ADVERTISEMENT

ವಿಷಪೂರಿತ ಮೇವು ಸೇವಿಸಿ ನಾಲ್ಕು ಜಾನುವಾರು ಸಾವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 8:33 IST
Last Updated 18 ಜುಲೈ 2017, 8:33 IST

ಕಡೂರು/ಬೀರೂರು: ಕಡೂರು ತಾಲ್ಲೂಕಿನ ಸಣ್ಣೇಗೌಡನ ಕೊಪ್ಪಲಿನಲ್ಲಿ  ರಾಜಪ್ಪ, ರಮೇಶ್ ಎಂಬ ರೈತರಿಗೆ ಸೇರಿದ  ನಾಲ್ಕು ರಾಸುಗಳು ದಿಢೀರ್ ಸಾವನ್ನಪ್ಪಿದ್ದು, ವಿಷಪೂರಿತ ಮೇವು ಸೇವನೆ ಇದಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಭಾನುವಾರ ಸಂಜೆ ಗ್ರಾಮದ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಿಕೊಂಡು ಬಂದು ಮನೆಯ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ರಾತ್ರಿ 7.30 ರ ನಂತರ ರಾಸುಗಳಿಗೆ ನೀರು, ಮುಸುರೆ ಕುಡಿಸಲಾಗಿತ್ತು,  ಸ್ವಲ್ಪ ಸಮಯದ ನಂತರ ಬಂದು ನೋಡಿದಾಗ  ಎಮ್ಮೆ, ಹಸು, 2 ಕರುಗಳು ಮೃತಪಟ್ಟಿದ್ದವು.  ಕೂಡಲೇ ಪಶುವೀಕ್ಷಕರನ್ನು ಕರೆಸಿ, ಪರೀಕ್ಷಿಸಿದಾಗ ರಾಸುಗಳು ಮೃತಪಟ್ಟಿರುವುದಾಗಿ  ದೃಢಪಡಿಸಿದ್ದಾರೆ.

ಕುಟುಂಬದ ಮಹಿಳೆ ಗೀತಾ ಅವರು ಹೇಳುವಂತೆ, ‘ಕಳೆದ ವಾರ ಒಂದು ಗಬ್ಬದ ಎಮ್ಮೆ ಇದೇ ರೀತಿ ಮೃತಪಟ್ಟಿದೆ, ಸದ್ಯ ಕೊಟ್ಟಿಗೆಯಲ್ಲಿ ಇನ್ನೊಂದು ಎಮ್ಮೆ, ₹ 50 ಸಾವಿರ  ಬೆಲೆಬಾಳುವ ಎತ್ತುಗಳು ಇದ್ದು ಅವುಗಳು ಸಹ ಸ್ವಲ್ಪ ಪೇಲವವಾಗಿವೆ.

ADVERTISEMENT

ಇಂತಹ ಸಂದರ್ಭದಲ್ಲಿ ಜಾನುವಾರುಗಳ ದಿಢೀರ್ ಸಾವಿನಿಂದ ಮನೆಯಲ್ಲಿ ಭಯದ ವಾತಾವರಣ ಕಾಣುತ್ತಿದ್ದು, ಕಾರಣ ತಿಳಿದು ಬರದೆ ಆತಂಕ ಆಗಿದೆ. ಉಳಿದಿರುವ ರಾಸು ಗಳನ್ನು ರಕ್ಷಿಸಿಕೊಳ್ಳಲು ಮುಂಜಾಗ್ರತೆ ಯಾಗಿ ಸಾಧ್ಯವಾದಷ್ಟು ಪ್ರಯತ್ನ ಮಾಡು ತ್ತಿದ್ದೇವೆ’ ಎಂಬ ಮಾಹಿತಿ ನೀಡಿದರು.

‘ಪಶು ವೈದ್ಯರ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು, ಸತ್ತಿರುವ ಜಾನುವಾರುಗಳ ಜಠರ ಮತ್ತಿತರ ಅಂಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಮಗೆ ತಿಳಿದಿರುವಂತೆ ಬಿತ್ತನೆ ಮಾಡಿದ ಜೋಳ ಒಂದೆರೆಡು ಅಡಿ ಬೆಳೆದು ಒಣಗಿ ಹೋಗಿದ್ದು, ರಾಸುಗಳು ಈ ಜೋಳದ ಸೊಪ್ಪೆ ತಿಂದಿರಬಹುದು, ಇಂತಹ ಒಣಗಿದ ಬೆಳೆಗಳಲ್ಲಿ ಎಚ್‌ಸಿಎನ್ ಎಂಬ ರಾಸಾಯನಿಕ ಉತ್ಪತ್ತಿ ಯಾಗಿ, ಅದನ್ನು ಸೇವಿಸಿದ ಜಾನುವಾರುಗಳ ರಕ್ತಕ್ಕೆ ಸೇರಿದರೆ ಪಿತ್ತ ಜನಕಾಂಗ ಕಾರ್ಯ ನಡೆಸಲು ಸಾಧ್ಯವಾಗದೆ ಜಾನುವಾರು ಸತ್ತಿರಬಹುದೆಂಬ ಅನುಮಾನ ಮೂಡಿದೆ. ಯಾವುದಕ್ಕೂ ಪ್ರಯೋಗಾಲಯ ವರದಿ ಬಂದ ನಂತರ ಮಾಹಿತಿ ದೊರಕಲಿದೆ. ಗ್ರಾಮದಲ್ಲಿ ಯಾವುದೇ ಜಾನುವಾರುಗಳಿಗೆ ಬೇರೆ ರೋಗದ ಲಕ್ಷಣವಿಲ್ಲ’ ಎಂದು ಪಶು ಇಲಾಖೆಯ ಉಪ ನಿರ್ದೇಶಕ ಡಾ.ಕೆಂಚೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.