ADVERTISEMENT

ಹರಿಹರಪುರದಲ್ಲಿ ಹಾಲಿವುಡ್ ನಟಿಗೆ ಚಿಕಿತ್ಸೆ

ಆಯುರ್ವೇದ ಆಶ್ರಮದಲ್ಲಿ ಡಾ. ಆಶ್ವಿನ್ ಶಾಸ್ತ್ರಿ ಅವರಿಂದ ಇಸಾಬೆಲ್ ಲುಕಾಸ್‌ಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:44 IST
Last Updated 20 ಮಾರ್ಚ್ 2017, 5:44 IST
ಹರಿಹರಪುರದ ಆಯುರ್ವೇದ ಆಶ್ರಮದಲ್ಲಿ ಡಾ. ಆಶ್ವಿನ್ ಶಾಸ್ತ್ರಿ ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಹಾಲಿವುಡ್ ನಟಿ ಇಸಾಬೆಲ್ ಲುಕಾಸ್.
ಹರಿಹರಪುರದ ಆಯುರ್ವೇದ ಆಶ್ರಮದಲ್ಲಿ ಡಾ. ಆಶ್ವಿನ್ ಶಾಸ್ತ್ರಿ ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಹಾಲಿವುಡ್ ನಟಿ ಇಸಾಬೆಲ್ ಲುಕಾಸ್.   

ಕೊಪ್ಪ: ಹಾಲಿವುಡ್‌ನ ಪ್ರಖ್ಯಾತ ನಟಿ ಯೊಬ್ಬರು ಕಳೆದ ವಾರ ತಾಲ್ಲೂಕಿನ ಹರಿಹರಪುರಕ್ಕೆ ಬಂದು ಆಯುರ್ವೇದ ಆಶ್ರಮವೊಂದರಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ. 

ಆಕೆ ಆಸ್ಟ್ರೇಲಿಯಾ ದೇಶದ ಪ್ರಸಿದ್ಧ ನಟಿ ಇಸಾಬೆಲ್ ಲುಕಾಸ್. ಹಾಲಿವುಡ್‌ ನಲ್ಲಿ ಸಂಚಲನ ಮೂಡಿಸಿರುವ ‘ಟ್ರಾನ್ಸ್‌ ಫಾರ್ಮರ್ಸ್’ ಚಿತ್ರ ಮಾಲಿಕೆಯ ‘ರಿವೇಂಜ್ ಆಫ್ ದಿ ಫಾಲೆನ್’, ‘ದಿ ವೈಟಿಂಗ್ ಸಿಟಿ, ‘ಡೇ ಬ್ರೇಕರ್ಸ್’, ‘ಎ ಹಾರ್ಟ್‍ಬೀಟ್ ಅವೇ’ ‘ದಟ್ಸ್ ನಾಟ್ ಮೀ’, ‘ನೈಟ್ ಆಫ್ ಕಪ್ಸ್’ ಸೇರಿದಂತೆ 20ಕ್ಕೂ ಹೆಚ್ಚು ಚಲನಚಿತ್ರಗಳು, ‘ಹೋಮ್ ಅಂಡ್ ಅವೇ’ ‘ದಿ ಪೆಸಿಫಿಕ್’, ‘ಎಮ ರಾಲ್ಡ್ ಸಿಟಿ’ ಮುಂತಾದ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಇಸಾಬೆಲ್‌ಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.

ಚಿತ್ರೀಕರಣದ ಬಿಡುವಿಲ್ಲದ ಕೆಲಸದ ಒತ್ತಡದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ಒಳಗಾದ ಇಸಾಬೆಲ್, ಹರಿಹರಪುರದ ಡಾ. ಅಶ್ವಿನ್ ಶಾಸ್ತ್ರಿಯವರ ‘ಆರೋಗ್ಯ ನಿಕೇತನ ಆಯುರ್ವೇದ ಆಶ್ರಮ’ಕ್ಕೆ ದಾಖಲಾಗಿ 2 ವಾರ ಕಾಲ ಯೋಗ, ಪಂಚಕರ್ಮ ಇನ್ನಿತರ ಆಯುರ್ವೇದ ಚಿಕಿತ್ಸೆ ಪಡೆದು ಗುಣಮುಖರಾಗಿ ಸ್ವದೇಶಕ್ಕೆ ವಾಪಾ ಸಾಗಿದ್ದಾರೆ.

ಈಕೆ ಇಲ್ಲಿಗೆ ಭೇಟಿ ನೀಡುತ್ತಿರುವುದು ಇದು 3ನೇ ಬಾರಿ. ಈ ಮೊದಲು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಸ್ನೇಹಿತೆ, ಪಾಪ್ ಗಾಯಕಿ ಜೂಲಿಯಾ ಸ್ಟೋನ್ ಸಲಹೆ ಯಂತೆ ಇಲ್ಲಿಗೆ ಬಂದಿರುವ ಇಸಾಬೆಲ್ ಇಲ್ಲಿನ ಚಿಕಿತ್ಸಾ ಪದ್ಧತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಇತರ ಗ್ಲಾಮರಸ್ ತಾರೆಯರಿಗಿಂತ ಭಿನ್ನವಾಗಿರುವ ಇಸಾಬೆಲ್ ಲುಕಾಸ್ ಚಿತ್ರೋದ್ಯಮದ ಒತ್ತಡದ ನಡುವೆಯೂ ಜನಪರ ಕಾಳಜಿ ಹೊಂದಿದ್ದು, ಆಸ್ಟ್ರೇಲಿ ಯಾದಲ್ಲಿ ಮೀನುಗಾರಿಕೆ ನೆಪದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡಾಲ್ಫಿ ನ್‌ಳ ಹತ್ಯೆಯ ವಿರುದ್ಧ ಜನಜಾಗೃತಿ ಹೋರಾಟದಲ್ಲಿ ತೊಡಗಿದ್ದಾರೆ.

