ADVERTISEMENT

ಯೋಜನೆ ಬಡವರಿಗೆ ತಲುಪಿಸಿ

​ಪ್ರಜಾವಾಣಿ ವಾರ್ತೆ
Published 31 ಮೇ 2016, 5:39 IST
Last Updated 31 ಮೇ 2016, 5:39 IST

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಬಡವರು, ರೈತರ ಅನುಕೂಲಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರಿಗೆ ಅವು ತಲುಪುತ್ತಿಲ್ಲ. ಇದೇ ಮನಸ್ಥಿತಿ ಮುಂದುವರಿದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದರು.

ತಾಲ್ಲೂಕಿನ ಹಿರೇಕೊಳಲೆ, ಇಂದಾವರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ನಗರಕ್ಕೆ ಸಮೀಪವಿರುವ ಇಂದಾವರ, ಕುರು ವಂಗಿ, ಹಿರೇಕೊಳಲೆ, ಅಲ್ಲಂಪುರ, ಬೀಕನಹಳ್ಳಿ ಗ್ರಾಮಗಳಲ್ಲಿ ಸರ್ಕಾರಿ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುತ್ತಿರುವುದ ವಿರುದ್ಧ ಅನೇಕ ದೂರುಗಳು ಬಂದಿವೆ. ಅಧಿಕಾರಿಗಳು ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸುತ್ತ-ಮುತ್ತ ಗ್ರಾಮಗಳಲ್ಲಿ ಬೆಳೆ ಯುವ ಭತ್ತ, ರಾಗಿ, ಜೋಳ ಸಂಪೂರ್ಣ ಒಣಗಿದ್ದವು. ಅಧಿಕಾರಿಗಳು ಸ್ಥಳ ಪರಿ ಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಯಾವುದೇ ಬೆಳೆ ನಷ್ಟವಾಗಿಲ್ಲವೆಂಬ ವರದಿ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಪಿಡಿಒಗಳು ಗ್ರಾಮದ ಸಮಗ್ರ ಮಾಹಿತಿಯನ್ನು ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ಇಂದಾವರ ಗ್ರಾಮ ಪಂಚಾಯಿತಿಯಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಯಾವುದೇ ಅನುದಾನ ಮೀಸಲಿಟ್ಟಿಲ್ಲದಿರುವುದನ್ನು ಗಮನಿಸಿ, ಶಾಸಕರು ಕೆಂಡಾಮಂಡಲವಾದರು.

ಗ್ರಾಮಕ್ಕೆ ಅಗತ್ಯ ಕುಡಿಯುವ ನೀರು, ಜಾನುವಾರು ತೊಟ್ಟಿ, ಸ್ವಚ್ಛತೆ ಬಗ್ಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ದೂರುಗಳು ಬಾರದಂತೆ ಜನರಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.

ಜನ್‌ಧನ್ ಯೋಜನೆ ಅಡಿ ಕುಟುಂಬದವರಿಗೆ ವರ್ಷಕ್ಕೆ ₹12 ಪಾವತಿಸುವ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಪ್ರಧಾನ ಮಂತ್ರಿ ಸ್ವಸ್ಥ ಬಿಮಾ ಯೋಜನೆ ಅಡಿ ₹33 ಕಾರ್ಡ್ ಮಾಡಿಸಿದವರಿಗೆ ಅಪಘಾತ ಸಂಭವಿಸಿ ಮೃತಟಪಟ್ಟಲ್ಲಿ ₹1 ಲಕ್ಷ ಪರಿಹಾರ ನೀಡಲಾಗುತ್ತದೆ. ಯುವಕರಿಗೆ ಮುದ್ರಾ ಯೋಜನೆ ಅಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸೋಮ ಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಉಪಾಧ್ಯಕ್ಷ ಸುರೇಶ್, ಸದಸ್ಯ ರಮೇಶ್, ಹಿರೇಕೊಳಲೆ ಗ್ರಾಮದ ಮಂಜುನಾಥ್, ಸುರೇಶ್, ಐ.ಡಿ.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.