ADVERTISEMENT

ಶಾಸಕರು ಮಂಪರು ಪರೀಕ್ಷೆಗೆ ಒಳಪಡಲಿ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:38 IST
Last Updated 10 ಸೆಪ್ಟೆಂಬರ್ 2017, 8:38 IST

ನರಸಿಂಹರಾಜಪುರ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ವಿರುದ್ಧ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಅಸಂಬದ್ಧ ಹೇಳಿಕೆ ನೀಡಿದ್ದು ಎಸ್‌ಐಟಿ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆಗ್ರಹಿಸಿದರು.

ಇಲ್ಲಿನ ನೀರಿನ ಟ್ಯಾಂಕ್ ವೃತ್ತದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಗೌರಿ ಲಂಕೇಶ್ ವಿರುದ್ಧ ಶಾಸಕ ಡಿ.ಎನ್. ಜೀವರಾಜ್ ಅಸಂಬದ್ಧ ಪದ ಬಳಸಿರು ವುದನ್ನು ಪ್ರತಿಭಟನಾಕಾರರು ಖಂಡಿಸಿದರು.

15ವರ್ಷಗಳಿಂದ ಶೃಂಗೇರಿ ಕ್ಷೇತ್ರದ ಶಾಸಕರಾಗಿರುವ ಜೀವರಾಜ್ ಅವರ ಬೇಜವಾಬ್ದಾರಿ ನಡವಳಿಕೆಯಿಂದ ಕ್ಷೇತ್ರದ ಜನತೆ ತಲೆತಗ್ಗಿಸುವಂತಾಗಿದೆ. ಮಲೆನಾಡಿನ ಸಂಸ್ಕೃತಿ, ಪರಂಪರೆಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ. ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ದೂರಿದರು.

ADVERTISEMENT

ಮುಖಂಡ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ‘ಪತ್ರಕರ್ತೆ ಗೌರಿ ಲಂಕೇಶ್ ಪತ್ರಿಕಾರಂಗದ ಮೂಲಕ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಇವರ ಮರಣಕ್ಕೆ ಕಂಬನಿ ಮಿಡಿಯದೆ ಶಾಸಕರು ಭಯ ಭೀತ ವಾತಾವರಣ ಸೃಷ್ಟಿ ಮಾಡುವ ಮೂಲಕ ಮಾಧ್ಯಮಕ್ಕೆ ಬೇದರಿಕೆ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ಸುಂದರೇಶ್, ಸೈಯದ್ ಸಫೀರ್ ಅಹಮ್ಮದ್, ಅಬುಬಕರ್,ಸೈಯದ್ ಖಲೀಲ್ ಸಾಬ್ ಮತ್ತಿತರರಿದ್ದರು. ಪ್ರತಿಭಟನಾ ಸಭೆಯ ನಂತರ ಪತ್ರಕರ್ತೆ ಗೌರಿಲಂಕೇಶ್ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.