ADVERTISEMENT

ಸರ್ವೆ ಕಾರ್ಯ ತಡೆದು ದಲಿತ ಸಂಘಟನೆಗಳ ಪ್ರತಿಭಟನೆ

ಬಗೆಹರಿಯದ ಅಂಬೇಡ್ಕರ್‌ ಸಮುದಾಯ ಭವನ ಜಾಗ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 7:39 IST
Last Updated 13 ಜುಲೈ 2017, 7:39 IST

ಮೂಡಿಗೆರೆ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್ ಭವನ ನಿರ್ಮಾ ಣಕ್ಕೆ ಎದುರಾಗಿರುವ ಜಾಗದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಬುಧವಾರ ಸರ್ವೆ ಕಾರ್ಯಕ್ಕೆ ಬಂದಿದ್ದ ಅಧಿಕಾರಿ ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಸತಿಗಾಗಿ ಹೋರಾಟ ಸಮಿತಿ ಅಧ್ಯಕ್ಷ ಬಿ. ರುದ್ರಯ್ಯ ಮಾತನಾಡಿ, ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್‌ 200 ರಲ್ಲಿ 5 ಎಕರೆ ಪ್ರದೇಶವನ್ನು ಈ ಹಿಂದಿನ ಜಿಲ್ಲಾಧಿಕಾರಿಗಳು ಡಾ. ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ಮಂಜೂರು ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆ ಹೆಸರಿನಲ್ಲಿ ಖಾತೆ ಹಾಗೂ ಪಹಣಿಯಾಗಿದೆ. ಆದರೆ ಜಿಲ್ಲಾಡಳಿತವು ಭೂಮಿಯನ್ನು ಹಸ್ತಾಂತರಿಸದೇ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸರ್ವೆ ಕಾರ್ಯದ ವಿರುದ್ಧ ಕಳೆದ ಶುಕ್ರವಾರ ಬೃಹತ್‌ ಪ್ರತಿಭಟನೆ   ವೇಳೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಪ್ರತಿಭಟನಾಕಾರರೊಂದಿಗೆ ಮಾತನಾಡಿ,  ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸುವುದಾಗಿ  ಭರವಸೆ ನೀಡಿದ್ದರು. ಆದರೆ ದಲಿತ ಪರ ಸಂಘಟನೆಗಳ  ಪದಾಧಿಕಾರಿಗಳು ಅದೇ ದಿನ ಪೊಲೀಸ್‌ ವರಿಷ್ಠಾಧಿ ಕಾರಿ ಕಚೇರಿಗೆ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಬೇರೋಂದು ಸಭೆಯಲ್ಲಿ ಭಾಗವಹಿ ಸಿದ್ದರಿಂದ ಮತ್ತೆ ನಾಲ್ಕು ದಿನಗಳ ಕಾಲಾವಕಾಶ ನೀಡಿ, ದಲಿತ ಮುಖಂಡ ರನ್ನು ವಾಪಸ್‌ ಕಳುಹಿಸಲಾಗಿತ್ತು.

ADVERTISEMENT

ಆದರೆ ಬುಧವಾರ ಹಳೇಮೂಡಿಗೆರೆ ಗ್ರಾಮದ ಸರ್ವೆ ನಂಬರ್‌ 7 ರಲ್ಲಿ ನಿವೇಶನಕ್ಕಾಗಿ ಗುರುತಿಸಿದ್ದ ಪ್ರದೇಶದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಭವನ ಹಾಗೂ ಪರಿಶಿಷ್ಟ ಜಾತಿ ಮಹಿಳಾ ಹಾಸ್ಟೆಲ್‌ ನಿರ್ಮಿಸುವ ಸಲುವಾಗಿ ರಾಜಸ್ವ ನಿರೀಕ್ಷಕ ಬಸವೇಗೌಡ ಹಾಗೂ ಸರ್ವೆ ಅಧಿಕಾರಿಗಳು ಬಂದು ಜಾಗ ಗುರುತಿಸಿದ್ದು, ನಮಗೆ ಮಂಜೂರಾಗಿರುವ ಪ್ರದೇಶವನ್ನು ಬಿಟ್ಟು ಅರಣ್ಯದ ನಡುವೆ ಅಂಬೇಡ್ಕರ್‌ ಭವನ ನಿರ್ಮಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಪ್ರದೇಶ ದಲ್ಲಿ ಅಂಬೇಡ್ಕರ್‌ ಭವನ ಹಾಗೂ ಮಹಿಳಾ ಹಾಸ್ಟೆಲ್‌ ನಿರ್ಮಿಸಲು ಬಿಡುವು ದಿಲ್ಲ. ಜನರ ಹಿತಕ್ಕೆ ವಿರುದ್ಧವಾಗಿ ನಿರ್ಮಿ ಸಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ದಲಿತ ಮುಖಂಡ ಲೋಕವಳ್ಳಿ ರಮೇಶ್ ಮಾತನಾಡಿ, ತೋಟಗಾರಿಕಾ ಮಹಾವಿದ್ಯಾಲಯವು ತನಗೆ ಮಂಜೂರಾಗಿರುವ ಭೂಮಿಗಿಂತ ಹೆಚ್ಚು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಸರ್ವೆ ನಂಬರ್‌ 200 ರಲ್ಲಿನ 5 ಎಕರೆ  ಭೂಮಿಯನ್ನು ಸಹ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದರು.

ಸರ್ವೆ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸರ್ವೆ ಅಧಿಕಾರಿಗಳು ಸರ್ವೆ ನಡೆಸದೇ ವಾಪಾಸಾದರು. ಇಡೀ ದಿನ ಸ್ಥಳದಲ್ಲಿ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಬಡುಬಿಟ್ಟಿದ್ದರು.

ದಲಿತ ಮುಖಂಡರಾದ ಯು.ಬಿ. ಮಂಜಯ್ಯ, ಎಂ.ಎಸ್‌. ಅನಂತ್‌, ಕಿರುಗುಂದ ರಾಮಯ್ಯ, ಬೆಟ್ಟಗೆರೆ ಶಂಕರ್‌, ಸಬ್ಲಿ ದೇವರಾಜ್‌, ರಮೇಶ್‌, ಛಲವಾದಿ ಮಹಾಸಭಾ ಅಧ್ಯಕ್ಷ ರುದ್ರಯ್ಯ, ಹೊಸ್ಕೆರೆ ರಮೇಶ್‌, ಬಕ್ಕಿ ಮಂಜು, ಹೆಸ್ಗಲ್‌ ಗಿರೀಶ್‌, ಪಿ.ಕೆ. ನಾಗೇಶ್‌, ಸಾಗರ್‌ಕೋಗಿಲೆ, ಯು.ಬಿ. ನಾಗೇಶ್‌, ಚಂದ್ರಶೇಖರ್‌, ರವಿ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.