ADVERTISEMENT

ವಾಡಿಕೆ ಮಳೆ– ಶೇ 40 ಕೊರತೆ: ಶಾಸಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:12 IST
Last Updated 6 ಸೆಪ್ಟೆಂಬರ್ 2017, 7:12 IST
ಚಿಕ್ಕಮಗಳೂರಿನ ಹಿರೇಕೊಳೆಲೆ ಕೆರೆಗೆ ಮಂಗಳವಾರ ಶಾಸಕ ಸಿ.ಟಿ.ರವಿ, ಪತ್ನಿ ಪಲ್ಲವಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಅವರು ಬಾಗಿನ ಅರ್ಪಿಸಿದರು.
ಚಿಕ್ಕಮಗಳೂರಿನ ಹಿರೇಕೊಳೆಲೆ ಕೆರೆಗೆ ಮಂಗಳವಾರ ಶಾಸಕ ಸಿ.ಟಿ.ರವಿ, ಪತ್ನಿ ಪಲ್ಲವಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಅವರು ಬಾಗಿನ ಅರ್ಪಿಸಿದರು.   

ಚಿಕ್ಕಮಗಳೂರು: ತಾಲ್ಲೂಕಿನ ಹಿರೇ ಕೊಳಲೆ ಕೆರೆ ಕೋಡಿ ಬಿದ್ದಿದ್ದು, ನಗರಸಭೆ ವತಿಯಿಂದ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಲಾಯಿತು. ಬಾಗಿನ ಅರ್ಪಣೆ ಪೂಜಾ ಕೈಂಕರ್ಯದಲ್ಲಿ ಶಾಸಕ ಸಿ.ಟಿ.ರವಿ, ಪತ್ನಿ ಪಲ್ಲವಿ ಸಿ.ಟಿ.ರವಿ, ನಗರಸಭೆ ಆಯಕ್ತೆ ಎಂ.ವಿ.ತುಷಾರಮಣಿ, ಅಧ್ಯಕ್ಷೆ ಕವಿತಾ ಶೇಖರ್‌, ಉಪಾಧ್ಯಕ್ಷ ರವೀಂದ್ರ ಪ್ರಭು, ಸದಸ್ಯರಾದ ಶಾಮಲಾ ರಾವ್‌, ಪುಷ್ಪರಾಜ್‌, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರಪ್ಪ ಪಾಲ್ಗೊಂಡಿದ್ದರು.

ಶಾಸಕ ಸಿ.ಟಿ.ರವಿ ಸುದ್ದಿಗಾರ ರೊಂದಿಗೆ ಮಾತನಾಡಿ, ‘ತಾಲ್ಲೂಕಿನ ವಾಡಿಕೆ ಮಳೆ ಪ್ರಮಾಣದಲ್ಲಿ ಸುಮಾರು ಶೇ 40 ಕೊರತೆಯಾಗಿದೆ. ಗಿರಿ ಶ್ರೇಣಿಯಲ್ಲಿ ಮಳೆಯಾಗಿದ್ದರಿಂದ ಹಿರೇಕೊಳಲೆ ಕೆರೆಯು ತಡವಾಗಿಯಾ ದರೂ ಈಗ ತುಂಬಿದೆ. ಹೀಗಾಗಿ, ಸಾಂಪ್ರದಾಯಿಕವಾಗಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ್ದೇವೆ.

ಪ್ರತಿವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಎಲ್ಲ ಕೆರೆಗಳಿಗೂ ಬಾಗಿನ ಅರ್ಪಿಸುವಂತಾಗಬೇಕು’ ಎಂದರು.

ADVERTISEMENT

ಈ ಕೆರೆಯು ನಗರದ 10 ವಾರ್ಡ್‌ಗಳ (ಶೇ 30 ಪ್ರದೇಶ) ನೀರಿನ ಅಗತ್ಯವನ್ನು ಪೂರೈಸುತ್ತದೆ. ಅಮೃತ್‌ ಯೋಜನೆಯಲ್ಲಿ ಈ ಕೆರೆಯ ಫಿಲ್ಟರ್‌ ಬೆಡ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಫಿಲ್ಟರ್‌ ನಿರ್ಮಾಣವಾದರೆ ಅನುಕೂಲವಾಗಲಿದೆ ಎಂದು ಹೇಳಿದರು.

ಅನಂತಕುಮಾರ್‌ ಹೆಗಡೆ ಅವರಿಗೆ ಕೇಂದ್ರ ಸಂಪುಟದಲ್ಲಿ ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿ ಸ್ಥಾನ ಸಿಕ್ಕಿರುವುದು ಒಳ್ಳೆಯ ಅವಕಾಶ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಅವರು ಒತ್ತು ನೀಡಬೇಕು ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.