ADVERTISEMENT

ರಸ್ತೆ ಅಪಘಾತದಲ್ಲಿ ದೇಶ ಅಗ್ರಸ್ಥಾನ

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:47 IST
Last Updated 11 ಮಾರ್ಚ್ 2017, 6:47 IST
ಚಿಕ್ಕಮಗಳೂರು: ವಾಹನ ಚಾಲಕರು ತಮ್ಮ ಮನೆಯಲ್ಲಿ ಹೆಂಡತಿ ಮಕ್ಕಳು, ಹೆತ್ತವರು ತಮಗಾಗಿ ಕಾದಿರುತ್ತಾರೆ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ಸಲಹೆ ನೀಡಿದರು.
 
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
ಅಪಘಾತಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿ ಗಂಟೆಗೆ 57 ಅಪಘಾತ ಸಂಭವಿಸುತ್ತಿದ್ದು, 17 ಜನರು ಸಾಯುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷ ನಡೆದಿರುವ ಅಫಘಾತಗಳಲ್ಲಿ 11 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಇದರಲ್ಲಿ ಯುವ ಜನತೆಯ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ವಿಷಾದಿಸಿದರು.

ಎಲ್ಲಿಯವರೆಗೆ ವಾಹನ ಚಾಲಕರು ಅಜಾಗರೂಕತೆ, ನಿರ್ಲಕ್ಷ್ಯ ಬಿಟ್ಟು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದಿಲ್ಲ ವೋ ಅಲ್ಲಿಯವರೆಗೂ ಅಪಘಾತಗಳು ಸಂಭವಿಸುವುದು ನಿಲ್ಲುವುದಿಲ್ಲ. ಈ ಹಿನ್ನೆಲೆಯಲ್ಲಿ ಚಾಲಕರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು. ಅತ್ಯಂತ ತಾಳ್ಮೆಯಿಂದ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
 
 ರಸ್ತೆ ಸುರಕ್ಷತೆ ಕುರಿತು ಉಪನ್ಯಾಸ ನೀಡಿದ ವಕೀಲ ಡಿ.ಬಿ.ಸುಜೇಂದ್ರ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಇಲಾಖೆ ಸರಕು ಸಾಗಣೆ ವಾಹನಗಳಲ್ಲಿ ಜನರು ಪ್ರಯಾಣಿ ಸುವುದನ್ನು ಮತ್ತು ವಾಹನಗಳಿಗೆ ರೀಸೋಲ್ ಟೈರ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು.
 
ಜನ ಸಾಗಣೆ ವಾಹನಗಳಿಗೆ ವಿಧಿಸುವ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು, ಎಲ್ಲ ರಸ್ತೆಗಳಲ್ಲೂ ಮಾಹಿತಿ ಫಲಕ ಹಾಕಬೇಕು ಎಂದು ಸಲಹೆ ನೀಡಿದರು. 
 ವಾಹನ ಚಾಲಕರಿಗೆ ದಂಡ ಅಥವಾ ಶಿಕ್ಷೆ ವಿಧಿಸುವುದರಿಂದ ಅಪ ಘಾತ ತಡೆಗಟ್ಟಲು ಸಾಧ್ಯವಿಲ್ಲ. ಚಾಲಕರೇ ಮನ ಪರಿವರ್ತನೆ ಮಾಡಿಕೊಳ್ಳಬೇಕು. ಬೇಕಾಬಿಟ್ಟಿ ವಾಹನ ಚಲಾಯಿಸುವ ಪರಿಪಾಠ ಬಿಡಬೇಕು ಎಂದರು.
 
ಜಂಟಿ ಸಾರಿಗೆ ಆಯುಕ್ತ ಶಿವರಾಜ್ ಬಿ.ಪಾಟೀಲ್ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ 7 ದಿನಗಳ ಕಾಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಸ್ತೆಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ತಿಳಿಸಿದರು.
 
ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ಹೊರ ತರಲಾದ ಕೈಪಿಡಿ ಹಾಗೂ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯ ಹೊರ ತಂದಿರುವ ಸಿ.ಡಿ.ಯನ್ನು ವಾರ್ತಾ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಬಿ. ಮಂಜುನಾಥ್ ಬಿಡುಗಡೆ ಮಾಡಿದರು.
 
ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹು ಮಾನ ವಿತರಿಸಲಾಯಿತು. ಮೌಟೆನ್‌ ವ್ಯೂ ಶಾಲೆ ಪ್ರಾಂಶುಪಾಲರಾದ ಪ್ರೇಮಲತಾ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖ, ಸಾರಿಗೆ ಇಲಾಖೆ ಅಧೀಕ್ಷಕ ರಾಮಚಂದ್ರಪ್ಪ, ಅಧಿಕಾರಿ ಗಳಾದ ಸಂತೋಷ್, ಗಣಪತಿ ಶೇಟ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.