ADVERTISEMENT

ರೈತರ ಮನೆಯಿಂದಲೇ ಭತ್ತದ ಖರೀದಿಯಾಗಬೇಕು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 6:28 IST
Last Updated 5 ನವೆಂಬರ್ 2017, 6:28 IST

ಮೂಡಿಗೆರೆ: ಬೆಂಬಲ ಬೆಲೆಯಲ್ಲಿ ಖರೀದಿಸುವ ಭತ್ತವನ್ನು ರೈತರ ಮನೆಯಿಂದಲೇ ಖರೀದಿ ಮಾಡುವ ಕಾರ್ಯವಾಗಬೇಕು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ಕಮ್ಮರಡಿ ಎಪಿಎಂಸಿಗೆ ಸೂಚಿಸಿದರು. ಪಟ್ಟಣದ ಹ್ಯಾಂಡ್‌ಪೋಸ್ಟ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆದ ಭತ್ತದ ಬೆಳೆ ತಾಂತ್ರಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನಲ್ಲಿ ಭತ್ತದ ಬೆಳೆ ಕ್ಷೀಣಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದಕ್ಕೆ ಮಲೆನಾಡಿನಲ್ಲಿ ಭತ್ತದ ಬೆಳೆಗೆ ತಗುಲುತ್ತಿರುವ ವೆಚ್ಚದ ಹೆಚ್ಚಳವೇ ಕಾರಣ. ಈ ವೆಚ್ಚವನ್ನು ಕಡಿತಗೊಳಿಸಲು ಯೋಜನೆ ಅಗತ್ಯವಾಗಿದೆ. ರೈತರು ಬೆಳೆಯುತ್ತಿರುವ ಭತ್ತವು ಉತ್ತಮ ಬೆಲೆಗೆ ಕೊಂಡುಕೊಳ್ಳುವಂತಾಗಲು, ಬೆಂಬಲ ಬೆಲೆಯಲ್ಲಿ ಖರೀದಿಸುವ ಕೃಷಿ ಉತ್ಪನ್ನ ಮಾರುಕಟ್ಟೆಯು, ರೈತರ ಮನೆಬಾಗಿಲಿಗೆ ತೆರಳಿ, ಭತ್ತದ ಗುಣಮಟ್ಟವನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಖರೀದಿ ನಡೆಸಬೇಕು. ಇದರಿಂದ ಮಾರುಕಟ್ಟೆಗೆ ಭತ್ತವನ್ನು ತಂದು, ಗುಣಮಟ್ಟವಿಲ್ಲ ಎಂಬ ಕಾರಣಕ್ಕೆ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ. ಗಂಗಾಧರ್‌ ಮಾತನಾಡಿ, ‘ಮಲೆನಾಡಿನ ಭತ್ತದಲ್ಲಿ ವಿಶೇಷ ಪೋಷಕಾಂಶಗಳಿದ್ದು, ರಾಜ್ಯ ಸರ್ಕಾರವು ತಾನು ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿಯನ್ನು ಮಲೆನಾಡಿನ ಭತ್ತದಿಂದ ತಯಾರಿಸಿ ನೀಡಲು ಮುಂದಾದರೆ, ಮಲೆನಾಡಿನ ಭತ್ತಕ್ಕೆ ಸೂಕ್ತ ಬೇಡಿಕೆ ಬರುತ್ತದೆ. ಮಲೆನಾಡಿನ ಭತ್ತದ ತಳಿಗಳನ್ನು ಉಳಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ ಘೊಷಿಸಬೇಕು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಭಾರತದಲ್ಲಿ ಉತ್ಪಾದಿಸಿ ಯೋಜನೆಯಲ್ಲಿ ಮಲೆನಾಡಿನ ಭತ್ತವನ್ನು ಬಳಸಿಕೊಂಡು ಉತ್ಪಾದಿಸಬಹುದಾದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಿದರೆ ಭತ್ತಕ್ಕೆ ಸೂಕ್ತ ಬೇಡಿಕೆ ಸೃಷ್ಟಿಯಾಗುತ್ತದೆ ಎಂದರು.

ADVERTISEMENT

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಾ. ಡಿ.ಎಲ್‌. ಅಶೋಕ್‌ಕುಮಾರ್‌ ಮಾತನಾಡಿ, ‘ಮಲೆನಾಡಿನಲ್ಲಿ ಭತ್ತದ ಉತ್ಪಾದನಾ ವೆಚ್ಚವು ಹೆಚ್ಚಳವಾಗಿದ್ದು, ಇಳುವರಿ ಕೂಡ ಕಡಿಮೆಯಾಗುತ್ತದೆ. ಇದರಿಂದ ಭತ್ತದ ಬೆಳೆಗೆ ಮಾಡುವ ವೆಚ್ಚ ಭತ್ತ ಖರೀದಿಗಿಂತಲೂ ದುಬಾರಿಯಾಗುತ್ತದೆ. ಆದ್ದರಿಂದ ರೈತರು ಭತ್ತದ ಕೃಷಿಯನ್ನು ಕೈಬಿಟ್ಟಿದ್ದು, ಇದರ ಪರಿಣಾಮ ಮಲೆನಾಡಿನ ವಾತಾವರಣದ ಮೇಲಾಗಿದ್ದು, ಅಂತರ್ಜಲಮಟ್ಟ ಕುಸಿಯಲು ಕಾರಣವಾಗಿದೆ’ ಎಂದು ವಿವರಿಸಿದರು.

ಕಾರ್ಯಗಾರದಲ್ಲಿ ಕೃಷಿ ಸಂಶೋಧನಾ ನಿರ್ದೇಶಕ ಡಾ. ಎಂ.ಕೆ. ನಾಯಕ್‌, ವಿಸ್ತರಣಾ ನಿರ್ದೇಶಕ ಟಿ.ಎಚ್‌. ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಸಹಾಯಕ ನಿರ್ದೇಶಕಿ ಕುಮುದಾ, ತೋಟಗಾರಿಕಾ ಮಹಾವಿದ್ಯಾಲಯದ ಡೀನ್‌ ಹನುಮಂತಪ್ಪ, ಗಿರೀಶ್‌, ಎಚ್‌.ಕೆ. ಪೂರ್ಣೇಶ್‌ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.