ADVERTISEMENT

29ರಂದು ಜಿಗ್ನೇಶ್‌ ಮೇವಾನಿ ಚಿಕ್ಕಮಗಳೂರಿಗೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:11 IST
Last Updated 27 ಡಿಸೆಂಬರ್ 2017, 9:11 IST

ಚಿಕ್ಕಮಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ಇದೇ 28 ಮತ್ತು 29ರಂದು ನಗರದ ಜಿಲ್ಲಾ ಆಟದ ಮೈದಾನದಲ್ಲಿ ‘ಸೌಹಾರ್ದ ಮಂಟಪ: ಹಿಂದಣ ನೋಟ– ಮುಂದಣ ಹೆಜ್ಜೆ’ ರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಇಲ್ಲಿ ಮಂಗಳವಾರ ತಿಳಿಸಿದರು.

28ರಂದು ಬೆಳಿಗ್ಗೆ 11.30ಕ್ಕೆ ನುಡಿ ನಮನ ನಡೆಯಲಿದೆ. 15 ವರ್ಷಗಳಲ್ಲಿ ಸೌಹಾರ್ದಕ್ಕಾಗಿ ದುಡಿದು ಮಡಿದ ವೇದಿಕೆಯ ಸಂಗಾತಿಗಳಿಗೆ ನುಡಿನಮನ ಸಲ್ಲಿಸಲಾಗುವುದು. ಮಧ್ಯಾಹ್ನ 12.30ರಿಂದ 3.30ರವರೆಗೆ ಬಾಬಾಬುಡನ್‌ಗಿರಿ ದರ್ಶನಕ್ಕೆ ತೆರಳಲಾಗುವುದು. ಸಂಜೆ 4 ಗಂಟೆಗೆ ಸಾಕ್ಷ್ಯಚಿತ್ರ ಬಿಡುಗಡೆ, ಪ್ರದರ್ಶನ ಆಯೋಜಿಸಲಾಗಿದೆ. ಲೇಖಕಿ ಬಿ.ಟಿ.ಲಲಿತಾ ನಾಯಕ್‌, ರೈತ ಮುಖಂಡ ಕಡಿದಾಳ್‌ ಶಾಮಣ್ಣ ಭಾವಹಿಸುವರು. ಸಂಜೆ 6 ಗಂಟೆಗೆ ಸೌಹಾರ್ದ ಸಂಜೆ ಏರ್ಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

29ರಂದು ಬೆಳಿಗ್ಗೆ 10 ಗಂಟೆಗೆ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಮಾವೇಶ ಉದ್ಘಾಟಿಸುವರು. ‘ಹಿಂದಣ ಹೆಜ್ಜೆ’ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ 2.30ಕ್ಕೆ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದೆ. ಗುಜರಾತ್‌ನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಸಮಾರೋಪ ಭಾಷಣ ಮಾಡುವರು. ಮುಂಬೈನ ಮಾನವಹಕ್ಕು ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್‌ ಆಶಯ ನುಡಿಗಳನ್ನಾಡುವರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.