ADVERTISEMENT

ಸಂಪರ್ಕ ಸೇತುವೆ ನಿರ್ಮಾಣಕ್ಕೆ ₹20 ಕೋಟಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:59 IST
Last Updated 19 ನವೆಂಬರ್ 2017, 4:59 IST

ನರಸಿಂಹರಾಪುರ: ತಾಲ್ಲೂಕಿನ ಹೊನ್ನೆ ಕೂಡಿಗೆಯಿಂದ ಎನ್.ಆರ್.ಪುರ ಪಟ್ಟಣಕ್ಕೆ ಹತ್ತಿರದ ಮಾರ್ಗಕ್ಕೆ ಭದ್ರಾ ಹಿನ್ನೀರಿನ ಸೇತುವೆ ನಿರ್ಮಾಣಕ್ಕೆ ₹20 ಕೋಟಿ ಅನುದಾನ ನೀಡಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡಿದಾಗ ನರಸಿಂಹರಾಜಪುರಕ್ಕೆ ನಾಮಾಕಿಂತವಾಗಿ ನೂರು ವರ್ಷ ಸಂದ ನೆನಪಿಗೆ ಕೊಡುಗೆ ನೀಡ ಬೇಕೆಂದು ಮನವಿ ಮಾಡಿದಾಗ ಹೊನ್ನೆಕೂಡಿಗೆ– ಎನ್.ಆರ್.ಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ₹5ಕೋಟಿ ಬಿಡುಗಡೆ ಮಾಡಿದ್ದರು. ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿದಾಗ ₹20 ವೆಚ್ಚ ತಗಲುವುದಾಗಿ ತಿಳಿಸಿದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಸಂತೋಷದಿಂದ ಅನುದಾನ ಬಿಡುಗಡೆ ಮಾಡಿದರು ಎಂದರು.

ಸೇತುವೆ ನಿರ್ಮಾಣದಿಂದ ಶಾಲಾಮಕ್ಕಳು, ಗ್ರಾಮಸ್ಥರು ಕೇವಲ 4 ಕಿ.ಮೀ ನಲ್ಲಿ ತಾಲ್ಲೂಕು ಕೇಂದ್ರ ತಲುಪಲು ಸಾಧ್ಯವಾಗಲಿದೆ ಎಂದರು. ತಾಲ್ಲೂಕಿನ ನಾರಾಯಣಗುರು ಸಮುದಾಯ ಭವನ, ಹಳೇಪೇಟೆ ಗುತ್ತ್ಯಮ್ಮ ದೇವಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ ₹50 ಲಕ್ಷ ಅನುದಾನ ನೀಡಿದ್ದಾರೆಂದರು.

ADVERTISEMENT

ಈ ಹಿಂದೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿನ ಕಡಹಿನಬೈಲು ಏತನೀರಾವರಿಗೆ ₹5ಕೋಟಿ ಅನು ದಾನ ನೀಡಿದ್ದರು. ನಂತರ ಇದಕ್ಕೆ ₹16 ಕೋಟಿ ವೆಚ್ಚವಾಗಿತ್ತು. ಇದು ಪೂರ್ಣಗೊಂಡಾಗ ಅದನ್ನು ಸಹ ಕಳೆದ ವರ್ಷ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು ಎಂದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ತಾಲ್ಲೂಕು ಕೇಂದ್ರಕ್ಕೆ ಒಮ್ಮೆಯೂ ಭೇಟಿ ನೀಡದೆ ಪಟ್ಟಣದ ರಸ್ತೆ ಅಭಿವೃದ್ಧಿ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ ₹6 ಕೋಟಿ ಅನುದಾನ ನೀಡಿದ್ದು ಕಾಮಗಾರಿ ಪೂರ್ಣಗೊಂಡಿದೆ. ಸೇತುವೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಅವರ ಜತೆ ಸಚಿವರು ಸಹ ಆಗಮಿಸಲಿದ್ದು ಪಟ್ಟಣದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡುವ ಭರವಸೆ ಇದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರೋಷನ್ ಬೇಗ್ ಅವರು ತಮ್ಮ 25 ವರ್ಷದ ಸ್ನೇಹಿತರಾಗಿದ್ದು ಅತ್ಯಂತ ಕ್ರಿಯಾ ಶೀಲ ಮಂತ್ರಿಯಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಲಿದ್ದಾರೆ ಎಂದರು,

* * 

ತಮ್ಮ ವಿಧಾನಪರಿಷತ್ ಸದಸ್ಯತ್ವ ಅವಧಿ ಪೂರ್ಣ ಗೊಂಡ ನಂತರವೂ ಹುಟ್ಟೂರಾದ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ₹20 ಕೋಟಿ ಅನುದಾನ ತಂದಿರುವುದು ದೊಡ್ಡ ಕೊಡುಗೆ
ಎಂ.ಶ್ರೀನಿವಾಸ್
ವಿಧಾನ ಪರಿಷತ್ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.