ADVERTISEMENT

‘ಹುಲಿ ಬೇಟೆಗೆ ಹೊಂಚು’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:29 IST
Last Updated 20 ಏಪ್ರಿಲ್ 2017, 7:29 IST

ಚಿಕ್ಕಮಗಳೂರು: ‘ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಬೇಟೆಗೆ ಸಂಚು ರೂಪಿಸುತ್ತಿರುವ ಉತ್ತರ ಭಾರತದ ಬೇಟೆಗಾರರು ಸದ್ದಿಲ್ಲದೆ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಹುಲಿಗಳ ಬೇಟೆ ಮತ್ತು ಅವುಗಳ ಚರ್ಮ, ಉಗುರು, ಮೂಳೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳ್ಳಸಾಗಣೆ ಮಾಡಲು ಬೇಟೆಗಾರರು ಸಿದ್ಧತೆ ನಡೆಸುತ್ತಿರುವ ಶಂಕೆ ಇದೆ. ಮಧ್ಯಪ್ರದೇಶದ ಮೂಲದ ಹುಲಿ ಹಂತಕರ ತಂಡಗಳಾದ ‘ಕತನಿ’ ಮತ್ತು ‘ಬವಹಾರಿ’ ಸದಸ್ಯರು ಆಯುರ್ವೇದ ಔಷಧ ಮಾರಟ, ಪ್ಲಾಸ್ಟಿಕ್ ಹೂವುಗಳ ಮಾರಟ, ಜೇನು ಅಳಿಸಿ ತುಪ್ಪ ಮಾರಾಟ ಮಾಡುವ ಸೋಗಿನಲ್ಲಿ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಇವರು ವನ್ಯಜೀವಿಗಳ ಪಾಲಿಗೆ ಕಂಟಕಪ್ರಾಯರಾಗಿದ್ದಾರೆ ಎಂದು ವನ್ಯಜೀವಿ ಕಾರ್ಯಕರ್ತರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘ಮೂರು ತಂಡಗಳಾಗಿ ಕಾರ್ಯ ನಿರ್ವಹಿಸುವ ಈ ಬೇಟೆಗಾರರು ಗ್ರಾಮೀಣ ಭಾಗದಲ್ಲಿ ಬಿಡಾರ ಹೂಡಿ ದ್ದಾರೆ. ಹುಲಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದು ತಂಡ ನಗರದಲ್ಲಿ ಬೀಡು  ಬಿಟ್ಟರೆ ಇನ್ನೊಂದು ತಂಡ ಇವರಿಗೆ ಬೇಕಾದ ನೆರವು ನೀಡುತ್ತಾ, ಸಿಕ್ಕಿಬಿದ್ದಾಗ ಕಾನೂನು ನೆರವು ಕೂಡುವ ಹೊಣೆ ಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಗರದ ಬೆಲ್ಟ್‌ರಸ್ತೆಯ ದೂರಸಂಪರ್ಕ ನಿಗಮದ ಕಟ್ಟಡಗಳಲ್ಲಿ 50ಕ್ಕೂ ಹೆಚ್ಚು ಜೇನು ಗೂಡುಗಳಿದ್ದವು. ಅವುಗಳಿಂದ ತುಪ್ಪ ಇಳಿಸಲು ಉತ್ತರ  ಭಾರತದ ಮೂಲದ ಜನರು ಬುಧವಾರ ಬೆಳಿಗ್ಗೆ ಕಾರ್ಯ ಪ್ರವೃತರಾಗಿದ್ದರು. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಏಕಾಏಕಿ 50ಕ್ಕೂ ಹೆಚ್ಚು ಜೇನು ಗೂಡುಗಳನ್ನು ಬೆಂಕಿ ಹೊಗೆಹಾಕಿ ನಾಶಮಾಡಲಾಗಿದೆ. ಸಾರ್ವಜನಿಕರಿಗೆ ಜೇನುತುಪ್ಪ ಮಾರಾಟ ಮಾಡುತ್ತಿದ್ದಾಗ ವನ್ಯಜೀವಿ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಅವರನ್ನು ಚಿಕ್ಕಮಗಳೂರು ವಲಯದ ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಿಕ್ಕಿಬಿದ್ದಿರುವ ವ್ಯಕ್ತಿಗಳು ಉತ್ತರಭಾರತದ ನಿವಾಸಿಗಳು. ಆದರೆ, ಆಂಧ್ರಪ್ರದೇಶದ ವಾಸಿಗಳೆಂದು ಮತದಾರರ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿ ತೋರಿಸಿದ್ದಾರೆ. ಇದರಲ್ಲಿ ಕೆಲವರು ಯಾವುದೇ ಗುರುತಿನ ಚೀಟಿ ಹೊಂದಿಲ್ಲದಿರುವುದು ಬೆಳಕಿಗೆ ಬಂದಿದೆ. ಯಾವುದೇ ಮಾಹಿತಿ ಸರಿಯಾಗಿ ನೀಡುತ್ತಿಲ್ಲ’ ಎಂದು ತಿಳಿಸಿದ್ದಾರೆ.

‘ಆಲ್ದೂರು ಸಂತೆ ಮೈದಾನದಲ್ಲಿ ಇವರಿಗೆ ಸೇರಿದ 2 ಬಿಡಾರಗಳು ಕಂಡುಬಂದಿವೆ. ಆಲ್ದೂರು ವಲಯದ ಅರಣ್ಯ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದು ತಂಡ ನಗರದ ಬೈಪಾಸ್ ರಸ್ತೆಯಲ್ಲಿ ಬಿಡಾರ ಹೂಡಿದೆ. ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಇವರ ಮೇಲೆ ತೀವ್ರ ನಿಗಾ ಇಟ್ಟು, ಹೆಚ್ಚಿನ ತನಿಖೆ ನಡೆಸಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.