೆ ಕೈಗೊಳ್ಳಲಾಗುವುದು ಎಂದರು.

ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್ ಅವರಿಗೆ ಮುಂದಿನ ಹತ್ತು ದಿನಗಳ ಒಳಗೆ ಕಸ ವಿಲೇವಾರಿಯಲ್ಲಿನ ಅವ್ಯವಸ್ಥೆಯನ್ನು ಸಮರ್ಪಕವಾಗಿ ಸರಿಪಡಿಸಬೇಕು.ಅದಕ್ಕೆ ಭೇಕಾದ ಎಲ್ಲಾ ನೆರವನ್ನೂ ಜಿಲ್ಲಾ ಪಂಚಾಯಿತಿ ವತಿಯಿಂದ ನೀಡುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಸ್ವತ್ತು ದಾಖಲಿಸುವಲ್ಲಿ ಬೇಕಾಬಿಟ್ಟಿಯಾಗಿ ನಿಯಮಗಳನ್ನು ಅನುಸರಿಸುತ್ತಾರೆ ಎಂದು ಆರೋಪಿಸಿ ಸೀಕೆಯ ದುಮ್ಮಿಂಗ್ ವಿನ್ಸಿ ಲೋಬೊ ಅವರು ಸತ್ಯಭಾಮ ಅವರಲ್ಲಿ ದೂರಿದರು. ಕೆರೆ ದಂಡೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನರಸಿಂಹರಾಜಪುರದ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಾಹ ನಡೆಸಲಾಗುವುದು ಎಂದು ತಿಳಿಸಿದರು.

‘ಸಭ್ಯತೆ ಕಲಿತುಕೊಳ್ಳಿ’

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಮತ್ತು ತಂಡದ ಅಧಿಕಾರಿಗಳು ಬಿ.ಕಣಬೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇ-ಸ್ವತ್ತು ದಾಖಲೆಗಳನ್ನು ಪರಿಶೀಲಿಸುತ್ತಿದ್ದ ವೇಳೆ ಪಂಚಾಯಿತಿ ಸದಸ್ಯರೊಬ್ಬರು ದಿಢೀರ್ ಒಳ ಪ್ರವೇಶಿಸಿ ಪಿಡಿಒ ಪರವಾಗಿ ಉತ್ತರಿಸಲು ಮುಂದಾದರು.

ಇದರಿಂದ ಕೋಪಗೊಂಡ ಸತ್ಯಭಾಮ ಅವರು, ‘ನೀವೇನು ಹೇಳುವುದಿದ್ದರೂ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದು ಹೇಳಿ. ಇಲ್ಲಿ ಯಾಕೆ ಬಂದಿದ್ದು’ ಎಂದು ಪ್ರಶ್ನಿಸಿದರು. ಪಿಡಿಒ ಅವರು ಒಂದು ಕಾನೂನು ಹೇಳ್ತಾರೆ ನೀವು ಇನ್ನೊಂದು ಕಾನೂನು ಹೇಳ್ತೀರಾ. ಯಾವುದು ಸರಿ ಎಂದು ತಿಳಿಯಲು ಬಂದಿದ್ದೇನೆ ಎಂದು ಸಮಜಾಯಿಷಿ ನೀಡಲು ಸದಸ್ಯ ಮುಂದಾದರು. ಆದರೆ ಅದನ್ನು ಲೆಕ್ಕಿಸದ ಸತ್ಯಭಾಮ ಅವರು ಸ್ವಲ್ಪ ಸಭ್ಯತೆ ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.