ADVERTISEMENT

‘ರಾಜ್ಯದಲ್ಲೂ ಪರಿವರ್ತನೆಯ ಕಾಲ ದೂರವಿಲ್ಲ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 8:53 IST
Last Updated 31 ಡಿಸೆಂಬರ್ 2017, 8:53 IST
‘ರಾಜ್ಯದಲ್ಲೂ ಪರಿವರ್ತನೆಯ ಕಾಲ ದೂರವಿಲ್ಲ’
‘ರಾಜ್ಯದಲ್ಲೂ ಪರಿವರ್ತನೆಯ ಕಾಲ ದೂರವಿಲ್ಲ’   

ಕಡೂರು: ನರೇಂದ್ರ ಮೋದಿಯವರು ದೇಶವನ್ನು ಪರಿವರ್ತನೆ ಮಾಡುತ್ತಿರುವಂತೆ ರಾಜ್ಯದಲ್ಲಿಯೂ ಪರಿವರ್ತನೆಯ ಶಕೆ ಆರಂಭವಾಗುವ ಕಾಲ ದೂರವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.‌

ಕಡೂರಿನ ತಾಲ್ಲೂಕು ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಲ್ಲಿನ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದು, ನೀರಾವರಿ ಯೋಜನೆಗಳಾಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ 5 ವರ್ಷದಲ್ಲಿ ₹1ಲಕ್ಷ ಕೋಟಿ ತಂದು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಹಸಿರು ಶಾಲು ಹಾಕಲು ನನಗೆ ಯೋಗ್ಯತೆಯಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ರೈತರಿಗೆ ಏನು ಮಾಡಿದೆ ಎಂಬುದು ರೈತರಿಗೆ ತಿಳಿದಿದೆ’ಎಂದರು.

ADVERTISEMENT

‘ನಾನು ಪ್ರಾಮಾಣಿಕವಾಗಿ ಕಡೂರು ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ವಿಷ್ಣುಸಮುದ್ರ ಕೆರೆ ತುಂಬುವ ಕೆಲಸ ಆಗಬೇಕಿದೆ. ಹೆಬ್ಬೆ ನೀರಿನಿಂದ ಮದಗದ ಕೆರೆ ತುಂಬಬೇಕಿದೆ. ಇವೆಲ್ಲಾ ಕೆಲಸ ಆಗಬೇಕೆಂದರೆ ಇಲ್ಲಿ ಮತ್ತೆ ಬಿಜೆಪಿಯ ಕಮಲ ಅರಳಬೇಕಿದೆ’ ಎಂದರು.‌

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಕಡೂರಿನಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನ ಹರಿಸುವರಿಲ್ಲ. ಮುಖ್ಯಮಂತ್ರಿ ಆಪ್ತರಾ ಗಿರುವ ಇಲ್ಲಿನ ಶಾಸಕರು ಕ್ಷೇತ್ರಕ್ಕೆ ಏನು ಮಾಡಿದ್ದಾರೆ? ಅಭಿವೃದ್ಧಿಗಾಗಿ ಬಿಜೆಪಿ ಯನ್ನು ಗೆಲ್ಲಿಸಿ. ಆಗ ಇಲ್ಲಿನ ಚಿತ್ರಣವೇ ಬದಲಾಗುತ್ತದೆ’ ಎಂದು ನುಡಿದರು.

ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದಿದ್ದು, ಮದಗದ ಕೆರೆ ತುಂಬಿಸಲು 1,50 ಟಿ.ಎಂಸಿ ನೀರು ಮೀಸಲಿಟ್ಟಿದ್ದೆವು. ಪರಿಸರ ಕಾರಣದಿಂದ ಆ ಕಾರ್ಯವಾ ಗಲಿಲ್ಲ. ಬಿಜೆಪಿ ಸರ್ಕಾರ ಬಂದರೆ ಸುರಂಗ ಮಾರ್ಗದಲ್ಲಿ ಮದಗದ ಕೆರೆಗೆ ನೀರು ತರುವುದು ಖಚಿತ’ ಎಂದರು.‌‌

ಕಡೂರು ಮಂಡಲಾಧ್ಯಕ್ಷ ಬೆಳ್ಳಿ ಪ್ರಕಾಶ್ ಸ್ವಾಗತಿಸಿದರು. ಮಾಜಿ ಸಚಿವ ರೇಣುಕಾಚಾರ್ಯ. ಶಾಸಕರಾದ ಸಿ.ಟಿ.ರವಿ. ಡಿ.ಎನ್. ಜೀವರಾಜ್, ಆಯ ನೂರು ಮಂಜುನಾಥ್. ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಶ್ರೀ, ಡಿ.ಎನ್.ಸುರೇಶ್. ಮುಖಂಡರಾದ‍ ರೇಖಾಹುಲಿಯಪ್ಪ ಗೌಡ.ಎಂ.ಪಿ.ಕುಮಾರ ಸ್ವಾಮಿ, ಬೀರೂರು ದೇವರಾಜ್, ಸವಿತಾ ರಮೇಶ್, ಕೆ.ಬಿ.ಸೋಮೇಶ್. ಗಿರೀಶ್ ಉಪ್ಪಾರ್, ಕಡೂರು ಉಮೇಶ್,ಬಿ.ಎಸ್.ವೀರಯ್ಯ, ಹುಲಿ ನಾಯ್ಕರ್, ಸ್ಥಳೀಯವಾಗಿ ಬೆಳ್ಳಿಪ್ರಕಾಶ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೊಗಳಿದ್ದು ವಿಶೇಷ. ಆದರೆ ಕಡೂರಿನಲ್ಲಿ ಯಾರಿಗೆ ಟಿಕೆಟ್ ಎಂ‍ಬುದನ್ನು ಖಚಿತವಾಗಿ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.