ADVERTISEMENT

23ರಿಂದ ಕೋಟೆ ಮಾರಿಕಾಂಬ ಜಾತ್ರೆ

ಕೆ.ವಿ.ನಾಗರಾಜ್
Published 21 ಮೇ 2017, 8:25 IST
Last Updated 21 ಮೇ 2017, 8:25 IST

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕೋಟೆ ಮಾರಿಕಾಂಬ ಜಾತ್ರೆಯು ಅನಾದಿ ಕಾಲದಿಂದಲೂ ಆಚರಣೆಯಲ್ಲಿದ್ದು  ಐತಿಹಾಸಿಕ ಪ್ರಾಮುಖ್ಯತೆ ಪಡೆದು ಕೊಂಡಿದೆ.

1915ಕ್ಕೂ ಮೊದಲು ಹಸಿದು ಬಂದವರಿಗೆ ಎಡೆ ಹಾಕುತ್ತಿದ್ದ ಸ್ಥಳವಾದ್ದರಿಂದ ‘ಎಡೆಹಳ್ಳಿ ’ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ತಾಲ್ಲೂಕು ಕೇಂದ್ರವನ್ನು ವಿಜಯನಗರ, ಕೆಳದಿ ಇಕ್ಕೇರಿ ಅರಸರು ಹಾಗೂ ಚಿತ್ರದುರ್ಗದ ಪಾಳೇಗಾರರು ಆಳ್ವಿಕೆ ನಡೆಸಿದ್ದರು. ಎಡೆಹಳ್ಳಿ ಈ ಅರಸರ ರಾಜ್ಯ ಎಲ್ಲೆಯಾಗಿದ್ದರಿಂದ ಇಲ್ಲಿ ಕೋಟೆಕಟ್ಟಿ ಸೈನಿಕ ನೆಲೆ ಸ್ಥಾಪಿಸಿದ್ದರು.

ಅಲ್ಲದೇ ಈ ಅರಸರ ಕಾಲದಲ್ಲಿಕೋಟೆ ಒಳಗೆ ಇಲ್ಲವೇ ಹೊರ ಭಾಗದಲ್ಲಿ  ಕೋಟೆ ರಕ್ಷಣೆಗಾಗಿ ಮಾರಮ್ಮನಗುಡಿ , ಚೌಡಮ್ಮನ ಗುಡಿ ಮತ್ತು ಸೈನಿಕ ರಿಗಾಗಿ ತಾಲಿಮು ನಡೆಸಲು ಆಂಜನೇಯ ದೇವಸ್ಥಾನಗಳನ್ನು ನಿರ್ಮಿಸಿ ಪೂಜಿಸುವುದು ಸಂಪ್ರದಾಯ. ಅದೇ ರೀತಿ ಇಲ್ಲಿಯೂ ಸಹ ಅಂದಿನ ಕಾಲದಲ್ಲಿಯೇ ಸ್ಥಾಪಿತವಾದ ಈ ಗುಡಿಗಳು ಇಂದಿಗೂ ಸಹ ಕಾಲಕಾಲಕ್ಕೆ ಜಾತ್ರೆ ನೆರವೇರಿಸಿ ಕೊಳ್ಳುತ್ತಾ ಪ್ರಸಿದ್ಧಿ ಪಡೆದಿದೆ. ಮಾರಿ ಜಾತ್ರೆಗೆ 15–20 ದಿನ ಮುಂಚಿತವಾಗಿ ಜಾತ್ರೋತ್ಸವ ಸಮಿತಿಯು ನಡೆಸುವ ಧ್ವಜಾರೋಹಣದೊಂದಿಗೆ ಜಾತ್ರೆಯ ವಿದಿ ವಿಧಾನಗಳು ಪ್ರಾರಂಭವಾಗುತ್ತವೆ.

