ADVERTISEMENT

ಸಂಭ್ರಮದ ಈದ್‌ ಉಲ್‌ ಫಿತ್ರ್‌

ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ; ಪರಸ್ಪರ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:40 IST
Last Updated 16 ಜೂನ್ 2018, 6:40 IST

ಮೂಡಿಗೆರೆ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮುಸ್ಲಿಂನ ಶಾಫಿ ಪಂಗಡದವರು ಪವಿತ್ರ ರಂಜಾನ್‌ ಮಾಸದ ಈದ್‌ ಉಲ್‌ ಫಿತ್ರ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಶಾಫಿ ಪಂಗಡದವರು ಶುಕ್ರವಾರ ಹಬ್ಬ ಆಚರಣೆ ಮಾಡುವುದು ಗುರುವಾರವೇ ನಿಶ್ಚಯವಾಗಿದ್ದರಿಂದ, ಪಟ್ಟಣ ಸೇರಿದಂತೆ, ಗೋಣಿಬೀಡು, ಬಣಕಲ್‌, ಹಂಡಗುಳಿ, ಬಿದರಹಳ್ಳಿ, ಹೊರಟ್ಟಿ, ಮಾಗುಂಡಿ, ಕೊಟ್ಟಿಗೆಹಾರ, ಬಿಳಗುಳ, ಅಣಜೂರು ಮುಂತಾದ ಭಾಗಗಳಲ್ಲಿ ಶುಕ್ರವಾರ ಮುಂಜಾನೆ ಶುಭ್ರವಸ್ತ್ರಗಳನ್ನು ಧರಿಸಿ, ಮಸೀದಿಗೆ ತೆರಳಿ ಈದ್‌ ಉಲ್‌ ಫಿತ್ರ್‌ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದಲ್ಲಿ ಮುಂಜಾನೆ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನಡೆಸಿ ಪರಸ್ಪರ ಶುಭಾಶಯ ಕೋರಿದರು.

ಶ್ವೇತವರ್ಣದ ಬಟ್ಟೆ ಧರಿಸಿ ಮನೆಯಿಂದ ಹೊರಬಂದ ಪುಟ್ಟ ಬಾಲಕರು ಕೂಡ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಪುಟ್ಟ ಮನಸುಗಳು ಪರಸ್ಪರ ಶುಭಾಶಯ ಕೋರುತ್ತಿದ್ದ ದೃಶ್ಯ ಬೆರಗುಗೊಳಿಸಿತು.

ADVERTISEMENT

ಪಟ್ಟಣದ ಬದ್ರಿಯಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಧರ್ಮಗುರು ಖತೀಬ್‌ ಯಾಕೂಬ್‌ ಧಾರಿಮಿ ಮಾತನಾಡಿ, ‘ರಂಜಾನ್‌ ಪವಿತ್ರ ಮಾಸವಾಗಿದ್ದು, ಈ ಮಾಸದಲ್ಲಿ ಅಳವಡಿಸಿಕೊಂಡ ಸಜ್ಜನಿಕೆಯ ನಿಯಮಗಳು ಜೀವನ ಪರ್ಯಾಂತ ಮುಂದುವರಿಸಬೇಕು. ಪರರ ನಿಂದನೆ, ದುರಹಂಕಾರ, ಮೋಸ, ವಂಚನೆಗಳಿಂದ ದೂರ ಉಳಿದು, ಸಮಾಜದಲ್ಲಿ ಸಜ್ಜನರಾಗಿ ಪರಸ್ಪರ ಸೌಹಾರ್ದತೆಯಿಂದ ಬದುಕು ರೂಪಿಸಿಕೊಳ್ಳಬೇಕು’ ಎಂದರು.

ಮಾನವನು ನಿಜವಾಗಿ ಶ್ರೀಮಂತನೆನಿಸಿಕೊಳ್ಳುವುದು ಆತನ ದಾನಧರ್ಮಗಳಿಂದ ಮಾತ್ರ. ಪವಿತ್ರ ರಂಜಾನ್‌ ಮಾಸದಲ್ಲಿ ಕೈಗೊಂಡ ದಾನಧರ್ಮಗಳು ಜೀವನದುದ್ದಕ್ಕೂ ಮುಂದುವರೆದು ಅಶಕ್ತರಿಗೆ ನೆರವು ನೀಡುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆಯಬೇಕು ಎಂದರು. ಪ್ರಾರ್ಥನೆಯ ಬಳಿಕ ದೊಡ್ಡಿಬೀದಿಯಲ್ಲಿರುವ ಖಬ್ರಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬದ್ರಿಯಾ ಮಸೀದಿ ಅಧ್ಯಕ್ಷ ಸಿ.ಕೆ. ಇಬ್ರಾಹಿಂ, ಕಾರ್ಯದರ್ಶಿ ಶರೀಫ್‌, ಸಹಾಯಕ ಧರ್ಮಗುರು ಆರೀಫ್‌ನಹೀಮಿ, ಮುಖಂಡರಾದ ಯಾದಗರ್‌ ಇಬ್ರಾಹಿಂ, ಎಂ.ಎ. ಹಮಬ್ಬ, ಅಬ್ದುಲ್‌ಖಾದರ್‌, ಅಶ್ರಫ್‌, ಶರೀಫ್‌, ಫಿಶ್‌ಮೋಣು, ಕಿರುಗುಂದ ಅಬ್ಬಾಸ್‌, ರೆಹಮಾನ್, ಹಂಜಾಸಬ್ಬೇನಹಳ್ಳಿ ಮುಂತಾದವರಿದ್ದರು. ಇಂದು ಅನಾಫಿ ಪಂಗಡದ ವತಿಯಿಂದ ಈದ್‌ ಉಲ್‌ ಫಿತ್ರ್‌ ಹಬ್ಬ ಆಚರಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.