ADVERTISEMENT

18ರಂದು ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್‌ ಗ್ರಾಮವಾಸ್ತವ್ಯ

ಕಡೂರು ತಾಲ್ಲೂಕಿನ ಕಲ್ಕೆರೆ ಗೊಲ್ಲರಹಟ್ಟಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 8:58 IST
Last Updated 16 ನವೆಂಬರ್ 2017, 8:58 IST
18ರಂದು ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್‌ ಗ್ರಾಮವಾಸ್ತವ್ಯ
18ರಂದು ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್‌ ಗ್ರಾಮವಾಸ್ತವ್ಯ   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಕಲ್ಕೆರೆ ಗೊಲ್ಲರಹಟ್ಟಿಯ ಇದೇ 18ರಂದು ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಗ್ರಾಮವಾಸ್ತವ್ಯ ಹೂಡುವರು ಎಂದು ಕಾಂಗ್ರೆಸ್‌ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವನಮಾಲ ದೇವರಾಜ್‌ ಇಲ್ಲಿ ಬುಧವಾರ ತಿಳಿಸಿದರು.

‘ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗ್ರಾಮದಲ್ಲಿ 19ರಂದು ಇಂದಿರಾ ನಮನ ಹಮ್ಮಿಕೊಳ್ಳಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಕಾರ್ಯಕ್ರಮದ ನೇತೃತ್ವ ವಹಿಸುವರು. 100 ದೀಪಗಳನ್ನು ಹಚ್ಚಿ ನಮನ ಸಲ್ಲಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲಕ್ಷ್ಮಿ ಹೆಬ್ಬಾಳ್ಕರ್‌ ಅವರು 18ರಂದು ಸಂಜೆ 4 ಗಂಟೆ ವೇಳೆಗೆ ಕಡೂರಿಗೆ ಬರುವರು. ಸಂಜೆ 6 ಗಂಟೆ ಹೊತ್ತಿಗೆ ಕಲ್ಕೆರೆ ಗೊಲ್ಲರಹಟ್ಟಿಗೆ ತಲುಪುವರು. ಕಡೂರು ತಾಲ್ಲೂಕಿನಲ್ಲಿ ಸುಮಾರು 24 ಗೊಲ್ಲರಹಟ್ಟಿಗಳಿದ್ದು, ಗೊಲ್ಲರ ಸಮುದಾಯ ಜನಸಂಖ್ಯೆ ಸುಮಾರು 12 ಸಾವಿರ ಇದೆ. ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಅನಾದಿಕಾಲದಿಂದಲೂ ಮೌಢ್ಯ, ಗೊಡ್ಡು ಸಂಪ್ರದಾಯಗಳು ಸಮುದಾಯದಲ್ಲಿ ಆಚರಣೆಯಲ್ಲಿವೆ. ಅನಿಷ್ಠ ಪದ್ಧತಿಗಳನ್ನು ಕೈಬಿಡುವಂತೆ ಲಕ್ಷ್ಮಿ ಅವರು ಮನವರಿಕೆ ಮಾಡುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಮಹಿಳೆ ಋತುಮತಿಯಾದಾಗ ಮನೆಯಿಂದ ಹೊರಗೆ 11 ದಿನ ಗುಡಿಸಲಿನಲ್ಲಿ ಇಡುವುದು, ಹೆರಿಗೆ ನಂತರ ಬಾಣಂತಿಯನ್ನು 3 ದಿನ ಮನೆಯಿಂದ ಹೊರಗಡೆ ಇಡುವ ಪದ್ಧತಿಗಳು ಸಮುದಾಯದಲ್ಲಿ ಜೀವಂತವಾಗಿವೆ. ಇಂಥ ಪದ್ಧತಿಗಳನ್ನು ಕೈಬಿಡಬೇಕು ಎಂದು ಸಮುದಾಯದವರಿಗೆ ಲಕ್ಷ್ಮಿ ಮನವರಿಕೆ ಮಾಡುವರು’ ಎಂದರು.

‘ಗೊಲ್ಲರ ಸಮುದಾಯದವರ ಮನೆಯಲ್ಲಿ ಸಿದ್ಧಪಡಿಸಿದ ಮುದ್ದೆ ಅಥವಾ ರೊಟ್ಟಿಯನ್ನು ಲಕ್ಮಿ ಅವರು ಊಟ ಮಾಡುವರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆಯಿಂದ ಲಕ್ಷ್ಮಿ ಗ್ರಾಮವಾಸ್ತವ್ಯ ಆರಂಭಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಗ್ರಾಮವಾಸ್ತವ್ಯ ಮಾಡುವರು’ ಎಂದು ಹೇಳಿದರು.

ಪಕ್ಷದ ಮುಖಂಡರಾದ ಶಿವಾನಂದಸ್ವಾಮಿ, ರೇಣುಕಾ, ನಗೀನಾ, ಯಶೋಧಾ, ಲೋಲಾಕ್ಷಿ ಬಾಯಿ, ಭಾರತಿ, ಚೇತನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.