ರಾಷ್ಟ್ರೀಯ ಸ್ತನ ಕ್ಯಾನ್ಸರ್ ಫೌಂಡೇಷ ನ್‌ನ ವಕ್ತಾರೆಯಾಗಿ, ಮಹಿಳಾ ದೌರ್ಜನ್ಯ ತಡೆ, ಗ್ಲೋಬಲ್ ಗ್ರೀನ್ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿ ಕೊಂಡಿದ್ದಾರೆ. ಅಪ್ಪಟ ಸಸ್ಯಾಹಾರಿ ಯಾಗಿರುವ ಈಕೆ ‘ಸಸ್ಯಾಹಾರಿ ಮೋಹಕ ಸೆಲೆಬ್ರಿಟಿ’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.  

ADVERTISEMENT

ಪ್ರಚಾರದ ಹಪಾಹಪಿಯಿಲ್ಲದ ಇಸಾಬೆಲ್ ಲುಕಾಸ್ ಈ ಮೊದಲು ಎರಡು ಬಾರಿ ಹರಿಹರಪುರಕ್ಕೆ ಬಂದಾ ಗಲೂ ಆಯುರ್ವೇದ ಆಶ್ರಮದಲ್ಲಿ ಚಿಕಿತ್ಸೆ ಪಡೆದು, ಬಿಡುವಾದಾಗಲೆಲ್ಲಾ ಹರಿಹರ ಪುರ ಪೇಟೆ, ಶೃಂಗೇರಿ, ಕೊಪ್ಪಗಳಲ್ಲಿ ಸಾಮಾನ್ಯ ಮಹಿಳೆಯಂತೆ ಸುತ್ತಾಡಿ ಕೊಂಡಿದ್ದರು.

ಈ ಬಾರಿ ಆಕೆ ಬಂದಿರುವ ಮಾಹಿತಿ ಟಿ.ವಿ. ವಾಹಿನಿಗಳಿಗೆ ದೊರೆತು ದೊಡ್ಡಮಟ್ಟದ ಸುದ್ದಿಯಾಗಿದ್ದರಿಂದ ಸಾಮಾನ್ಯ ಮಹಿಳೆಯಾಗಿ ಕಂಡಿದ್ದ ಇಸಾಬೆಲ್ ಲುಕಾಸ್ ಅವರ ಅಸಾಮಾನ್ಯ ಪ್ರತಿಭೆಯ ಬಗ್ಗೆ ಸ್ಥಳೀಯ ಜನರಲ್ಲಿ ಅಭಿ ಮಾನ, ಬೆರಗು ಮೂಡುವಂತಾಯಿತು.

ಈ ನಡುವೆ ಹಾಲಿವುಡ್‌ನ ಜನಪ್ರಿಯ ಚಿತ್ರತಾರೆಗೆ ಚಿಕಿತ್ಸೆ ನೀಡಲು ಆಸ್ಟೇಲಿಯಾದಂತಹ ಮುಂದುವರೆದ ದೇಶದಲ್ಲಿ ಬೇಕಾದಷ್ಟು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿದ್ದರೂ ಭಾರತ ದೇಶಕ್ಕೆ ಬಂದು ಹರಿಹರಪುರದಂತಹ ಕುಗ್ರಾಮದಲ್ಲಿ ಚಿಕಿತ್ಸೆ ಪಡೆದಿರುವ ಘಟನೆ, ಇಲ್ಲಿ ಅಜ್ಞಾತವಾಗಿ ನಡೆಯುತ್ತಿದ್ದ ‘ಆರೋಗ್ಯ ನಿಕೇತನ ಆಯುರ್ವೇದ ಆಶ್ರಮ’ವನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ.

ಕಳೆದ 11 ವರ್ಷಗಳಿಂದ ಹರಿಹರ ಪುರ ಪೇಟೆಯಲ್ಲಿ ಆಯುರ್ವೇದ ಚಿಕಿತ್ಸಾ ಲಯ ನಡೆಸುತ್ತಿರುವ ಡಾ. ಅಶ್ವಿನ್ ಶಾಸ್ತ್ರಿ, ಕಾಲೇಜು ರಸ್ತೆಯಲ್ಲಿ 15 ಹಾಸಿಗೆ ಸಾಮರ್ಥ್ಯದ ‘ಆರೋಗ್ಯ ನಿಕೇತನ ಆಯುರ್ವೇದ ಆಶ್ರಮ’ ಆರಂಭಿಸಿದ್ದಾರೆ. ಅಲ್ಲಿ ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ.

ವಿಶೇಷವೆಂದರೆ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಬಹುಪಾಲು ವಿದೇಶೀಯರೇ. ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಬ್ರೆಜಿಲ್, ಜರ್ಮನಿ, ಕೆನಡಾ, ಜಪಾನ್, ಸ್ವಿಝರ್ಲೆಂಡ್, ಐರ್ಲೆಂಡ್, ಕೊರಿಯಾ, ಆಸ್ಟ್ರಿಯಾ ಇನ್ನಿತರ ಹಲವಾರು ದೇಶಗಳ ಜನ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಡಾ. ಕೆನೆತ್ ಆಲೆನ್ ಸೇರಿದಂತೆ 6 ಮಂದಿ ವಿದೇಶಿಯರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-ಜಿನೇಶ್ ಇರ್ವತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.