ADVERTISEMENT

ಸಕಾಲದಲ್ಲಿ ಕಾಳುಮೆಣಸು ಬಳ್ಳಿ ನಾಟಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2011, 10:15 IST
Last Updated 10 ಜುಲೈ 2011, 10:15 IST

ಕಾಳುಮೆಣಸಿನ ಬೆಲೆ ಕೆ.ಜಿ.ಗೆ 250 ರೂಪಾಯಿ ಆಸುಪಾಸು ತಲುಪಿದ ಹಿನ್ನೆಲೆಯಲ್ಲಿ ಮೆಣಸಿನ ಬಳ್ಳಿಗೂ ಬೇಡಿಕೆ ಹೆಚ್ಚಿದೆ. ನರ್ಸರಿಗಳಲ್ಲಿ ಸಿಗುವ ಚಿಗುರು ಬರಿಸಿದ ಬಳ್ಳಿಗಳಿಗೆ ಬುಟ್ಟಿಯೊಂದಕ್ಕೆ 7-8 ರೂಪಾಯಿವರೆಗೂ ಬೆಲೆ ಇದೆ.

 ಲಕ್ಷಾಂತರ ಬಳ್ಳಿಗಳನ್ನು ಹೀಗೆ ಮಾರುವ ನರ್ಸರಿಗಳದ್ದು ದೊಡ್ಡ ದಂದೆ. ಆದರೆ ಈ ಬಳ್ಳಿಗಳ ಪೈಕಿ ಹೆಚ್ಚಿನವು ತೋಟದಲ್ಲಿ ನೆಟ್ಟಾಗ ಸಾಯುವುದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟವೂ ಅಪಾರ. ಹಾಗಾದರೆ ಮೆಣಸಿನ ಬಳ್ಳಿಗಳ ಸಂಖ್ಯೆಯನ್ನು ತೋಟದಲ್ಲಿ ಹೆಚ್ಚಿಸಲು ಪರ್ಯಾಯ ಮಾರ್ಗ ಇಲ್ಲವೇ?

ಇದೆ, ಮೊದಲನೆಯದಾಗಿ ಮೆಣಸಿನ ಬಳ್ಳಿಯ ಬುಡದಲ್ಲಿ ಹಬ್ಬಿರುವ ಬಳ್ಳಿಗಳನ್ನು ಸಮೀಪದಲ್ಲೇ ಇರುವ ಮರಗಳವರೆಗೆ ಮಣ್ಣಿನೊಳಗೆ ಮುಚ್ಚಿ ಆನಂತರ ಆಯಾ ಮರಕ್ಕೆ ಹಬ್ಬಿಸುವುದು. ಈ ಕ್ರಮದಲ್ಲಿ ಬಳ್ಳಿ ಹಬ್ಬಿಸಬೇಕಾದಲ್ಲಿ ಮರಗಳು ಬಳ್ಳಿಯ ಸಮೀಪದಲ್ಲೇ ಇರಬೇಕು.

ಹೀಗೆ ಮೆಣಸಿನ ಬಳ್ಳಿಗಳನ್ನು ಪಕ್ಕದ ಮರಗಳಿಗೂ ಹಬ್ಬಿಸಿದರೆ ಬೆಳವಣಿಗೆ ವೇಗವಾಗಿ ಇರುತ್ತದೆ. ಎರಡೇ ವರ್ಷದಲ್ಲಿ ಫಸಲು ಸಿಗುತ್ತದೆ ಎಂಬುದು ಬೆಳೆಗಾರ ಕಚಗಾನೆ ರಂಗನಾಥ ಅವರ ಅನುಭವ.

ಇನ್ನು ಬಳ್ಳಿ ಕೊಯ್ದು ಸಂಗ್ರಹಿಸಿ ದೂರದ ಮರಗಳಿಗೆ ಹಬ್ಬಿಸುವ ಸಾಂಪ್ರದಾಯಿಕ ಕ್ರಮವೂ ಅಲ್ಲಲ್ಲಿ ಜಾರಿಯಲ್ಲಿದೆ. ಹದವಾದ ಮಳೆ ಬೀಳುವ ದಿನಗಳಲ್ಲಿ ಆರೋಗ್ಯವಂತ ಬಳ್ಳಿಗಳ ಬುಡದಲ್ಲಿ ಲಭ್ಯವಿರುವ ಬಳ್ಳಿಗಳನ್ನು  ಕೊಯ್ದು ಸಂಗ್ರಹಿಸಬೇಕು. (ಬಿಸಿಲಿನ ದಿನಗಳಲ್ಲಿ ಬಳ್ಳಿ ಕೊಯ್ದು ನೆಟ್ಟರೆ ಬಿಸಿಲಿಗೆ ಬಾಡಿ ಬೇರು ಹಿಡಿಯುವ ಸಾಧ್ಯತೆಗಳು ಕ್ಷೀಣಿಸುತ್ತದೆ).
 