ADVERTISEMENT

ಪುರಾಣಗಳಲ್ಲಿ ಮಾರಮ್ಮನ ಅವತಾರದ ಬಗ್ಗೆ ಎಲ್ಲಾ ವರ್ಗದವರು ನಂಬಿರುವ ದಂತಕತೆಯ ಧಾರ್ಮಿಕ ಹಿನ್ನೆಲೆ ಇದ್ದು , ಅದರಂತೆ ಇಲ್ಲಿಯೂ ಸಹ ಪಟ್ಟಣದ ಸುಂಕದಕಟ್ಟೆಯ ಹತ್ತಿರ ಜಾತ್ರೆಯ ಪ್ರಾರಂಭಕ್ಕೆ ಮೊದಲು ಕಾಡಿನಿಂದ ತಂದ ಎತ್ತೈಗದ ಮರದಲ್ಲಿ ವಿಶ್ವಕರ್ಮಿಗಳು ಬ್ರಾಹ್ಮಣರ ಕನ್ಯೆಯ ಪ್ರತೀಕವಾದ ದೇವಿಯ ಪ್ರತಿಮೆಯನ್ನು ನಿರ್ಮಿಸಿ ಶಾಸ್ತ್ರೋಸ್ತವಾಗಿ ಊರಿನವರ ಸುಪರ್ದಿಗೆ  ಬಿಟ್ಟುಕೊಡುತ್ತಾರೆ. ಹೀಗೆ ಮೆರವಣಿಗೆಯಲ್ಲಿ ತಂದ ದೇವಿಯ ವಿಗ್ರಹವನ್ನು ಬ್ರಾಹ್ಮಣರಿರುವ ಅಗ್ರಹಾರ ದಲ್ಲಿ ಕುಳ್ಳರಿಸಿ ತವರು ಮನೆಯಲ್ಲಿ ಮಡಲಕ್ಕಿ ಹಾಕಿ ಪೂಜೆ ಕಾರ್ಯನೆರವೇರಿಸಿ ಅಲ್ಲಿಂದ ರಾತ್ರಿ ಬೀಳ್ಕೊಡುತ್ತಾರೆ.

ಈ ರೀತಿಯಲ್ಲಿ ಮೆರವಣಿಗೆಯಲ್ಲಿ ಹೊರಟ ದೇವಿ ಪಟ್ಟಣದ ಪಟ್ಟಣ ಪಂಚಾಯಿತಿಯ ಎದುರಿಗೆ ಬಂದಾಗ ತೆರೆದ ನಾಲಿಗೆ ಇಡುತ್ತಾರೆ. ಆಗ ದೇವಿ ಸೌಮ್ಯ ಸ್ವಭಾವದಿಂದ ರೌದ್ರಾವತಾರ ತಾಳಿದಂತೆ ಕಾಣಿಸುತ್ತಾಳೆ. ಇಲ್ಲಿಂದ ಬ್ರಾಹ್ಮಣರ ಕನ್ಯೆಯಾಗಿದ್ದ ದೇವಿ ಮಾರಮ್ಮಳಾಗಿ ಬದಲಾಗುತ್ತಾಳೆ. ಈ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಮೊದಲಿನಿಂದಲೂ ನಡೆದು ಕೊಂಡು ಬಂದಿದೆ.

ನಂತರ ಅಸಾದಿಯ ಮೊದಲಿಕೆಯೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆಯೂ ಪ್ರವಾಸಿ ಮಂದಿರದ ಬಳಿಯಿರುವ ಮಾರಿಗದ್ದಿಗೆಗೆ ತಲುಪುವ ವೇಳೆಗೆ ಬೆಳಗಿನ ಜಾವವಾಗಿರುತ್ತದೆ. ಈ ಹಂತದಲ್ಲಿ ವಿಶೇಷವಾದ ಪೂಜೆ ನೆರವೇರಿಸಿ ಚರು ಅನ್ನವನ್ನು ಊರಿನ ಸುತ್ತಾ ಹಾಕುತ್ತಾರೆ. ಇದರಿಂದ ದೇವಿಯು ಊರಿನ ರಕ್ಷಣೆ ಮಾಡುತ್ತಾಳೆಂಬುದು ಹಿರಿಯರ ನಂಬಿಕೆ.

ಎರಡನೇ ದಿನ ಮಾರಮ್ಮ ದೇವಿಗೆ ಗದ್ದುಗೆಯಲ್ಲಿ ಕುಳ್ಳರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೂರನೇ ದಿನ ಸಂಜೆ ಮಾರಮ್ಮ ದೇವಿಯನ್ನು ಗದ್ದುಗೆಯಿಂದ  ಹೊರಡಿಸಿ ನಾಡದೇವತೆಗಳಾದ ದಾನಿವಾಸ ದುರ್ಗಾಂಬ, ಹಳೇಪೇಟೆ ಗುತ್ತ್ಯಮ್ಮ, ಮೇದರ ಬೀದಿ ಅಂತರಘಟ್ಟಮ್ಮ ದೇವತೆ ಗಳೊಂದಿಗೆ ಚೌಡಮ್ಮಗುಡಿಯವರೆಗೆ ತಂದು ಅಲ್ಲಿ ಪೂಜೆ ಸಲ್ಲಿಸಿ ಮಾರಮ್ಮನನ್ನು ಬೀಳ್ಕೊಟ್ಟು  ಈ ಎಲ್ಲ ಗ್ರಾಮ ದೇವತೆಗಳು ತಮ್ಮ ಸ್ವಸ್ಥಾನಕ್ಕೆ ವಾಪಸ್ಸಾಗುತ್ತವೆ.

