ADVERTISEMENT

ಲಕ್ಷ್ಮೀ ರಂಗನಾಥಸ್ವಾಮಿ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:43 IST
Last Updated 21 ಏಪ್ರಿಲ್ 2017, 6:43 IST

ಹೊಗರೇಹಳ್ಳಿ(ಬೀರೂರು):  ಹೊಗರೇಹಳ್ಳಿಯ ಇತಿಹಾಸ ಪ್ರಸಿದ್ಧ ಲಕ್ಷ್ಮೀರಂಗನಾಥಸ್ವಾಮಿ ರಥೋತ್ಸವವು ಬಿರು ಬಿಸಿಲಿನ ಮಧ್ಯೆ ಭಕ್ತರ ಸಂಭ್ರಮದ ಪಾಲ್ಗೊಳ್ಳುವಿಕೆಯ ನಡುವೆ ನೆರವೇರಿತು.ಹೊಗರೇಹಳ್ಳಿ ಗ್ರಾಮದ ಹೊಗರೇಕಾನು ಗಿರಿ ತಪ್ಪಲಿನಲ್ಲಿರುವ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಕಲ್ಯಾಣೋತ್ಸವ ನೆರವೇರಿಸಿದ ಬಳಿಕ ಶ್ರೀದೇವಿ ಮತ್ತು ಭೂದೇವಿ ಸಮೇತ ರತ್ನಾಭರಣ ಭೂಷಿತ ರಂಗನಾಥಸ್ವಾಮಿ ಯವರ ಉತ್ಸವ ಮೂರ್ತಿಯನ್ನು ದೇವಾ ಲಯದ ಎದುರಿನ ರಥಾರೋಹಣ ಮಂಟಪಕ್ಕೆ ಕರೆತರಲಾಯಿತು.

ರಥಾರೋಹಣ ಮಂಟಪದಲ್ಲಿ ಮಂಗಳವಾದ್ಯಗಳ ನಡುವೆ ಶ್ರೀಕೃಷ್ಣ ಗಂಧೋತ್ಸವ ಸೇವೆ ನೆರವೇರಿಸಿ ರಜತಾಭಿಷೇಕದ ನಂತರ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು.ಮಧ್ಯಾಹ್ನ 1ಗಂಟೆ ಸುಮಾರಿಗೆ ಸಂಪ್ರದಾಯದಂತೆ ಬಾವುಟ ಹರಾಜು ಕಾರ್ಯಕ್ರಮ ನಡೆದು ಹರಾಜಿನಲ್ಲಿ ಬಾವುಟ ಪಡೆದವರು ರಥಾರೂಢ ಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿದ ಬಳಿಕ, ರಂಗನಾಥ ಸ್ವಾಮಿಯ ಒಕ್ಕಲು ಇರುವ ಭಕ್ತರ ಊರುಗಳ ಹೆಸರಿನಲ್ಲಿ ರಥದ ಚಕ್ರಕ್ಕೆ ತೆಂಗಿನಕಾಯಿ ಸಮರ್ಪಿಸಿ ಅಂಬು ಹೊಡೆದು ಭೂತಬಲಿ ನೆರವೇರಿಸಿದ ನಂತರ ಲಕ್ಷ್ಮೀರಂಗನಾಥ ಸ್ವಾಮಿ ಪಾದಕ್ಕೆ ಗೋವಿಂದಾ..... ಗೋವಿಂದ ಎಂಬ ಉದ್ಘೋಷಗಳ ನಡುವೆ ಭಕ್ತಿ ಭಾವದಿಂದ ರಥಕ್ಕೆ ಬಾಳೆ ಹಣ್ಣು, ದವನ ಎಸೆಯುತ್ತಿದ್ದ  ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಕಡೂರಿನ ಮಾಜಿಶಾಸಕ ದಿ.ಕೆ.ಆರ್‌.ಹೊನ್ನಪ್ಪನವರ ಮಕ್ಕಳು ₹1.80 ಲಕ್ಷಗಳಿಗೆ ಬಾವುಟ ಬಿಡ್‌ಮಾಡಿ ಪಡೆದು ಮೊದಲ ಪೂಜೆ ಸಲ್ಲಿಸುವ ಗೌರವ ಪಡೆದರು. ಸಾಯಂಕಾಲ ರಥಾವರೋಹಣದ ಬಳಿಕ ನವಿ ಲೋತ್ಸವ, ರಾತ್ರಿ ಶೇಷವಾಹನೋತ್ಸವ ಮತ್ತು ಶಯನೋತ್ಸವ ಸೇವೆಗಳು ನೆರವೇರಿದವು.ರಥೋತ್ಸದ ಅಂಗವಾಗಿ ರಂಗನಾಥ ಸ್ವಾಮಿಯವರ ಮೂಲ ಮೂರ್ತಿಯನ್ನು ಸುವರ್ಣಾ ಭರಣ, ಪುಷ್ಪಮಾಲೆಗಳಿಂದ ಅಲಂಕರಿಸ ಲಾಗಿತ್ತು. ಗರ್ಭಗುಡಿಯ ಬಲ ಬದಿಯ ಲ್ಲಿರುವ ಶ್ರೀಲಕ್ಷ್ಮೀದೇವಿ ಯವರ ಮೂರ್ತಿ, ಪ್ರಾಂಗಣದಲ್ಲಿರುವ ಆಂಜನೇಯಸ್ವಾಮಿ,  ಭೂತ ರಾಯರನ್ನೂ ವಿಶೇಷವಾಗಿ ಆಭರಣ ಗಳಿಂದ ಅಲಂಕರಿಸಿದ್ದು ಭಕ್ತರ  ಮನಸೂರೆಗೊಂಡಿತು. ರಥೋತ್ಸವದಲ್ಲಿ ಭಕ್ತರಿಗೆ ಉಚಿತ ಮಜ್ಜಿಗೆ, ಪಾನಕ, ಫಲಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಂಗ ಳೂರು, ಮೈಸೂರು, ಕೊಪ್ಪಳ, ಚಿಕ್ಕ ಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಿಂದ ಭಕ್ತರು ಬಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.