ಬಳ್ಳಿ ಕೊಯ್ಯುವಾಗ ತಾಯಿ ಬಳ್ಳಿಯಲ್ಲಿ ಎರಡು ಗೆಣ್ಣು ಬಳ್ಳಿಯನ್ನು ಹಾಗೆಯೇ ಉಳಿಸಬೇಕು. ಹೀಗೆ ಮಾಡುವುದರಿಂದ ತಾಯಿ ಬಳ್ಳಿಯಲ್ಲಿ ರೋಗದ ಸಾಧ್ಯತೆ ಇದ್ದರೆ ಅದು ಹೊಸ ಗಿಡಕ್ಕೆ ವ್ಯಾಪಿಸದಂತೆ ತಡೆಯಬಹುದು. ಜತೆಗೆ ತಾಯಿ ಗಿಡಕ್ಕೆ ಅನಗತ್ಯ ಗಾಯ ತಡೆದು ಆ ಬಳ್ಳಿಗೂ ರೋಗ ಬಾರದಂತೆ ತಡೆಯಬಹುದು.

ಹೀಗೆ ಸಂಗ್ರಹಿಸಿದ ಬಳ್ಳಿಗಳನ್ನು 5- 6 ಅಡಿ ಉದ್ದಕ್ಕೆ ಕತ್ತರಿಸಿಕೊಳ್ಳಬೇಕು. ನಂತರ ನೆರಳಿನ ಮರದ ಬುಡದಿಂದ ಅರ್ಧ ಅಡಿ ದೂರದಲ್ಲಿ ಒಂದೂವರೆ ಅಡಿ ಉದ್ದ-ಆಳದ ಗುಣಿ ತೆಗೆಯಬೇಕು. ಅರ್ಧ ಅಡಿ ಆಳದಲ್ಲಿ ಮೂರ‌್ನಾಲ್ಕು ತುಂಡು ಬಳ್ಳಿಗಳನ್ನು 3-4 ಗೆಣ್ಣು ಮುಚ್ಚುವಂತೆ ಸುರುಳಿಯಾಗಿ ಅಥವಾ ನೆಲದಲ್ಲಿ ಮಲಗಿಸಿದಂತೆ ಇರಿಸಬೇಕು(ಬಳ್ಳಿಯನ್ನು ಗುಣಿಯಲ್ಲಿ ನೇರವಾಗಿ ನಿಲ್ಲಿಸಿದರೆ ಗುಣಿಯೊಳಗೆ ನೀರು ನಿಂತು ಕೊಳೆಯುವ ಸಾಧ್ಯತೆ ಇದೆ).

ನಂತರ ಬಳ್ಳಿ ಮೇಲೆ ತೆಳುವಾಗಿ ಮಣ್ಣು ಮುಚ್ಚಿ ಹದವಾಗಿ ತುಳಿಯಬೇಕು. ಬಳ್ಳಿಯ ಬುಡಕ್ಕೆ ದರಗನ್ನು ಮುಚ್ಚಿ ಗೂಟದ ಆಸರೆಯನ್ನೂ ನೀಡಬೇಕು. ನೆಲದ ಮೇಲೆ ಉಳಿಯುವ 3-4 ಅಡಿ ಉದ್ದದ ಬಳ್ಳಿಯನ್ನು ದಾರದ ಸಹಾಯದಿಂದ ಮರಕ್ಕೆ ಕಟ್ಟಬೇಕು. ಈ ಕ್ರಮದಲ್ಲಿ ನೆಟ್ಟ ಬಳ್ಳಿಯು 25-30 ದಿನದಲ್ಲಿ ಚಿಗುರೊಡೆಯುತ್ತದೆ.

ಹವಾಮಾನ ಪೂರಕವಾಗಿದ್ದರೆ ಶೇ. 90ರವರೆಗೂ ಬಳ್ಳಿಗಳು ಬೇರು ಬಿಡುತ್ತವೆ. ಮಳೆಗಾಲ ಮುಗಿದೊಡನೆ ಬಳ್ಳಿಗಳ ಬುಡಕ್ಕೆ ಇನ್ನಷ್ಟು ದರಗು ಏರಿಸಿ ಬಿಸಿಲಿನ ಧಗೆಯಿಂದ ರಕ್ಷಿಸಿದರೆ ಬಳ್ಳಿ ಸುರಕ್ಷಿತ.

ಮೂರು ವರ್ಷಗಳ ನಂತರ ಬಳ್ಳಿಯಲ್ಲಿ ಒಂದೆರಡು ಗೆರೆ ಕಾಣಿಸಿಕೊಳ್ಳುತ್ತಾ 4-5 ವರ್ಷದಲ್ಲೇ ಉತ್ತಮ ಫಸಲು ನೀಡಲಾರಂಭಿಸುತ್ತದೆ. ಈ ಪದ್ಧತಿಯ ಲಾಭವೆಂದರೆ ಬಳ್ಳಿಗೆ ಹಣ ನೀಡಬೇಕಾಗಿಲ್ಲ.

ಇನ್ನು ಕಾಫಿ ಗಿಡಗಳು ಕೂಡಿದ ಹಳೆಯ ತೋಟಗಳಲ್ಲಿ ಬುಟ್ಟಿ ಗಿಡಗಳು ಬದುಕಿದರೂ ನೆರಳಿನಿಂದಾಗಿ ಮರದ ಮೇಲಕ್ಕೆ ಏರುವುದಿಲ್ಲ. ಆದರೆ ಬಳ್ಳಿಗಳನ್ನು ಮೇಲೆ ತಿಳಿಸಿದ ಕ್ರಮದಲ್ಲಿ ಉದ್ದವಾಗಿ ನೆಟ್ಟರೆ ಕೂಡಿದ ತೋಟದಲ್ಲೂ ಬಳ್ಳಿಗಳನ್ನು ಬದುಕಿಸಬಹುದು ಎಂಬುದು ಅನುಭವಿ ಬೆಳೆಗಾರರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.