ಇವರೆಲ್ಲರಿಂದ ಬೀಳ್ಕೊಂಡು ಮುಂದೆ ಸಾಗಿದ ಮಾರಮ್ಮ ವಿಗ್ರಹವನ್ನು ಹಳೇ ತರಿಕೇರೆ ರಸ್ತೆಯಲ್ಲಿ ಗುರುತಿಸಿರುವ ಜಾಗದಲ್ಲಿ ಬಿಟ್ಟುಬರುತ್ತಾರೆ.ಈ ರೀತಿ ಐತಿಹಾಸಿಕ ಹಿನ್ನೆಲೆಯಲ್ಲಿರುವ ಮಾರಿಕಾಂಬ ಜಾತ್ರೆಯು ಇದೇ 23ರಿಂದ 25ರವರೆಗೆ ನಡೆಯುತ್ತದೆ. ಈ ಜಾತ್ರೆಗೆ ವೈವಾಹಿಕ ಹಾಗೂ ವ್ಯವಹಾರಿಕ ಉದ್ದೇಶಗಳಿಗಾಗಿ ಬೇರೆಡೆ ನೆಲೆಸಿರುವವರು. ಮಾರಿ ವಿಗ್ರಹ ತಯಾರಿಸುವ ಮರವನ್ನು ತರಲು ಕಾಡಿಗೆ ಹೋಗುವ ಸಂದರ್ಭದಲ್ಲಿ ಯಾರು ಊರಿನಲ್ಲಿರುತ್ತಾರೊ ಅವರೆಲ್ಲರೂ ತಪ್ಪದೇ ಬರುವುದು ವಿಶೇಷ. ಅಲ್ಲದೇ ಮೇಲ್ವರ್ಗದಿಂದ ಹಿಡಿದು ಕೆಳ ವರ್ಗದ ವರೆಲ್ಲರೂ ಹಾಗೂ ಸರ್ವಧರ್ಮಿಯರು ಸೇರಿ ಆಚರಿಸುವ ಜಾತ್ರೆಯಾಗಿದ್ದು  ಧಾರ್ಮಿಕ ಸಮನ್ವಯತೆಯನ್ನು ಕಾಣಬಹುದಾಗಿದೆ.

ಕಾರ್ಯಕ್ರಮಗಳ ವಿವರ
ಇದೇ 23ರಂದು ಬೆಳಿಗ್ಗೆ ಗದ್ದುಗೆ ಪೂಜೆ ನಂತರ ಕಳಸದ ಮೆರ ವಣಿಗೆ. ಬೆಳಿಗ್ಗೆ 10.45 ರಿಂದ 11ಕ್ಕೆ  ದೃಷ್ಟಿ ಬೊಟ್ಟು ಇಡುವುದು. ಜ್ವಾಲೋತ್ಪತ್ತಿ, ಸ್ಥಪತಿ ಪೂಜೆ. 11.30ರಿಂದ ಸುಂಕದ ಕಟ್ಟೆ ಯಿಂದ ಅಗ್ರಹಾರದವರೆಗೆ ವಾದ್ಯ ಘೋಷಗಳೊಂದಿಗೆ ದೇವಿಯ ಮೆರವಣಿಗೆ. ನಂತರ ಅಗ್ರಹಾರದ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ.

ರಾತ್ರಿ 10ರ ನಂತರ ಗ್ರಾಮ ದೇವತೆಗಳೊಂದಿಗೆ ಅಗ್ರಹಾರದ ಗದ್ದುಗೆಯಿಂದ ದೇವಿಯನ್ನು ಮೆರವಣಿಗೆಯ ಮೂಲಕ  ತಂದು ಪ್ರವಾಸಿ ಮಂದಿರದ ಸಮೀಪದ ಮಾರಿಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ. 24ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ. ಸಂಜೆ 5ಕ್ಕೆ  ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ.

25ರಂದು ದೇವಿಗೆ ವಿಶೇಷ ಪೂಜೆ. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಆಟೋಟಸ್ಪರ್ಧೆ, ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ  ದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಯುವುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.