ADVERTISEMENT

5 ಆರೋಪಿಗಳಿಗೆ ಜೈಲು ಶಿಕ್ಷೆ

ಗೋವು ಕಳ್ಳಸಾಗಣೆ– ಪೊಲೀಸರ ಕೊಲೆ ಯತ್ನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:01 IST
Last Updated 18 ಫೆಬ್ರುವರಿ 2017, 7:01 IST
ಚಿಕ್ಕಮಗಳೂರು: ದನಗಳನ್ನು ಕದ್ದು ಸಾಗಿಸುತ್ತಿದ್ದಾಗ ತಡೆಯಲು ಮುಂದಾದ ಪೊಲೀಸರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ 5 ಆರೋಪಿಗಳಿಗೆ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶುಕ್ರವಾರ  2 ವರ್ಷ ಕಠಿಣ ಶಿಕ್ಷೆ ಮತ್ತು ತಲಾ ₹ 5 ಸಾವಿರ ದಂಡ ವಿಧಿಸಿದೆ.
 
ಮೂಡುಬಿದರೆ ವಾಸಿಗಳಾದ ಅಬ್ದುಲ್‌ ರಜಾಕ್‌, ಶರೀಫ್‌, ಅಬ್ದುಲ್‌ ರಶೀದ್‌, ಅಲ್ಫ್‌, ಮಹಮದ್‌ ಆರಿಶ್‌ ಶಿಕ್ಷೆಗೆ ಗುರಿಯಾದ ಆರೋಪಿಗಳು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹುಸೇನ್‌ ಪ್ರಕರಣ ಬೇರ್ಪಡಿಸಲಾಗಿದೆ.
 
ಆರೋಪಿಗಳು 2014ರ ಸೆಪ್ಟೆಂಬರ್‌ 10ರಂದು ಕೊಪ್ಪದ ಅಲ್ಲಮಕ್ಕಿ ಗ್ರಾಮದ ಗುತ್ಯಮ್ಮ ದೇವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿ ಮಲಗಿದ್ದ 3 ಜಾನುವಾರುಗಳನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿ ಹೊಸ ಬೊಲೆರೊ ಪಿಕಪ್‌ ವಾಹನದಲ್ಲಿ ಸಾಗಿಸುತ್ತಿದ್ದರು. ವಿಷಯ ತಿಳಿದು ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದರು. ಜಯಪುರ ಮತ್ತು ಬಾಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಕಾಯುತ್ತಿದ್ದಾಗ ಆರೋಪಿಗಳು ವಾಹನ ನಿಲ್ಲಿಸದೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಕಸಾಯಿ ಖಾನೆಗೆ ಸಾಗಿಸಲಾಗದೆ ಆರೋಪಿಗಳು ಬಾಳೂರಿನ ಕಾಳಿಕಟ್ಟೆ ಬಳಿ ಪಿಕಪ್‌ನಿಂದ 3 ಜಾನುವಾರುಗಳನ್ನು ರಸ್ತೆ ಮೇಲೆ ಬಿಸಾಡಿದ್ದು, ಇದರಲ್ಲಿ 2 ಜಾನುವಾರು ಮೃತಪಟ್ಟು, ಒಂದು ತೀವ್ರ ಗಾಯಗೊಂಡಿತ್ತು. 
 
ನಂತರ ಕಳಸದ ಕೈಮರ ಚೆಕ್‌ಪೋಸ್ಟ್‌ ಬಳಿ ರಸ್ತೆಗೆ ಸಿಬ್ಬಂದಿ ಕಲ್ಲು, ಬ್ಯಾರಿಕೇಡ್‌ ಅಡ್ಡ ಇಟ್ಟು ತಡೆಯಲು ಮುಂದಾದಾಗ ವಾಹನ ವಾಪಸ್‌ ತಿರುಗಿಸಿಕೊಂಡು ಹೋಗಿದ್ದರು. ಕಳಸ ಪೊಲೀಸ್‌ ಠಾಣೆ ಸರಹದ್ದಿನ ಕಲ್ಲಮಕ್ಕಿಯ ಜೇಮ್ಸ್‌ ಅವರ ಮನೆ ಎದುರು ಕೊಟ್ಟಿಗೆಹಾರ –ಕಳಸ ರಸ್ತೆಯಲ್ಲಿ ಕಳಸ ಸಬ್‌ಇನ್‌ಸ್ಪೆಕ್ಟರ್‌ ರಸ್ತೆಗೆ ಜೀಪು ಅಡ್ಡ ನಿಲ್ಲಿಸಿ ಆರೋಪಿಗಳನ್ನು ಅಡ್ಡಗಟ್ಟಿದಾಗ, ಆರೋಪಿಗಳು ಪೊಲೀಸರ ಮೇಲೆ ವಾಹನ ನುಗ್ಗಿಸಿ ಕೊಲೆ ಮಾಡಲು ಯತ್ನಿಸಿದ್ದರು. ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಆರೋಪಿಗಳನ್ನು ಬಂಧಿಸಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
 
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಡಿ.ಕಂಬೇಗೌಡ ಅವರು 5 ಮಂದಿ ಆರೋಪಿಗಳಿಗೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಯತ್ನಿಸಿದ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ, ತಲಾ ₹5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾಧಾ ಶಿಕ್ಷೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಾಧಕ್ಕೆ ತಲಾ ₹5 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎ.ಎಂ.ಸುರೇಶ್‌ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.